ರಾಮಕೃಷ್ಣ ಆಶ್ರಮದ ಆವರಣದಲ್ಲಿ ಶುಕ್ರವಾರ ಪೌರಕಾರ್ಮಿಕರಿಗೆ ನಾರಾಯಣ ಸೇವೆ ಸಲ್ಲಿಸುವ ಮೂಲಕ ಆಶ್ರಮದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸ್ವಾಮಿ ಮುಕ್ತಿದಾನಂದ, ಸ್ವಾಮಿ ಅನುಪಮಾನಂದ, ಸ್ವಾಮಿ ಬೋಧಸ್ವರೂಪಾನಂದ ಇತರರಿದ್ದರು
- ‘ವಸುದೈವ ಕುಟುಂಬಕಂ’ ಚಿಂತನೆಗೆ ಕೊನೆ ಇಲ್ಲ: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಮತ
- ಭಾರತದ ಸಂಸ್ಕೃತಿಯ ಈ ಚಿಂತನೆಯನ್ನು ವಿದೇಶಿ ನೆಲೆದಲ್ಲೂ ಬಿತ್ತರಿಸಿದವರು ಶ್ರೀವಿವೇಕಾನಂದರು. ಅವರು ನಮ್ಮ ಚಿಂತನೆಯ ಎತ್ತರ ಎಷ್ಟು ಎಂಬುದನ್ನು ಸಾಗರದಾಚೆಗೂ ತೋರಿಸಿದರು
- ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ಎಲ್ಲರಿಗೂ ಅಧ್ಯಾತ್ಮ, ಸನಾತನ ಸಂಸ್ಕೃತಿ ಮತ್ತು ಉನ್ನತ ಮೌಲ್ಯಗಳನ್ನು ಬಿತ್ತರಿಸುವ ಜತೆಗೆ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ, ಸಂಸ್ಕಾರ ಕಲಿಸುವಂತಹ ಮಹತ್ಕಾರ್ಯದಲ್ಲಿ ತೊಡಗಿದೆ ಎಂದು ಜಿ.ಟಿ.ದೇವೇಗೌಡ ಹೇಳಿದರು
ಮೈಸೂರು: ವಿಶ್ವಕ್ಕೆ ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸಿದ್ದೇ ಸ್ವಾಮಿ ವಿವೇಕಾನಂದರು ಎಂದು ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಶತಮಾನೋತ್ಸವದ ಅಂಗವಾಗಿ ಆಶ್ರಮದ ಆವರಣದಲ್ಲಿ ಶುಕ್ರವಾರ 300 ಪೌರಕಾರ್ಮಿಕರಿಗೆ ನಾರಾಯಣ ಸೇವೆ ಸಲ್ಲಿಕೆ ಸಮಾರಂಭದಲ್ಲಿ ಮಾತನಾಡಿ, ‘ಇವ ನಮ್ಮವನಲ್ಲ’ ಎಂಬ ಚಿಂತನೆ ಭಾರತೀಯ ಸಂಸ್ಕೃತಿ ಅಲ್ಲ. ಉದಾರತೆ ಮನೋಭಾವದ ‘ವಸುದೈವ ಕುಟುಂಬಕಂ’ ಭಾರತದ ಸಂಸ್ಕೃತಿಯಾಗಿದೆ. ಭೂಮಿ ಮೇಲಿನ ಎಲ್ಲರೂ ನಮ್ಮವರು. ಭೂಮಿ ತಾಯಿಯ ಎಲ್ಲ ಮಕ್ಕಳು ಅಣ್ಣ-ತಮ್ಮಂದಿರು, ಸೋದರ-ಸೋದರಿಯರು ಎನ್ನುವುದು ನಮ್ಮ ಸಂಸ್ಕೃತಿ ಎಂದರು.
ಭಾರತದ ಸಂಸ್ಕೃತಿಯ ಈ ಚಿಂತನೆಯನ್ನು ವಿದೇಶಿ ನೆಲೆದಲ್ಲೂ ಬಿತ್ತರಿಸಿದವರು ಶ್ರೀವಿವೇಕಾನಂದರು. ಅವರು ನಮ್ಮ ಚಿಂತನೆಯ ಎತ್ತರ ಎಷ್ಟು ಎಂಬುದನ್ನು ಸಾಗರದಾಚೆಗೂ ತೋರಿಸಿದರು. ನಮ್ಮ ಚಿಂತನೆ ಸದಾ ಜಾಗೃತವಾಗಿದೆ ಎಂದು ಪ್ರತಿಬಿಂಬಿಸುವ ನಿಟ್ಟಿನಲ್ಲಿ ರಾಮಕೃಷ್ಣ ಆಶ್ರಮ ಕೆಲಸ ಮಾಡುತ್ತಿದೆ. ಆಶ್ರಮದ ಮೈಸೂರು ಶಾಖೆ ಶತಮಾನೋತ್ಸವ ಆಚರಿಸುತ್ತಿರುವ ಸಮಾರಂಭದ ಮೊದಲ ದಿನವೇ ಪೌರಕಾರ್ಮಿಕರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಇದು ‘ವಸುದೈವ ಕುಟುಂಬಕಂ’ ಚಿಂತನೆಗೆ ಕೊನೆ ಇಲ್ಲ ಎನ್ನುವುದನ್ನು ತೋರಿಸುತ್ತಿದೆ ಎಂದರು.
ನಾವೆಲ್ಲರೂ ಆಸ್ತಿಕರು. ಭಗವಂತನನ್ನು ಆರಾಧನೆ ಮಾಡುವವರು. ನಾವು ಮಾಡುವ ಎಲ್ಲ ಕಾರ್ಯದಲ್ಲೂ ದೇವರ ಅನುಗ್ರಹ ಇದ್ದರೆ ಮಾತ್ರ ಯಶಸ್ಸು ಸಿಗುತ್ತದೆ ಎಂದು ನಂಬಿದವರು. ನಮ್ಮ ಕಾರ್ಯದಲ್ಲಿ ವಿಜಯ ಸಂಪಾದನೆಗೆ ಭಗವದ್ಗೀತೆಯ ‘ಯತ್ರ ಯೋಗೇಶ್ವರ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ’ ಮುಖ್ಯ. ಕೃಷ್ಣ ಮತ್ತು ಪಾರ್ಥ ಇಬ್ಬರೂ ಬೇಕು ಎಂದರು.
ನಮ್ಮ ಕಾರ್ಯದ ಯಶಸ್ವಿಗೆ ಭಗವಂತನನ್ನು ಆರಾಧಿಸಬೇಕು. ಗುಡಿ, ಗೋಪುರಕ್ಕೆ ಹೋದ ಮಾತ್ರಕ್ಕೆ ಭಗವಂತನ ಆರಾಧನೆ ಪೂರ್ಣವಾಗುವುದಿಲ್ಲ. ಸಮಾಜದ ಎಲ್ಲರ ಹೃದಯಲ್ಲೂ ದೇವರು ನೆಲೆಸಿದ್ದೇನೆ. ಅಲ್ಲೂ ತನ್ನ ಆರಾಧನೆಯನ್ನು ದೇವರು ಬಯಸುತ್ತಾನೆ. ಹಾಗಾಗಿ, ಎಲ್ಲರೊಂದಿಗೆ ಸ್ನೇಹ ಭಾವದಿಂದ ಇದ್ದು ಒಳ್ಳೆಯದನ್ನು ಮಾಡಿದರೆ ದೇವರನ್ನು ಆರಾಧಿಸಿದಂತೆ ಎಂದರು.
ಮನಸ್ಸಿನ ಸ್ವಚ್ಛತೆಯನ್ನು ನಾವೇ ಮಾಡಿಕೊಳ್ಳಬೇಕು. ಅದಕ್ಕೆ ಪೌರಕಾರ್ಮಿಕರು ಸ್ಫೂರ್ತಿಯಾಗಿ ನಿಲ್ಲುತ್ತಾರೆ. ಅವರು ನಿಮ್ಮ ಹೊರಗನ್ನು ನಾವು ಸ್ವಚ್ಛ ಮಾಡುತ್ತೇನೆ. ನಿಮ್ಮ ಒಳಗನ್ನು ನೀವು ಸ್ವಚ್ಛ ಮಾಡಿಕೊಳ್ಳಿ ಎಂಬ ಸಂದೇಶ ನೀಡಿದ್ದಾರೆ. ಸಾಧ್ಯವಾದಷ್ಟು ನಮ್ಮಲ್ಲಿನ ಕೆಟ್ಟಗುಣಗಳನ್ನು ದೂರ ಮಾಡಿ, ಒಳ್ಳೆ ಗುಣಗಳನ್ನು ಮೈಗೂಡಿಸಿಕೊಂಡರೆ ದೇವರ ಆರಾಧನೆ ಮಾಡಿದಂತೆ ಎಂದರು. ಇದೇ ವೇಳೆ ಪೌರ ಕಾರ್ಮಿಕರಿಗೆ ನಾರಾಯಣ ಮಂತ್ರ ಉಪದೇಶ ಮಾಡಿದರು.
ಯುವಕರನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ಎಲ್ಲರಿಗೂ ಅಧ್ಯಾತ್ಮ, ಸನಾತನ ಸಂಸ್ಕೃತಿ ಮತ್ತು ಉನ್ನತ ಮೌಲ್ಯಗಳನ್ನು ಬಿತ್ತರಿಸುವ ಜತೆಗೆ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ, ಸಂಸ್ಕಾರ ಕಲಿಸುವಂತಹ ಮಹತ್ಕಾರ್ಯದಲ್ಲಿ ತೊಡಗಿದೆ. ಯುವಕರನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ನಾಡು ಕಟ್ಟುವ ಕಾರ್ಯಕ್ಕೆ ಉತ್ತೇಜಿಸುತ್ತಿದೆ ಎಂದರು.
ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ನಾಡಿನ ಹೆಮ್ಮೆ. ಶತಮಾನದ ನಡಿಗೆಯಲ್ಲಿ ಸಾವಿರಾರು ಮಕ್ಕಳ ಬಾಳಲ್ಲಿ ವಿದ್ಯಾಬೆಳಕು ಹರಿಸಿದ ಮಹೋನ್ನತ ಸೇವಾ ಕೇಂದ್ರವಾಗಿದೆ. ದೇಶದ ಅನೇಕ ಸ್ವಾಮೀಜಿಗಳನ್ನು ರೂಪಿಸಿದೆ ಎಂದರು.
ಒಳ್ಳೆಯ ಕೆಲಸ ಮಾಡುವಾಗ ಹೇಗೆ ಅಡಚಣೆ ಬರುತ್ತದೆ ಎನ್ನುವುದಕ್ಕೆ ವಿವೇಕ ಸ್ಮಾರಕ ಉದಾಹರಣೆ. ಮೈಸೂರಿನಲ್ಲಿ ವಿವೇಕ ಸ್ಮಾರಕ ಬರುತ್ತಿರುವುದು ನಮ್ಮ ಪುಣ್ಯ. ಧರ್ಮದ ದಾರಿಯಲ್ಲಿ ನಡೆಯುವಾಗ ಎಷ್ಟೇ ಅಡಚಣೆ ಇದ್ದರೂ ಒಳ್ಳೆಯದಾಗುತ್ತದೆ. ಈ ವಿಚಾರದಲ್ಲಿ ವಿರೋಧಿಸಿದವರಿಗೆ ಮುಕ್ತಿದಾನಂದ ಕಣ್ಣು ತೆರೆಸಿದ್ದಾರೆ ಎಂದರು.
ಅಭಿವೃದ್ಧಿಗೆ ಜಾತಿ ಸಂಕೋಲೆ ಬಿಡಿ
ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಮಾತನಾಡಿ, ಆದರ್ಶ ಸಮಾಜ ನಿರ್ಮಾಣ ರಾಮಕೃಷ್ಣ ಆಶ್ರಮದ ಮುಖ್ಯ ಧ್ಯೇಯವಾಗಿದೆ. ವಿವೇಕಾನಂದರು ಭಾರತ ಪರಿವರ್ತನೆಗೆ ದುಡಿದರು. ದೇಶದ ಎಲ್ಲೆಡೆ ಪರ್ಯಟನೆ ಮಾಡಿದರು. ದೇಶದ ಅಭಿವೃದ್ಧಿಗೆ ಎಲ್ಲರೂ ಜಾತಿ ಸಂಕೋಲೆ ಬಿಟ್ಟು ಒಂದಾಗಬೇಕು ಎಂದು ತಿಳಿಸಿಕೊಟ್ಟರು ಎಂದರು.
ಯಾರು ಯಾವುದೇ ಕೆಲಸ ಮಾಡಿಸಿದರೂ ಅದನ್ನು ಭಗವಂತನಿಗೆ ಸಮರ್ಪಿಸಬೇಕು. ಯಾರು ಸ್ವಚ್ಛತೆ ಕಾಪಾಡಿಕೊಳ್ಳುತ್ತಾರೋ ಅವರೆಲ್ಲ ಬ್ರಾಹ್ಮಣರು. ಮನುಷ್ಯರ ಮನಸ್ಸಿನಲ್ಲಿ ಭಗವಂತ ಇದ್ದಾರೆ. ಎಲ್ಲರನ್ನೂ ದೇವರು ಎಂದು ಪೂಜಿಸುವ ಭಾವವನ್ನು ಸ್ವಾಮಿ ವಿವೇಕಾನಂದರು, ಶಾರದಾ ಮಾತೆ ತಿಳಿಸಿದ್ದಾರೆ. ಆದರ್ಶ ಸಮಾಜ ಹಾಗೂ ಸರ್ವಜನಾಂಗದ ಶಾಂತಿಯ ತೋಟವನ್ನು ನಾವು ಪ್ರಾಯೋಗಿಕವಾಗಿ ಕಟ್ಟಬೇಕು ಎಂದರು.
ಕಡಪ ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಅನುಪಮಾನಂದ ಮಾತನಾಡಿ, ಭಾರತ ಉದ್ಧಾರ ಆಗಬೇಕಾದರೆ ಜನಸಾಮಾನ್ಯರು ಉದ್ಧಾರ ಆಗಬೇಕು ಎಂದು ವಿವೇಕಾನಂದರು ಹೇಳಿದ್ದಾರೆ. ಆ ಕಾರ್ಯದಲ್ಲಿ ರಾಮಕೃಷ್ಣ ಮಿಷನ್ ತೊಡಗಿಸಿಕೊಂಡಿದೆ. ವಿದ್ಯೆಯ ಜತೆಗೆ ನಾನಾ ಸೇವೆ ಕಾರ್ಯ ಮಾಡುತ್ತಿದೆ. ನಾನು 40 ವರ್ಷ ಮೈಸೂರಿನ ಆಶ್ರಮದಲ್ಲಿದ್ದೆ. ಇಲ್ಲೂ ಅಪಾರ ಸೇವಾ ಕಾರ್ಯ ನಡೆಯುತ್ತಿದೆ. ಜ್ಞಾನ ಮತ್ತು ಅಧ್ಯಾತ್ಮ ದಾನವನ್ನು ಪ್ರವಚನ ಮೂಲಕ ನೀಡಲಾಗುತ್ತಿದೆ ಎಂದರು.
ಹಲಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದ, ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಗೌರವ ಕಾರ್ಯದರ್ಶಿ ಡಾ.ಎಚ್.ಸುದರ್ಶನ್, ನಗರ ಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್, ಕನ್ನಡ ಪರಿಚಾರಕ ಅರವಿಂದ ಶರ್ಮ ಇತರರಿದ್ದರು.