ಅಪರಾಧ 
ಮೈಸೂರು

ರಾಷ್ಟ್ರೀಕೃತ ಬ್ಯಾಂಕ್‌ಗೆ ಗ್ರಾಹಕರ ಮುತ್ತಿಗೆ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಅಡಮಾನ ಇಟ್ಟಿದ್ದ ಚಿನ್ನದ ತೂಕದಲ್ಲಿ ವ್ಯತ್ಯಾಸ ಎಂಬ ಆರೋಪ
ಮೈಸೂರು: ಸಾಲ ನೀಡುವಾಗ ಗ್ರಾಹಕರು ಅಡ ಇಟ್ಟಿದ್ದ ಚಿನ್ನಕ್ಕೂ, ಬಿಡಿಸಿಕೊಳ್ಳುವಾಗ ಇದ್ದಂತಹ ಚಿನ್ನಕ್ಕೂ ಗಾತ್ರ ಮತ್ತು ತೂಕದಲ್ಲಿ ಸಾಕಷ್ಟು ವ್ಯತ್ಯಾಸವಾಗಿದ್ದು, ಬ್ಯಾಂಕ್ ಸಿಬ್ಬಂದಿ ವಂಚಿಸಿದ್ದಾರೆ ಎಂದು ಆರೋಪಿಸಿ ಹಿನಕಲ್‌ನ ರಾಷ್ಟ್ರೀಕೃತ ಬ್ಯಾಂಕ್‌ಗೆ ನೂರಾರು ಜನರು ಬುಧವಾರ ಮುತ್ತಿಗೆ ಹಾಕಿ ಆಕೋಶ ವ್ಯಕ್ತಪಡಿಸಿದ್ದಾರೆ.
ಅಡಮಾನ ಇಟ್ಟುಕೊಳ್ಳುವಾಗ ಸರಿಯಾಗಿ ತೂಕ ಮಾಡದೆ, ಸಾಲದ ರಸೀದಿಯಲ್ಲಿ 1 ರಿಂದ 2 ಗ್ರಾಂ ನಷ್ಟು ಕಡಿಮೆ ತೂಕ ಬರೆಯುತ್ತಾರೆ. ಬಿಡಿಸಿಕೊಳ್ಳುವಾಗ ರಸೀದಿಯಲ್ಲಿ ಬರೆದಷ್ಟು ಚಿನ್ನ ವಾಪಸ್ ಕೊಟ್ಟು, ಗಿರವಿ ಇಡುವಾಗ ಇದ್ದಂತಹ ತೂಕವನ್ನು ಮರೆಮಾಚಿ ವಂಚಿಸಲಾಗುತ್ತಿದೆ ಎಂದು ದೂರಿದರು.
ಗ್ರಾಹಕರಿಂದ ಚಿನ್ನ ಗಿರವಿ ಇಟ್ಟುಕೊಳ್ಳುವ ಬ್ಯಾಂಕ್ ಸಿಬ್ಬಂದಿ ಸಾಕಷ್ಟು ಜನರಿಗೆ ವಂಚಿಸಿದ್ದಾರೆ. ಚಿನ್ನದ ತೂಕ ಕಡಿಮೆ ಬರೆಯುವುದು, ಬಿಡಿಸಿಕೊಳ್ಳುವಾಗ ಬರೆದಷ್ಟು ಮಾತ್ರ ನೀಡಿ, ಉಳಿದ ಚಿನ್ನವನ್ನು ಕಳವು ಮಾಡುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿಯೇ ಈ ರೀತಿ ವಂಚನೆ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವಿಜಯನಗರ ಪೊಲೀಸ್ ಠಾಣೆ ಸಿಬ್ಬಂದಿ ಗ್ರಾಹಕರನ್ನು ನಿಯಂತ್ರಿಸಿ, ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಸಮಾಧಾನಪಡಿಸಿದರು. ಈ ವೇಳೆ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬ್ಯಾಂಕ್ ಎಜಿಎಂ, ಚಿನ್ನದ ಮೇಲೆ ಸಾಲ ನೀಡಲು ಅಡಮಾನ ಇಟ್ಟುಕೊಳ್ಳುವ ಚಿನ್ನದಲ್ಲಿ ಮೋಸವಾಗಿದೆ ಎಂದು ಗ್ರಾಹಕರು ದೂರುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಸಿಬ್ಬಂದಿಯನ್ನು ವಿಚಾರಿಸಿದ್ದು, ಬ್ಯಾಂಕ್‌ನಿಂದ ಗ್ರಾಹಕರಿಗೆ ನಷ್ಟವಾಗಿದೆಯೇ ಇಲ್ಲವೇ ಎಂಬುದನ್ನು ತನಿಖೆ ನಡೆಸಿ ಸ್ಪಷ್ಟಪಡಿಸಲಾಗುವುದು. ಎಲ್ಲವೂ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.