ಹುಣಸೂರು ನಗರದ ಜೆಎಸ್‌ಎಸ್ ವಿದ್ಯಾ ಸಂಸ್ಥೆಯಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಸುರೇಶ, ಶಿಕ್ಷಕ ಉಮೇಶ್, ಯೋಜನೆಯ ಅಣ್ಣಪ್ಪ, ತೀರ್ಥಮ್ಮ ಹಾಗೂ ವಿದ್ಯಾರ್ಥಿಗಳಿದ್ದರು.
ಸಕಲ ಜೀವಿಗಳ ಉಳಿವಿಗಾಗಿ ಪರಿಸರ ಸಂರಕ್ಷಣೆ ಅತ್ಯಗತ್ಯ, ಇದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಮನೆ, ಶಾಲೆ ಮತ್ತು ಸುತ್ತಮುತ್ತಲಿನ ಪರಿಸರ ರಕ್ಷಿಸುವ ಮಹತ್ತರ ಜವಾಬ್ದಾರಿ ನಿರ್ವಹಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಸುರೇಶ ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಕಸಬಾ ವಲಯದ ವತಿಯಿಂದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ಭೂಮಿ, ಗಾಳಿ, ನೀರು ಕಲುಷಿತಗೊಂಡಿದೆ. ಪ್ಲಾಸ್ಟಿಕ್ ಬಳಕೆ ಮಿತಿ ಮೀರಿದೆ. ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ಓದಿನೊಂದಿಗೆ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ತಿಳಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶಾಲಾ ಮಕ್ಕಳಿಗೆ ಪರಿಸರದ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವೆಂದರು.
ಶಿಕ್ಷಕ ಉಮೇಶ್, ವಲಯ ಮೇಲ್ವಿಚಾರಕಿ ತೀರ್ಥಮ್ಮ, ಕೃಷಿ ಮೇಲ್ವಿಚಾರಕ ಅಣ್ಣಪ್ಪ ಮಾತನಾಡಿದರು. ಸೇವಾ ಪ್ರತಿನಿಧಿ ಮಮತಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.