ದೇವಾಲಯದ ಸ್ವಾಮಿಯ ಗರ್ಭಗುಡಿಯಲ್ಲಿ ಪ್ರಸಾದಕ್ಕಾಗಿ ಕಾಯುತ್ತಾ ನಿಂತಿರುವ ನಂದಿ.  
ಮೈಸೂರು

ವಿಷಕಂಠನ ಸನ್ನಿಧಿಗೆ ನಂದಿಯ ಆಗಮನ

ನಂಜನಗೂಡು: ಎರಡು ದಿನಗಳಿಂದ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಗಿರಿಜಾ ಕಲ್ಯಾಣ ಮಹೋತ್ಸವದ ಶುಭ ಸಮಾರಂಭದಲ್ಲಿ ವಿಷಕಂಠನ ಸನ್ನಿಧಿಗೆ ನಂದಿ ಅತಿಥಿಯಾಗಿ ಆಗಮಿಸಿರುವುದು ಎಲ್ಲರಲ್ಲೂ ಸಂತಸ ತಂದಿದೆ.
ಹಲವು ವರ್ಷಗಳ ಹಿಂದೆ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಗಜರಾಣಿ ‘ಗೌರಿ’ (ಹಸು) ಮನೆ ಮಾತಾಗಿತ್ತು. ದೇವಾಲಯದ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುತ್ತಿತ್ತು. ಗೌತಮ ಪಂಚ ಮಹಾ ರಥೋತ್ಸವ ಸಂದರ್ಭದಲ್ಲಿ ರಥಗಳ ಹಿಂದೆ ಗೌರಿ ಗಾಂಭೀರ್ಯದಲ್ಲಿ ಹೆಜ್ಜೆ ಹಾಕುತ್ತಿತ್ತು. ಯಾರಿಗೂ ತೊಂದರೆ ನೀಡದೆ ಭಕ್ತರನ್ನು ಆಶೀರ್ವದಿಸುತ್ತಿತ್ತು. ಗೌರಿ ಕಾಲಿಗೆ ಗಾಯವಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಆನೆ ಪುರ್ನವಸತಿ ಕೇಂದ್ರಕ್ಕೆ ಬಿಡಲಾಗಿತ್ತು. ಸುಮಾರು 7 ವರ್ಷಗಳು ದೇವಾಲಯದಲ್ಲಿ ಯಾವುದೇ ಪ್ರಾಣಿಗಳು ಆಶ್ರಯ ಪಡೆದಿರಲಿಲ್ಲ. ಆ ಕೊರಗನ್ನು ನೀಗಿಸಲು ಮಂಗಳೂರು ಗಿಡ್ಡ ತಳಿಯ ನಂದಿ ಆಗಮನವಾಗಿದೆ.
ಸುಮಾರು 6 ವಯಸ್ಸಿನ ಮಂಗಳೂರು ಮೂಲದ ಮಂಗಳೂರು ಗಿಡ್ಡ ತಳಿಗೆ ಸೇರಿದ ನಂದಿ ಸದ್ಯಕ್ಕೆ ದೇವಾಲಯದ ಕೇಂದ್ರ ಬಿಂದುವಾಗಿದೆ. ಮುಂಜಾನೆ ಹಾಗೂ ಸಂಜೆ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ ಗರ್ಭ ಗುಡಿಗೆ ಬಂದು ಪ್ರಸಾದ ಸ್ವೀಕರಿಸುವುದು ಇದರ ನಿತ್ಯ ಕಾಯಕ. ಕುಳ್ಳನೆಯ ದೇಹ, ಮುದ್ದು ಮುಖ ಕಾಲಿಗೆ ಗೆಜ್ಜೆ ಭಕ್ತರನ್ನು ಕಂಡರೆ ತೋರುವ ತುಂಟತನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಗೋ ಶಾಲೆಯಲ್ಲಿರುವ ಗೌರಿ (ಹಸು) ಹಾಲಿನಲ್ಲಿ ಸ್ವಾಮಿಯವರಿಗೆ ನಿತ್ಯ ಅಭಿಷೇಕ ನೆರವೇರಿಸಲಾಗುತ್ತಿದೆ. ಗೌರಿಯು ಸದ್ಯ ದೇವಾಲಯದ ಗೋಶಾಲೆಯಲ್ಲಿ ಆಶ್ರಯ ಪಡೆದಿದೆ. ದಿನಕ್ಕೆ 4-5 ಲೀಟರ್ ಹಾಲು ನೀಡುವ ಗೌರಿಯ ಶುದ್ಧ ಹಾಲನ್ನು ಸ್ವಾಮಿಯ ಅಭಿಷೇಕಕ್ಕೆ ಬಳಸಲಾಗುತ್ತಿದೆ. ಸದ್ಯಕ್ಕೆ ನಂದಿ ಮತ್ತು ಗೌರಿ ಹಾಗೂ ಕರುವನ್ನು ಸಾಕುವ ಜವಾಬ್ದಾರಿ ಆನೆ ಮಾವುತ ಬಶೀರ್ ಹೆಗಲ ಮೇಲಿದೆ.