ʼನಾರಿ ನಿವೇಶ್ ಯಾತ್ರಾʼ ಆರಂಭ
- ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್ ನಿಂದ ದೇಶದ ಎಲ್ಲೆಡೆ ಮಹಿಳೆಯರಲ್ಲಿ ಹಣಕಾಸು ಹಾಗೂ ಹೂಡಿಕೆಯ ಬಗ್ಗೆ ಜಾಗೃತಿ
ಮೈಸೂರು: ಮಹಿಳೆಯರಲ್ಲಿ ಹಣಕಾಸು ನಿರ್ವಹಣೆ, ಉಳಿತಾಯ ಹಾಗೂ ಹೂಡಿಕೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್ ಆರಂಭಿಸಿರುವ ರಾಷ್ಟ್ರವ್ಯಾಪಿ ‘ನಾರಿ ನಿವೇಶ್ ಯಾತ್ರಾ’ ಅಭಿಯಾನ ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಪೂರ್ಣಗೊಂಡಿದೆ.
ಜೂನ್ 26ರಂದು ಚೆನ್ನೈನಲ್ಲಿ ಚಾಲನೆ ಪಡೆದ ಈ ಆರು ತಿಂಗಳ ಅಭಿಯಾನವು ದೇಶದ ವಿವಿಧ ನಗರ ಹಾಗೂ ಪಟ್ಟಣಗಳಿಗೆ ತೆರಳಿ ಜನರಲ್ಲಿ ಹೂಡಿಕೆ ಕುರಿತು ಜಾಗೃತಿ ಮೂಡಿಸುತ್ತಿದೆ. ವಿಶೇಷವಾಗಿ ಕುಟುಂಬಗಳ ಹಣಕಾಸು ನಿರ್ಧಾರಗಳು ಮತ್ತು ಸಂಪತ್ತು ಸೃಷ್ಟಿಯಲ್ಲಿ ಮಹಿಳೆಯರ ಪಾತ್ರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವರಿಗೆ ಸರಳವಾಗಿ ಹೂಡಿಕೆಯ ಮಾಹಿತಿಯನ್ನು ತಲುಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಅಭಿಯಾನದ ಅಂಗವಾಗಿ ಎರಡು ವಾಹನಗಳು ದೇಶದ ಎರಡು ವಿಭಿನ್ನ ದಿಕ್ಕುಗಳಲ್ಲಿ ಸಂಚರಿಸುತ್ತಿದ್ದು, ವಿವಿಧೆಡೆ ಬೀದಿ ನಾಟಕ, ಹೂಡಿಕೆದಾರರ ಜಾಗೃತಿ ಕಾರ್ಯಾಗಾರ ಹಾಗೂ ಸಮುದಾಯದೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಹಣಕಾಸು ಯೋಜನೆ, ಗುರಿ ಆಧಾರಿತ ಹೂಡಿಕೆ, ಶಿಸ್ತುಬದ್ಧ ಉಳಿತಾಯ ಹಾಗೂ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ.
ಮೈಸೂರಿನ ವಿವಿಧೆಡೆ ಸಂವಾದ
ಮೈಸೂರಿನಲ್ಲಿ ಅಲನಹಳ್ಳಿ ಸ್ಥಳೀಯ ಮಾರುಕಟ್ಟೆ, ಸಿದ್ಧಾರ್ಥ ಲೇಔಟ್ ಮಾರುಕಟ್ಟೆ, ಕಲ್ಯಾಣಗಿರಿ ಮಾರುಕಟ್ಟೆ, ಬನ್ನಿಮಂಟಪ ಮಾರುಕಟ್ಟೆ, ಗಾಯತ್ರಿಪುರಂ ಮಾರುಕಟ್ಟೆ ಹಾಗೂ ವಲಯ ಕಚೇರಿ ಪ್ರದೇಶಗಳಲ್ಲಿ ಅಭಿಯಾನ ತಂಡ ಸ್ಥಳೀಯರೊಂದಿಗೆ ಸಂವಾದ ನಡೆಸಿತು.
ಬೀದಿ ನಾಟಕ ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಮಹಿಳೆಯರಿಗೆ ಹಣಕಾಸು ಯೋಜನೆ ಹಾಗೂ ದೀರ್ಘಾವಧಿಯ ಹೂಡಿಕೆಯ ಮಹತ್ವವನ್ನು ತಿಳಿಸಲಾಯಿತು. ಹೂಡಿಕೆ ಎನ್ನುವುದು ಸಂಕೀರ್ಣವಾದ ಪ್ರಕ್ರಿಯೆಯಲ್ಲ, ತಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ನೆರವಾಗುವ ಸಾಧನ ಎಂಬುದನ್ನು ಸರಳವಾಗಿ ವಿವರಿಸಲಾಯಿತು.
ಅಭಿಯಾನದ ಅವಧಿಯಲ್ಲಿ ದೇಶಾದ್ಯಂತ ಮಹಿಳಾ ಸ್ವಸಹಾಯ ಸಂಘಗಳೊಂದಿಗೆ 60 ಕಾರ್ಯಕ್ರಮಗಳನ್ನು ನಡೆಸಲು ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್ ಉದ್ದೇಶಿಸಿದೆ. ಈ ಕಾರ್ಯಕ್ರಮಗಳಲ್ಲಿ ಹಣಕಾಸು ಯೋಜನೆ, ಗುರಿ ಆಧಾರಿತ ಹೂಡಿಕೆ, ದೀರ್ಘಾವಧಿಯ ಸಂಪತ್ತು ಸೃಷ್ಟಿ ಹಾಗೂ ಶಿಸ್ತುಬದ್ಧ ಹೂಡಿಕೆ ಕುರಿತು ಚರ್ಚೆ ನಡೆಯಲಿದೆ.
ಮಹಿಳೆಯರಲ್ಲಿ ಹಣಕಾಸು ಅರಿವು ಮುಖ್ಯ
ಎಚ್‌ಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವನೀತ್ ಮುನೋತ್ ಮಾತನಾಡಿ, ದೇಶದಾದ್ಯಂತ ಮಹಿಳೆಯರು ಶಿಸ್ತುಬದ್ಧ ಉಳಿತಾಯದ ಹವ್ಯಾಸ ಹೊಂದಿದ್ದರೂ, ವ್ಯವಸ್ಥಿತ ಹೂಡಿಕೆಯ ಕುರಿತು ಸೂಕ್ತ ಮಾಹಿತಿ ಮತ್ತು ಚರ್ಚೆಯ ಕೊರತೆಯಿದೆ. ‘ನಾರಿ ನಿವೇಶ್ ಯಾತ್ರಾ’ ಮೂಲಕ ಮಹಿಳೆಯರೊಂದಿಗೆ ನೇರವಾಗಿ ಸಂವಾದ ನಡೆಸಿ ಹೂಡಿಕೆಯ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್‌ನ ಹೂಡಿಕೆದಾರರ ಶಿಕ್ಷಣ ಕಾರ್ಯಕ್ರಮ ‘ಬರನೀ ಸೆ ಆಜಾದಿ’ಯ ಭಾಗವಾಗಿ ‘ನಾರಿ ನಿವೇಶ್ ಯಾತ್ರಾ’ ಅಭಿಯಾನ ನಡೆಯುತ್ತಿದೆ. ಸಾಂಪ್ರದಾಯಿಕ ಉಳಿತಾಯದ ಜತೆಗೆ ಹಣಕಾಸಿನ ಗುರಿಗಳನ್ನು ಸಾಧಿಸಲು ಮಾಹಿತಿಯುಕ್ತ ಹೂಡಿಕೆಯ ಮಹತ್ವವನ್ನು ತಿಳಿಸುವುದು ಇದರ ಉದ್ದೇಶವಾಗಿದೆ.
ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (ಎಸ್‌ಐಪಿ) ಮೂಲಕ ಶಿಸ್ತುಬದ್ಧವಾಗಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಗೆ ನೆರವಾಗಬಹುದು ಎಂದು ಅಭಿಯಾನದಲ್ಲಿ ತಿಳಿಸಲಾಗುತ್ತಿದೆ.