ನಂದಾ ಹಳೆಮನೆ ಹಾಗೂ ಚಂದ್ರಪ್ಪ
ರಂಗಭೂಮಿ, ಸೃಜನಶೀಲ ಬರವಣಿಗೆ, ಅನುವಾದ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ನಂದಾ ಹಳೆಮನೆ ಅವರಿಗೆ 2026-27ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಲಭಿಸಿದೆ.
ರಂಗಭೂಮಿಯನ್ನು ಕೇವಲ ಕಲಾ ಪ್ರದರ್ಶನಕ್ಕೆ ಸೀಮಿತಗೊಳಿಸದೆ, ಸಾಮಾಜಿಕ ಜಾಗೃತಿ ಮೂಡಿಸುವ ಮಾಧ್ಯಮವಾಗಿ ಬಳಸಿಕೊಂ ಡಿರುವ ನಂದಾ ಹಳೆಮನೆ ಅವರು ಹಲವು ವರ್ಷಗಳಿಂದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಬೀದಿ ನಾಟಕಗಳ ಮೂಲಕ ಸಾಕ್ಷರತೆ, ಪರಿಸರ ಸಂರಕ್ಷಣೆ, ಸ್ವಚ್ಛತೆ ಸೇರಿದಂತೆ ಜನಪರ ವಿಷಯಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳ ಸಂಪೂರ್ಣ ಸಾಕ್ಷರತಾ ಅಭಿಯಾನಕ್ಕಾಗಿ ಬೀದಿ ನಾಟಕವನ್ನು ನಿರ್ದೇಶನ ಮಾಡಿದ್ದಾರೆ. ಸೃಜನಶೀಲ ಬರವಣಿಗೆಯಲ್ಲೂ ತಮ್ಮದೇ ಛಾಪು ಮೂಡಿಸಿರುವ ನಂದಾ ಹಳೆಮನೆ ಅವರ ರಸ ನೆನಪುಗಳು ಕೃತಿ ಸೇರಿದಂತೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ. ರಸ ನೆನಪುಗಳು ಪ್ರಬಂಧವು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ವಾರ್ಷಿಕ ಪ್ರಬಂಧ ಸಂಕಲನದಲ್ಲೂ ಸ್ಥಾನ ಪಡೆದಿದೆ.
ಅನುವಾದ ಕ್ಷೇತ್ರದಲ್ಲೂ ಅವರು ಗಮನಾರ್ಹ ಕೆಲಸ ಮಾಡಿದ್ದಾರೆ. ಜಪಾನ್‌ನ ಪ್ರಸಿದ್ಧ ಕೃತಿ ಟೊಟ್ಟೋ-ಚಾನ್‌ಅನ್ನು ಕನ್ನಡಕ್ಕೆ ತಂದಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕೆಸ್ ಅವರ ಸಂದರ್ಶನವನ್ನೂ ಕನ್ನಡಕ್ಕೆ ಅನುವಾದಿ ಸಿದ್ದಾರೆ. ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತಾ ಅಭಿಯಾನದಲ್ಲಿಯೂ ನಂದಾ ಹಳೆಮನೆ ಅವರ ಕೊಡುಗೆ ಗಮನಾರ್ಹವಾಗಿದೆ. ಸಾಹಿತ್ಯ, ರಂಗಭೂಮಿ, ಸಾಕ್ಷರತಾ ಚಳವಳಿ ಮತ್ತು ಪರಿಸರ ಜಾಗೃತಿ ಹೀಗೆ ಹಲವು ಕ್ಷೇತ್ರಗಳನ್ನು ಬೆಸೆದುಕೊಂಡು ಸಮಾಜಮುಖಿ ಕೆಲಸ ಮಾಡಿರುವ ನಂದಾ ಹಳೆಮನೆ ಅವರ ಬಹುಮುಖ ಸೇವೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಹೊಸ ಗರಿ ಮೂಡಿಸಿದೆ.
ಕರ್ನಾಟಕ ನಾಟಕ ಅಕಾಡೆಮಿ ನೀಡುವ 2026-27ನೇ ಸಾಲಿನ ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ ತಿ.ನರಸೀಪುರದ ಡಾ.ಎಂ. ಚಂದ್ರಪ್ಪ ಅವರಿಗೆ ಒಲಿದಿದೆ.
ಸಮುದಾಯ ರಂಗ ತಂಡದ ಮೂಲಕ 1995ರಲ್ಲಿ ರಂಗಭೂಮಿ ಪ್ರವೇಶಿಸಿದ ಅವರು ನಂತರ ಹಲವು ವರ್ಷಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯವಾಗಿ ದುಡಿದರು. ಕಲಾವಿದರಾಗಿ, ನಿರ್ದೇಶಕರಾಗಿ ಅವರು ರಂಗಭೂಮಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಪ್ರಸ್ತುತ ಅವರು ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.