ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ ರಾಷ್ಟ್ರೀಯ ಡೆಂಘೆ ವಿರೋಧಿ ಮಾಸಾಚಾರಣೆ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಸಂದೀಪ್ ಮಾತನಾಡಿದರು. ರವಿ, ಸವಿತಾ, ಗೀತಾ ಇದ್ದರು.
ಬೆಟ್ಟದಪುರ: ಯಾವುದೇ ಜ್ವರ ಬಂದರೂ ನಿರ್ಲಕ್ಷ್ಯ ಮಾಡದೆ ಹತ್ತಿರದ ಆರೋಗ್ಯ ಕೇಂದ್ರದ ವೈದ್ಯರ ಭೇಟಿ ಮಾಡಿ, ಪರೀಕ್ಷೆ ಮಾಡಿಸಿಕೊಂಡು ಸಲಹೆ ಪಡೆದುಕೊಳ್ಳಿ ಎಂದು ಚಪ್ಪರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆರ್.ಸಂದೀಪ್ ಸಲಹೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಡೆಂಘೆ ವಿರೋಧಿ ಮಾಸಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡೆಂಘೆ ಬಗ್ಗೆ ಅರಿವು ಇರಬೇಕು. ಇದು ಸೊಳ್ಳೆ ಕಚ್ಚುವಿಕೆಯಿಂದ ಹರಡುವ ವೈರಸ್ ಆಗಿದೆ. ಸೊಳ್ಳೆಗಳು ಸಾಮಾನ್ಯವಾಗಿ ನಿಂತ ನೀರಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಸೋಂಕಿತ ಸೊಳ್ಳೆಯು ಆರೋಗ್ಯವಂತ ವ್ಯಕ್ತಿಗೆ ಕಚ್ಚಿದಾಗ ಡೆಂಘೆ, ಚಿಕನ್‌ಗುನ್ಯಾ ರೋಗಗಳು ಹರಡುತ್ತವೆ ಎಂದು ತಿಳಿಸಿದರು.
ವಿಪರೀತ ಜ್ವರ, ಮೈ ಕೈ ನೋವು, ತಲೆನೋವು, ಕಣ್ಣುಗುಡ್ಡೆಗಳ ಹಿಂಭಾಗ ನೋವು, ಮೈಮೇಲೆ ಗುಳ್ಳೆಗಳಾಗುವುದು ರೋಗದ ಲಕ್ಷಣವಾಗಿದೆ. ಡೆಂಘೆ ಜ್ವರಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ರೋಗದ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುವುದು. ಯಾವುದೇ ನೀರಾದರೂ ಅದನ್ನು ಸುರಕ್ಷಿತವಾಗಿ ಮುಚ್ಚಿಡಬೇಕು. ವಾರಕ್ಕೆ ಎರಡು ಬಾರಿ ನೀರಿನ ಸಂಗ್ರಹಗಳನ್ನು ತೊಳೆದು, ಒಣಗಿಸಿ, ಮತ್ತೆ ನೀರು ತುಂಬಿಸಿ ಮುಚ್ಚಿಡಬೇಕು. ಒಡೆದ ಬಾಟಲ್, ತೆಂಗಿನ ಚಿಪ್ಪು, ಟಯರ್‌ಗಳು ಇತ್ಯಾದಿ ನೀರು ಸಂಗ್ರಹಗಳನ್ನು ತೆರವುಗೊಳಿಸಬೇಕು. ಮನೆಯಲ್ಲಿ ಸ್ವಯಂ ರಕ್ಷಣಾ ವಿಧಾನಗಳಾದ ಮೈತುಂಬಾ ಬಟ್ಟೆ ಧರಿಸುವುದು, ಕಿಟಕಿ ಬಾಗಿಲುಗಳನ್ನು ಮುಚ್ಚುವುದು, ಸೊಳ್ಳೆ ಪರದೆ ಬಳಸುವಂತೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಎಸ್ ರವಿ, ಸಿಬ್ಬಂದಿ ಸವಿತಾ, ಗೀತಾ ಮತ್ತು ಗ್ರಾಮಸ್ಥರು ಇದ್ದರು.