ತೆಪ್ಪೋತ್ಸವದಲ್ಲಿ ಸುತ್ತೂರು ಮಠಾಧೀಶ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿರ್ಮಲಾನಂದ ಸ್ವಾಮೀಜಿ ಹಾಗೂ ಇತರ ಗಣ್ಯರು ಪಾಲ್ಗೊಂಡಿದ್ದರು.
ನಂಜನಗೂಡು: ತಾಲೂಕಿನ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಸೋಮವಾರ ರಾತ್ರಿ ಅದ್ದೂರಿ ಹಾಗೂ ವಿಜೃಂಭಣೆಯಿಂದ ತೆಪ್ಪೋತ್ಸವ ಜರುಗಿತು.
ಈ ಬಾರಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ವಿನೂತನವಾಗಿ ವಿನ್ಯಾಸಗೊಳಿಸಲಾದ ಮೋಟಾರ್ ಚಾಲಿತ ತೆಪ್ಪವನ್ನು ಬಳಸಲಾಗಿತ್ತು. ತೆಪ್ಪೋತ್ಸವದ ಜತೆಗೆ ವಿದ್ಯುತ್ ದೀಪಗಳಿಂದ ಅದ್ದೂರಿಯಾಗಿ ಅಲಂಕರಿಸಲಾಗಿತ್ತು. ಕಪಿಲಾ ನದಿಗೆ ಕಪಿಲಾರತಿ ಮತ್ತು ಬಾಣ ಬಿರುಸುಗಳ ಪ್ರದರ್ಶನ ಕೂಡ ನೆರವೇರಿತು. ಆದಿ ಜಗದ್ಗುರು ಶ್ರೀಶಿವರಾತ್ರಿ ಶಿವಯೋಗಿಗಳವರ ಉತ್ಸವ ಮೂರ್ತಿಯನ್ನು ಕುಳಿರಿಸಿ ಶಿವರಾತ್ರೀಶ್ವರ ಉತ್ಸವ ಮೂರ್ತಿಗೆ ಶತೋತ್ತರ ಶತ ಮಹಾರುದ್ರಾಭಿಷೇಕದ ಪೂಜೆ ನೆರವೇರಿಸಿ ಅಲಂಕೃತ ತೆಪ್ಪದಲ್ಲಿ ಕಪಿಲಾ ನದಿಯಲ್ಲಿ ನಡೆಸಲಾಯಿತು.
ತೆಪ್ಪೋತ್ಸವದಲ್ಲಿ ಆದಿಚುಂಚನಗಿರಿ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠಾಧೀಶ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕರಾದ ಅನಿಲ್ ಚಿಕ್ಕಮಾದು, ಎಂ.ಆರ್.ಮಂಜುನಾಥ್, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಪಾಲ್ಗೊಂಡಿದ್ದರು.