ಮಾರ್ಚ್ 30 ನಡೆಯುವ ಗೌತಮ ಪಂಚಮಹ ರಥೋತ್ಸವ ಹಿನ್ನೆಲೆ ರಥ ಚಲನ ಮಹೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಇಒ ಕೃಷ್ಣ, ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತ್ ಮತ್ತಿತರರಿದ್ದರು.
ನಂಜನಗೂಡು: ಮಾ.30ರಂದು ದಕ್ಷಿಣ ಕಾಶಿ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ಗೌತಮ ಪಂಚ ಮಹಾ ರಥೋತ್ಸವ ಹಿನ್ನೆಲೆಯಲ್ಲಿ ಗುರುವಾರ ದೇವಾಲಯದ ಆವರಣದಲ್ಲಿ ರಥ ಚಲನ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಮತ್ತು ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು. ರಥ ಚಲನ ಮಹೋತ್ಸವದಲ್ಲಿ 5 ರಥಗಳಿಗೆ ಪೂಜೆ ಸಲ್ಲಿಸಿ ರಥ ಕಟ್ಟಲು ಚಾಲನೆ ದೊರೆಯಿತು. ಶ್ರೀಕಂಠೇಶ್ವರಸ್ವಾಮಿ ಮತ್ತು ಪಾರ್ವತಿ ಅಮ್ಮನವರಿಗೆ ಕ್ಷೀರಾಭಿಷೇಕ, ಫಲಪಂಚಾಮೃತ ಅಭಿಷೇಕ, ನಿತ್ಯೋತ್ಸವ ಮತ್ತು ಮೂಲದೇವರ ಪೂಜೆ ನೆರವೇರಿಸಲಾಯಿತು.
ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ, ಗಣಪತಿ ಪೂಜೆ ಹಾಗೂ ನವಗ್ರಹ ಪೂಜೆಯನ್ನು ಸಲ್ಲಿಸಿ ಪಟ್ಟಿಗೆ ನವಧಾನ್ಯ ಪೂಜೆ ಮಾಡಲಾಯಿತು. ನಂಜನಗೂಡು ದೊಡ್ಡ ಜಾತ್ರಾ ಮಹೋತ್ಸವದಲ್ಲಿ ಮೊದಲಿಗೆ ಶ್ರೀಕಂಠೇಶ್ವರಸ್ವಾಮಿ ರಥೋತ್ಸವ, ಪಾರ್ವತಿ ಅಮ್ಮನವರ ರಥೋತ್ಸವ, ಗಣಪತಿ, ಚಂಡಿಕೇಶ್ವರ ಮತ್ತು ಸುಬ್ರಮಣ್ಯ ರಥೋತ್ಸವಗಳನ್ನು ಮಾಡಲಾಗುತ್ತದೆ. ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥ ಕಟ್ಟುವ ಕಾರ್ಯ ನಡೆಯಲಿದೆ. ಇನ್ನು 25 ದಿನಗಳ ಒಳಗಾಗಿ ಐದು ರಥಗಳನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ.