ಮೈಸೂರಿನ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಉದ್ಘಾಟಿಸಿ ದರು. ಡಾ.ನಾಗರಾಜು ವಿ. ಭೈರಿ, ಡಾ.ನಾ. ಗಂಗಾಧರಪ್ಪ, ಶ್ರೀಕಂಠೇಶ್ ಪರಿಸರಪ್ರಿಯ, ಶ್ರೀಮತಿ ಪ್ರಭಾಶಾಸ್ತ್ರಿ ಜೋಶ್ಯುಲ ಹಾಗೂ ಇತರರು ಇದ್ದರು.
ಮೈಸೂರು: ನಾಡು, ನುಡಿಯ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಬಣ್ಣಿಸಿದರು.
ನನ್ನನ್ವ ಸಾಂಸ್ಕೃತಿಕ ಕಲಾತಂಡದ ವತಿಯಿಂದ ನಗರದ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ಗುರುವಾರ ಆಯೋಜಿ ಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜಪ್ರಭುತ್ವದಲ್ಲೂ ಪ್ರಜಾಪ್ರಭುತ್ವದ ಮಾದರಿಯ ಆಡಳಿತ ನೀಡಿದ್ದರು. ಜನರ ಧ್ವನಿಯನ್ನು ಆಲಿಸಲು ಪ್ರಜಾಪ್ರತಿನಿಧಿ ಸಭೆ ಪ್ರಾರಂಭಿಸಿದ್ದರು. ಪ್ರತಿಯೊಂದು ಜಿಲ್ಲೆಯಿಂದ ಒಬ್ಬರು ಪ್ರತಿನಿಧಿ ಸಭೆಯಲ್ಲಿ ಪಾಲ್ಗೊಂಡು ಆಡಳಿತ ಸುಧಾರಣೆಗೆ ಸಲಹೆಗಳನ್ನು ನೀಡುತ್ತಿದ್ದರು ಎಂದರು.
ಪ್ರತಿಯೊಬ್ಬರಿಗೂ ಉತ್ತಮ ಜೀವನ ದೊರೆಯಬೇಕು ಎಂಬ ಉದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಶೋಷಿತ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಅವರಿಗೆ ಮೀಸಲಾತಿ ನೀಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯ ಕುರಿತು ಚಿಂತನೆ ನಡೆಸಿದ ನಾಲ್ವಡಿ ಅವರನ್ನು ನಾವೆಲ್ಲರು ಸ್ಮರಿಸಬೇಕು ಎಂದು ಹೇಳಿದರು.
ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಡಾ.ನಾಗರಾಜು ವಿ. ಭೈರಿ, ನಿವೃತ್ತ ಶಿಕ್ಷಕ ಡಾ.ನಾ. ಗಂಗಾಧರಪ್ಪ, ಶಿಕ್ಷಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಶ್ರೀಕಂಠೇಶ್ ಪರಿಸರಪ್ರಿಯ, ಸುತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜೀಮಾರಹಳ್ಳಿ ರಂಗಸ್ವಾಮಿ, ಆಕಾಶವಾಣಿ ನಿವೃತ್ತ ಕಾರ್ಯಕ್ರಮ ಅಧಿಕಾರಿ ಎನ್.ವಿ.ರಮೇಶ್, ಕವಯತ್ರಿ, ಶ್ರೀಮತಿ ಪ್ರಭಾಶಾಸ್ತ್ರಿ ಜೋಶ್ಯುಲ, ನನ್ನವ್ವ ಸಾಂಸ್ಕೃತಿಕ ಕಲಾತಂಡದ ಅಧ್ಯಕ್ಷ ಯಾಚೇನಹಳ್ಳಿ ಮಹದೇವ ಹಾಗೂ ಇತರರು ಇದ್ದರು.