ನಂಜನಗೂಡಿನ ಕಪಿಲಾ ನದಿ ತೀರದಲ್ಲಿ ಶ್ರೀಕಂಠೇಶ್ವರ ಸ್ವಾಮಿಯ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು. 
ಮೈಸೂರು

ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ತೆಪ್ಪೋತ್ಸವ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ಕಪಿಲಾ ನದಿಯಲ್ಲಿ ಉತ್ಸವ ಮೂರ್ತಿಯ ಸೊಬಗು
ನಂಜನಗೂಡು : ದಕ್ಷಿಣಕಾಶಿ ನಂಜನಗೂಡಿನಲ್ಲಿ ಗೌತಮ ಪಂಚಮಹಾ ರಥೋತ್ಸವದ ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ಕಪಿಲಾ ನದಿಯಲ್ಲಿ ಶ್ರೀಕಂಠೇಶ್ವರ ಸ್ವಾಮಿಯ ತೆಪ್ಪೋತ್ಸವ ಬುಧವಾರ ರಾತ್ರಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ವಜ್ರಾಭರಣ ಹಾಗೂ ಬಣ್ಣ ಬಣ್ಣದ ಹೂಗಳಿಂದ ವಿಶೇಷವಾಗಿ ಅಲಂಕೃತಗೊಂಡ ಶ್ರೀಪಾರ್ವತಿ ಸಮೇತವಾದ ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದಿಂದ ತಂದು ಕಪಿಲಾ ನದಿಯ ಸ್ಥಾನಘಟ್ಟದ ಬಳಿ ಇರುವ ಮಂಟಪದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮಂಗಳವಾದ್ಯಗಳೊಂದಿಗೆ ಬಣ್ಣ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದ ತೇಲುವ ದೇವಾಲಯದ ಮಾದರಿಯಲ್ಲಿದ್ದ ದೋಣಿಯಲ್ಲಿ ಕೂರಿಸಿ ಅದ್ದೂರಿಯಾಗಿ ತೆಪ್ಪೋತ್ಸವ ನಡೆಸಲಾಯಿತು. ಈ ಮನಮೋಹಕ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಕಪಿಲಾ ನದಿಯ ಮತ್ತೊಂದು ದಡದಲ್ಲಿ ಹೆಜ್ಜಿಗೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಚಿತ್ತಾಕರ್ಷಕವಾದ ಪಟಾಕಿಗಳನ್ನು ಸಿಡಿಸುವ ಮೂಲಕ ಸಂಭ್ರಮಿಸಿದರು.
ತೆಪ್ಪೋತ್ಸವ ಮುಗಿದ ಬಳಿಕ ಉತ್ಸವ ಮೂರ್ತಿಯನ್ನು ನಂಜನಗೂಡು ಪಟ್ಟಣದ ರಥ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿದರು. ನಂಜುಂಡೇಶ್ವರ ಸ್ವಾಮಿ ದೇಗುಲದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಮಾರ್ಗದರ್ಶನದಲ್ಲಿ ತೆಪ್ಪೋತ್ಸವದ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು.
ನಂಜನಗೂಡಿನ ಹಲವೆಡೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ತೆಪ್ಪೋತ್ಸವಕ್ಕೆ ಬಂದಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.