ನಗರದ ನಾಯಕ ಸಮುದಾಯ ಭವನದಲ್ಲಿ ಬಿಜೆಪಿ ಬೆಂಬಲಿತ ನಾಯಕ ಸಮುದಾಯದ ಕಾರ್ಯಕರ್ತರು ಚಿಕ್ಕರಂಗನಾಯಕ ನೇತೃತ್ವದಲ್ಲಿ ಸಭೆ ನಡೆಸಿದರು. ಶಿವಣ್ಣ, ರವಿ, ಕುಮಾರ್, ಶಿವರಾಜು, ಪುಟ್ಟರಾಜು ಇದ್ದರು.
ನಂಜನಗೂಡು: ನಗರದಲ್ಲಿ ನ.28ರಂದು ಹಮ್ಮಿಕೊಂಡಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸುವುದಿಲ್ಲ ಎಂದು ನಾಯಕ ಸಮುದಾಯದ ಮುಖಂಡ ಚಿಕ್ಕರಂಗನಾಯಕ ತಿಳಿಸಿದರು.
ನಗರದ ನಾಯಕ ಜನಾಂಗದ ಸಮುದಾಯ ಭವನದಲ್ಲಿ ಗುರುವಾರ ನಡೆದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜಯಂತಿ ಆಚರಣೆ ಸಂಬಂಧ ನಾಯಕ ಸಮುದಾಯದ ಬಿಜೆಪಿ ಕಾರ್ಯಕರ್ತರನ್ನು ಕರೆಯದೆ ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಂತೆ ಆಯೋಜನೆ ಮಾಡಲಾಗಿದೆ. ನಾಯಕ ಸಮುದಾಯಕ್ಕೆ ಬಿಜೆಪಿ ಮುಖಂಡರಾದ, ದಿ.ವಿ.ಶ್ರೀನಿವಾಸಪ್ರಸಾದ್, ಶ್ರೀರಾಮುಲು ಮತ್ತು ಮಾಜಿ ಶಾಸಕ ಹರ್ಷವರ್ಧನ್ ಅವರ ಕೊಡುಗೆ ಕೂಡ ಇದ್ದು ಅವರನ್ನು ಆಹ್ವಾನ ಮಾಡುವಂತೆ ತಿಳಿಸಲಾಗಿತ್ತು. ಆದರೆ, ಸ್ಥಳೀಯ ಶಾಸಕರು ಬಿಜೆಪಿ ಮುಖಂಡರು ಬಂದರೆ ನಾನು ಬರುವುದಿಲ್ಲ ಎಂಬ ಸೂಚನೆ ನೀಡಿದ್ದರು. ಪ್ರಸ್ತುತ ಕಾರ್ಯಕ್ರಮವನ್ನು ಜಿಲ್ಲಾ ಆಡಳಿತ ಮೂಲಕ ಆಚರಿಸಲು ತೀರ್ಮಾನಿಸಿರುತ್ತಾರೆ. ಯಾವುದೇ ಒಂದು ಜನಾಂಗದ ಕಾರ್ಯಕ್ರಮ ನಡೆಯುವಾಗ ಪಕ್ಷಾತೀತವಾಗಿ ಆಹ್ವಾನ ಮಾಡದೆ ಇರುವುದು ಬೇಸರ ತರಿಸಿದೆ. ಹಾಗಾಗಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ನಾಯಕ ಸಮುದಾಯದ ಬಿಜೆಪಿ ಕಾರ್ಯಕರ್ತರು ಭಾಗವಹಿಸುವುದಿಲ್ಲ ಎಂದು ತೀರ್ಮಾನಿಸಲಾಗಿದೆ ಎಂದರು.
ಸಮುದಾಯದ ಮುಖಂಡರಾದ ಶಿವಣ್ಣ, ರವಿ, ಕುಮಾರ್, ಶಿವರಾಜು, ಪುಟ್ಟರಾಜು, ಸಿದ್ದರಾಜು, ಮಹದೇವ ನಾಯಕ, ನಾಗೇಂದ್ರ, ಸೋಮೇಶ ಹಾಜರಿದ್ದರು.