ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಹಿಳಾ ಉಡಾನ್ 2.0 ಸಮಾವೇಶಕ್ಕೆ ಬಾಲಿವುಡ್ ನಟ ಸೋನು ಸೂದ್ ಚಾಲನೆ ನೀಡಿದರು. ಡಾಲಿ ಧನಂಜಯ್, ಸಪ್ತಮಿ ಗೌಡ, ಮೋನಾ ಭತೇವರ್, ರಜಿನಿ ದಗಲಿಯ ಇನ್ನಿತರರಿದ್ದರು.
ಮೈಸೂರು: ಜಿತೋ ಮಹಿಳಾ ಘಟಕದ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಮಹಿಳಾ ಉಡಾನ್ 2.0 ಸಮಾವೇಶಕ್ಕೆ ಬಾಲಿವುಡ್ ನಟ ಸೋನುಸೂದ್, ನಟ ಡಾಲಿ ಧನಂಜಯ್ ಮತ್ತು ನಟಿ ಸಪ್ತಮಿ ಗೌಡ ಶನಿವಾರ ಚಾಲನೆ ನೀಡಿದರು.
ಬಳಿಕ ಸೋನುಸೂದ್ ಮಾತನಾಡಿ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು. ಆಗಲೇ ಜೀವನ ಸಾರ್ಥಕವಾಗುತ್ತದೆ. ಸಂಕಷ್ಟದಲ್ಲಿರುವವರ ಕೈಹಿಡಿದರೆ, ಅವರು ಸದಾ ಕಾಲ ನೆನಸುತ್ತಾರೆ. ಕರೊನಾ ಕಾಲದಲ್ಲಿ ಅನೇಕ ಸೇವಾ ಕಾರ್ಯಗಳನ್ನು ಮಾಡಿರುವೆ. ಇದು ನನ್ನ ಸಿನಿಮಾ ಯಶಸ್ಸಿಗಿಂತ ಹೆಚ್ಚಿನ ಸಂತೋಷ ಕೊಟ್ಟಿದೆ ಎಂದರು.
ಕೋವಿಡ್‌ನಿಂದ ತೊಂದರೆಗೆ ಸಿಲುಕಿಕೊಂಡವರಿಗೆ ಬಾಲಿವುಡ್‌ನ ಅನೇಕ ನಟ-ನಟಿಯರು ಸಹ ಸೇವಾ ಕಾರ್ಯ ಮಾಡಿದರು. ನಾನು ಇದಕ್ಕೆ ಕೈಜೋಡಿಸಿದೆ. ಕೆಲ ಜನರಿಗೆ ನೆರವು ನೀಡಿದ ಆತ್ಮತೃಪಿ ಇದೆ. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ‘ಮದ್ಯ ಕೊಡುವಂತೆ’ ಕೋರಿ ನನಗೆ ಮೊಬೈಲ್‌ಗೆ ಕರೆ ಮಾಡಿದ್ದರು ಎಂದು ಹೇಳಿದರು.
ಸಮಾಜಕ್ಕೆ ಏನಾದರೂ ಮಾಡಬೇಕಾದರೆ ರಸ್ತೆಯಲ್ಲಿ ಹೇಗೆ ಸ್ಪೀಡ್ ಬ್ರೇಕರ್ ಬರುವಂತೆಯೇ ಸಾಕಷ್ಟು ಸವಾಲುಗಳು ಎದುರಾಗುತ್ತದೆ. ಅವುಗಳನ್ನು ನಾವು ಎದುರಿಸಬೇಕು. ಆಗ ಮಾತ್ರ ಸಮಾಜಕ್ಕೆ ನಾವು ಏನಾದರೂ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದರು.
ಜಿತೋ ಕಾರ್ಯಕ್ರಮಗಳಿಗೆ ಸಾಕಷ್ಟು ಸಹ ಭಾಗವಹಿಸಿದ್ದು, ಪ್ರತಿ ಬಾರಿಯೂ ಅವರಿಂದ ಕಲಿತುಕೊಂಡಿದ್ದು, ನಾವು ಸರ್ಕಾರಗಳು ಸರಿಯಾಗಿ ಕೆಲಸಗಳು ಮಾಡಿಲ್ಲ ಎಂದು ದೂಷಿಸುತ್ತೇವೆ. ಆದರೆ, ಜಿತೋ ಮಹಿಳಾ ಸಂಘಟನೆಯವರು ಜನಪ್ರತಿನಿಧಿಯಂತೆ ಸಮಾಜ ಸೇವೆ ಮಾಡುತ್ತಿದ್ದಾರೆ. ಮತ್ತಷ್ಟು ಉತ್ತಮ ಕೆಲಸ ಮಾಡಲಿ ಎಂದು ಹಾರೈಸಿದರು.
ಮಹಿಳೆಯರು ಪುರುಷರಿಗಿಂತ ಹೆಚ್ಚು ಕ್ರಿಯಾಶೀಲರು. ಎಲ್ಲರಿಗೂ ಸ್ಫೂರ್ತಿದಾಯಕರಾಗಿದ್ದಾರೆ. ಅವರೇ ಸಮಾಜದ ನಿಜವಾದ ಹೀರೋಗಳು ಎಂದು ತಿಳಿಸಿದರು.
ಜಿತೋ ಮೈಸೂರು ಮಹಿಳಾ ವಿಭಾಗದ ಅಧ್ಯಕ್ಷೆ ಮೋನಾ ಭತೇವರ್, ಕಾರ್ಯದರ್ಶಿ ರಜಿನಿ ದಗಲಿಯ, ಚಿಟೋ ಕೆಜಿಜಿ ವಲಯದ ಅಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ದಿಲೀಪ್ ಜೈನ್, ಸಂಚಾಲಕಿ ಪಿಂಕಿ ಜೈನ್, ಜಿತೋ ಮೈಸೂರು ಘಟಕದ ಅಧ್ಯಕ್ಷ ವಿನೋದ್ ಬಾಳ್ತಿವಾಳ್, ಕಾರ್ಯದರ್ಶಿ ಗೌತಮ್ ನಲೇಚಾ, ಜಿತೋ ಮೈಸೂರು ಯುವ ವಿಭಾಗದ ಕಾರ್ಯದರ್ಶಿ ಸಿದ್ಧರಾಜ್ ಜುಗಾ ಪುಣೆ ಇತರರು ಉಪಸ್ಥಿತರಿದ್ದರು.
ಜವಳಿ, ಗೃಹೋಪಯೋಗಿ ವಸ್ತು, ಚಿನ್ನಾಭರಣ, ಮಕ್ಕಳ ಆಟಿಕೆ, ಸ್ಟೇಷನರಿ ವಸ್ತುಗಳು, ತಿಂಡಿ-ತಿನಿಸು ಸೇರಿದಂತೆ ಅಂದಾಜು 150 ವಿವಿಧ ಮಳಿಗೆಗಳು ಎಲ್ಲರನ್ನೂ ಆಕರ್ಷಿಸಿತು.