ದಲಿತ, ಕಾರ್ಮಿಕ, ರೈತ ಸಂಘಟನೆಗಳ ಸಭೆ
ಮೈಸೂರು: ಕಾರ್ಮಿಕ, ರೈತ, ಶ್ರಮಿಕ ವರ್ಗಗಳ ವಿರುದ್ಧವಾಗಿ ಕಾಯ್ದೆಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಫೆ.12ರಂದು ದೇಶದಾದ್ಯಂತ ನಡೆಯುತ್ತಿರುವ ಅಖಿಲ ಭಾರತ ಮುಷ್ಕರಕ್ಕೆ ದಲಿತ, ಕಾರ್ಮಿಕ ಮತ್ತು ರೈತ ಸಂಘಟನೆಗಳು ಬೆಂಬಲ ಸೂಚಿಸಿವೆ.
ನಗರದ ಜೆಎಲ್‌ಬಿ ರಸ್ತೆಯಲ್ಲಿ ಇರುವ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು), ಸಂಯುಕ್ತ ಹೋರಾಟ ಕರ್ನಾಟಕದ ವಿವಿಧ ರೈತ ಸಂಘಟನೆಗಳು, ದಲಿತ ಸಂಘಟನೆಗಳು, ವಿದ್ಯಾರ್ಥಿ, ಯುವಜನ ಮಹಿಳಾ ಸಂಘಟನೆಗಳ ಜಾಗೃತಿ ಸಮಾವೇಶದಲ್ಲಿ ಎಲ್ಲ ಪದಾಧಿಕಾರಿಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸೆಂಟರ್ ಆಫ್ ಇಂಡಿಯಾ ಟ್ರೇಡ್ ಇಂಡಿಯಾದ (ಸಿಐಟಿಯು) ಜಿಲ್ಲಾ ಅಧ್ಯಕ್ಷ ಅಣ್ಣಪ್ಪ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳು ಮತ್ತು ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು, ಕಾರ್ಮಿಕರ ಸಂವಿಧಾನ ಬದ್ಧ ಹಕ್ಕುಗಳಿಗೆ ತಿಲಾಂಜಲಿ ಇಟ್ಟು, ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ತರುವಂತಹ ನೀತಿಗಳ ಭಾಗವಾಗಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದಿದೆ. ಆ ಮೂಲಕ 4 ಸಂಹಿತೆಗಳನ್ನು ಜಾರಿ ಮಾಡಲು ಮುಂದಾಗಿದೆ. ನೀತಿ ಮಾಡುವವರಿಗೆ ದುಡಿಯುವ ವರ್ಗದ ನೋವು ಗೊತ್ತಿಲ್ಲ. ಸಮಾಜದಲ್ಲಿ ಒಳ್ಳೆಯದನ್ನು ಬಯಸಿ ದುಡಿಯುವವರನ್ನು ನಿಯಂತ್ರಿಸುವ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ ಮಾತನಾಡಿ, ಬಹುಮತವನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಂಡು ಕಾರ್ಮಿಕ ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಪ್ರತಿರೋಧವೊಡ್ಡಬೇಕಾದ ಕಾರ್ಮಿಕರು ಸುಮ್ಮನಿದ್ದಾರೆ ಎಂದರು.
ಕಾಯಂ ಉದ್ಯೋಗಗಳು ಕಣ್ಮರೆಯಾಗಿವೆ. ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಜನರು ಭೂಮಿ ಕಳೆದುಕೊಂಡಿದ್ದಾರೆ. ಅವರಿಗೆ ಉದ್ಯೋಗ ಕೊಡುತ್ತಿಲ್ಲ. ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ನಿಮಗೆ ಕಾಯಂ ಉದ್ಯೋಗ ಕೊಡುತ್ತೇವೆ ಎಂದು ಬರೆದುಕೊಟ್ಟಿಲ್ಲ ಎನ್ನುತ್ತಾರೆ. ಕಾರ್ಮಿಕರು ಗುಲಾಮರಾಗಿ ದುಡಿಯುತ್ತಿದ್ದಾರೆ. ಹೀಗಾಗಿ ಇವುಗಳನ್ನು ವಿರೋಧಿಸಿ ಬೀದಿಗಿಳಿದು ಕಾರ್ಮಿಕರು ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗಸ್ವಾಮಿ ಮಾತನಾಡಿ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯು ಕಾರ್ಮಿಕ, ರೈತ, ದಲಿತರ ಹಕ್ಕುಗಳನ್ನು ಕಸಿಯುವ ಕಾಯ್ದೆಗಳನ್ನು ತಿದ್ದುಪಡಿ ಜಾರಿಗೆ ತಂದು ಸಂವಿಧಾನ ಆಶಯಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಕಿಡಿಕಾರಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹೊಸಕೋಟೆ ಬಸವರಾಜು, ಎಐಟಿಯುಸಿ ಎನ್.ಎಸ್.ವೀರೇಶ್ ಇತರರು ಇದ್ದರು.