ಮೈಸೂರು ಕನ್ನಡ ವೇದಿಕೆ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಂ.ಕೆ. ಸೋಮಶೇಖರ್, ಮಡ್ಡೀಕೆರೆ ಗೋಪಾಲ್, ಬಾಲಕೃಷ್ಣ, ನಾರಾಯಣಗೌಡ ಹಾಗೂ ಇತರರು ಇದ್ದರು. 
ಮೈಸೂರು

ಮೈಸೂರಿನಲ್ಲಿ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಪ್ರದಾನ

ಮೈಸೂರು: ಮೈಸೂರು ಕನ್ನಡ ವೇದಿಕೆ ವತಿಯಿಂದ ರಾಷ್ಟ್ರಕವಿ ಕುವೆಂಪು ಜಯಂತಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಸ್ವಾತಂತ್ರೃ ಹೋರಾಟಗಾರ ಉದ್ಯಾನದಲ್ಲಿ ಆಯೋಜಿಸಲಾಗಿತ್ತು.
ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ನಾಡು ಕಂಡ ಮಹಾನ್ ಚೇತನ. ಜಾತಿ, ಮತ ಸಂಘ ರ್ಷಗಳನ್ನು ಬಿಟ್ಟು ವಿಶ್ವಮಾನವ ಕಲ್ಪನೆ ಮತ್ತು ಮಾನವತ್ವದೆಡೆಗೆ ಸಮಾಜ ಸಾಗಬೇಕು ಎಂಬ ಪರಿಕಲ್ಪನೆಯನ್ನು ಈ ಜಗತ್ತಿಗೆ ಸಾರಿದರು ಎಂದರು.
ಎಲ್ಲರು ಸಮಾನವಾಗಿ ಬದುಕಬೇಕು. ಒಳ್ಳೆಯ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬರು ಒಳ್ಳೆಯದು, ಕೆಟ್ಟದನ್ನು ತಮ್ಮ ಆತ್ಮದೊಳಗೆ ವಿಚಾರ ಮಾಡಬೇಕು. ಮನುಷ್ಯರನ್ನು ಮನುಷ್ಯರ ರೀತಿಯಲ್ಲಿ ನೋಡಬೇಕು. ಮೌಢ್ಯಗಳನ್ನು ಕಿತ್ತೊಗೆದು ವೈಚಾರಿಕ ಪ್ರಜ್ಞೆಯನ್ನು ಜಗತ್ತಿಗೆ ಸಾರಬೇಕು ಎಂಬುದು ಕುವೆಂಪು ಅವರ ಆಶಯವಾಗಿತ್ತು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಬರವಣಿಗೆ ವಿಶ್ವದ ವಿವಿಧ ಭಾಷೆಗಳಿಗೆ ಅನುವಾದ ಮಾಡಿದ್ದರೆ ಕನ್ನಡಕ್ಕೆ ನೋಬೆಲ್ ಪ್ರಶಸ್ತಿಗಳು ಬರುತ್ತಿದ್ದವು ಎಂದು ಹೇಳಿದರು.
ಈ ಸಂದರ್ಭ ವಿವಿಧ ಕ್ಷೇತ್ರದ ಸಾಧಕರಾದ ರಘುರಾಮ ವಾಜಪೇಯಿ, ಜ. ಹನುಮಂತಪ್ಪ, ಎಚ್.ಎಲ್. ಗಂಗಯ್ಯ, ಕೆ. ನಾಗೇಶ್ ನಾಯಕ, ಟಿ.ಸುರೇಶ್, (ಸಮಾಜಸೇವೆ), ಬಿ.ಶೇಖರ್ ಗೋಪಿನಾಥಂ, ಕೆ.ಎಸ್.ಆನಂದ್, ಎಸ್.ಆರ್. ಶಿವಕುಮಾರ್ (ಪತ್ರಿಕೋ ದ್ಯಮ), ಸಾಲುಂಡಿ ಎಸ್.ದೊರೆಸ್ವಾಮಿ (ಶಿಕ್ಷಣ), ಸ್ವಾಮಿನಾಥನ್ (ಪೌರಕಾರ್ಮಿಕ) ಅವರನ್ನು ಸನ್ಮಾನಿಸಲಾಯಿತು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜ ಸೇವಕ ಡಾ.ಲೋಕೇಶ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಹಾಗೂ ಇತರರು ಇದ್ದರು.