ನಂಜನಗೂಡು ದರೋಡೆ ಪ್ರಕರಣವನ್ನು ಬೇಧಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ ತಂಡ. 
ಮೈಸೂರು

ನಂಜನಗೂಡು ದರೋಡೆ ಪ್ರಕರಣ : ಕೇರಳ, ತಮಿಳುನಾಡಿನ 7 ಆರೋಪಿಗಳ ಬಂಧನ

ಮೈಸೂರು: ನಂಜನಗೂಡು ತಾಲೂಕಿನ ಸಿಂಧುವಳ್ಳಿಪುರ ಬಳಿ ಕೇರಳದ ಚಿನ್ನದ ವ್ಯಾಪಾರಿಗಳಿಂದ 85.70 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದ ಕೇರಳ ಹಾಗೂ ತಮಿಳುನಾಡಿನ 7 ದರೋಡೆಕೋರರನ್ನು ಜಿಲ್ಲೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ ಮೂವರು ಪ್ರಮುಖ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಕೇರಳದ ಕೋಜಿಕೋಡ್‌ನ ಅನ್ಸಿಲ್ ರೆಹಮಾನ್ ಹಾಗೂ ಮುಕ್‌ಸುದೂಲ್ ಹುಸೈನ್ ಜು.2 ರಂದು ಮೈಸೂರು ನಗರದಲ್ಲಿ ಚಿನ್ನ ಮಾರಾಟ ಮಾಡಿ ಅದರಿಂದ ದೊರೆತ 85.70 ಲಕ್ಷ ರೂ.ನೊಂದಿಗೆ ಕಾರಿನಲ್ಲಿ ಕೇರಳಕ್ಕೆ ತೆರಳುತ್ತಿದ್ದು. ಇವರು ಆಗಿಂದಾಗೆ ಕೇರಳದಿಂದ ನಗರಕ್ಕೆ ಆಗಮಿಸಿ ಚಿನ್ನ ಮಾರಾಟ ಮಾಡಿ ನಗದಿನೊಂದಿಗೆ ತೆರಳುತ್ತಿರುವುದನ್ನು ಗಮನಿಸಿದ ದರೋಡೆಕೋರರು ದರೋಡೆಗೆ ಸಂಚು ರೂಪಿಸಿ ದರೋಡೆ ನಡೆಸಿದ್ದರು.
ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನಂಜನಗೂಡು ಉಪ ವಿಭಾಗದ ಡಿಎಸ್‌ಪಿ ಧರ್ಮೇಂದ್ರ ನೇತೃತ್ವದಲ್ಲಿ 2 ತಂಡಗಳನ್ನು ರಚಿಸಿ ಪ್ರಕರಣದ ಪ್ರಮುಖ ಆರೋಪಿ ಕೇರಳದ ಮಲಪುರಂ ಜಿಲ್ಲೆಯ ವಳಪರಂಬ ನಿವಾಸಿ ಮೊಹಮ್ಮದ್ ಹರ್ಷದ್‌ನನ್ನು ಬಂಧಿಸಲಾಗಿದೆ. ಇದರೊಂದಿಗೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಎಸ್.ವಿ. ನಗರದ ಸುಧಾಕರ್, ಆರ್ತೋಪರೈನ ಜುನೈಲ್ ಅಬೀದ್, ಕಂಬಾಡಿಯ ನಿಶಾಮುದ್ದೀನ್, ಮಚ್ಚಿಕೊಳ್ಳಿಯ ಎ.ಆಸಿಫ್, ಮಚ್ಚಿಕೊಳ್ಳಿಮಟ್ಟಂ ನಿವಾಸಿಗಳಾದ ಉಬೈಸ್ ಹಾಗೂ ಟಿ.ಎಸ್. ಸುಫೈಲ್ ಎಂಬವರನ್ನು ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಮಲ್ಲಿಕ್, ಎಲ್. ನಾಗೇಶ್, ನಂಜನಗೂಡು ಉಪ ವಿಭಾಗದ ಡಿಎಸ್‌ಪಿ ಧರ್ಮೇಂದ್ರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಂಜನಗೂಡು ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆನಂದ್, ತಲಕಾಡು ಇನ್ಸ್‌ಪೆಕ್ಟರ್ ಶಿವನಂಜಶೆಟ್ಟಿ, ಸಿಡಿಆರ್ ಸೆಲ್‌ನ ಪಿಎಸ್‌ಐ ವಸಂತ್ ಕುಮಾರ್, ಪ್ರೊಬೇಷನರಿ ಪಿಎಸ್‌ಐ ಎಸ್. ಕಿಶೋರ್, ಹೆಡ್‌ಕಾನ್ಸ್‌ಟೇಬಲ್‌ಗಳಾದ ಬಿ. ಸುರೇಶ್, ಗೋವಿಂದರಾಜು, ಮಹದೇವಸ್ವಾಮಿ, ಪಿ.ಬಿ. ಸುರೇಶ್, ಅಬ್ದುಲ್ ಲತೀಫ್, ಪಿಸಿಗಳಾದ ಚೆಲುವರಾಜು, ಯು.ಎಸ್. ಶಿವಕುಮಾರ್, ರಾಹುಲ್ ಕಾಂಬ್ಳೆ, ಆರ್.ಆರ್. ಗಣೇಶ್, ನಾಗನಾಯಕ, ಬಿ. ಮಂಜುನಾಥ್, ಸುಶೀಲ್ ಕುಮಾರ್, ಪ್ರಸನ್ನ, ಸುನಿತಾ ಪಾಲ್ಗೊಂಡಿದ್ದರು.