ನಂಜನಗೂಡು ತಾಲೂಕಿನ ಶಿರಮಳ್ಳಿ ಡೇರಿಗೆ ಅವಿರೋಧ ಆಯ್ಕೆಯಾದ ಅಧ್ಯಕ್ಷ ಶಿವಶಂಕರಪ್ಪ, ಉಪಾಧ್ಯಕ್ಷೆ ಮೀನಾಕ್ಷಿ ಅವರನ್ನು ಗೌರವಿಸಲಾಯಿತು. ಡೇರಿ ನಿರ್ದೇಶಕರಾದ ಶ್ರೀಕಂಠ ಸ್ವಾಮಿ, ಮಹದೇವಸ್ವಾಮಿ, ಚಂದ್ರಶೇಖರ್, ಚನ್ನಬಸವಣ್ಣ, ಶಿವಕುಮಾರ್, ಎಸ್. ಎನ್. ಮಹದೇವಸ್ವಾಮಿ ಇತರರು ಇದ್ದರು.
ವಿಜಯವಾಣಿ ಸುದ್ದಿ ಜಾಲ ನಂಜನಗೂಡು
ತಾಲೂಕಿನ ಶಿರಮಳ್ಳಿ ಡೇರಿ ಅಧ್ಯಕ್ಷರಾಗಿ ಶಿವಶಂಕರಪ್ಪ, ಉಪಾಧ್ಯಕ್ಷರಾಗಿ ಮೀನಾಕ್ಷಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಂದಿನ ಎರಡು ವರ್ಷಗಳ ಅವಧಿಗೆ ಸಂಘದ ಆವರಣದಲ್ಲಿ ಆಯೋಜಿಸಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ. ಶಿವಶಂಕರಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಮೀನಾಕ್ಷಿ ಹೊರತುಪಡಿಸಿ ಯಾವುದೇ ಉಮೇದುವಾರಿಕೆ ಸಲ್ಲಿಕೆಯಾಗದ ಕಾರಣ ಚುನಾವಣೆ ಅಧಿಕಾರಿಯಾಗಿದ್ದ ಮೃತ್ಯುಂಜಯಮೂರ್ತಿ ಅವರು ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ಬಳಿಕ ಮಾತನಾಡಿದ ಅಧ್ಯಕ್ಷ ಶಿವಶಂಕರಪ್ಪ, ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ. ಮುಂಬರುವ ದಿನಗಳಲ್ಲಿ ಸಂಘದಲ್ಲಿ ಹೆಚ್ಚಿನ ಹಾಲು ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ತಾಲೂಕು ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡುವೆ ಎಂದು ಭರವಸೆ ನೀಡಿದರು.
ಡೇರಿ ನಿರ್ದೇಶಕರಾದ ಶ್ರೀಕಂಠ ಸ್ವಾಮಿ, ಮಹದೇವಸ್ವಾಮಿ, ಚಂದ್ರಶೇಖರ್, ಚನ್ನಬಸವಣ್ಣ, ಶಿವಕುಮಾರ್, ಎಸ್. ಎನ್. ಮಹದೇವಸ್ವಾಮಿ, ಸಿದ್ದರಾಜು, ಪ್ರಭಾ ಮಣಿ, ಗಣೇಶ, ಗ್ರಾಮಸ್ಥದ ಮುಖಂಡರಾದ ರಾಜಶೇಖರ ಮೂರ್ತಿ, ಮಹೇಂದ್ರ, ಪರ್ವತಪ್ಪ, ಗುರುಸ್ವಾಮಪ್ಪ, ಮೊಳ್ಳೆಗೌಡ, ಚನ್ನಬಸವಣ್ಣ ಹಾಜರಿದ್ದರು.