ಮೈಸೂರು ನಗರದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಗುರುವಾರ ‘ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು’ ಕೃತಿಯನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಬಿಡುಗಡೆ ಮಾಡಿದರು. ಪ್ರೊ.ಓ.ಎಲ್. ನಾಗಭೂಷಣ, ಪ್ರೊ.ಎಸ್.ಚಂದ್ರಶೇಖರ್, ಡಾ.ನಂಜಯ್ಯ ಹೊಂಗನೂರು, ಡಾ.ಸಂಗಮೇಶ ಉಪಾಸೆ ಹಾಗೂ ಇತರರು ಇದ್ದರು. 
ಮೈಸೂರು

ಆದರ್ಶ ರಾಜ ಹೇಗಿರಬೇಕು ಎಂಬುದಕ್ಕೆ ನಾಲ್ವಡಿ ಅತ್ಯುತ್ತಮ ಮಾದರಿ : ಬರಗೂರು ರಾಮಚಂದ್ರಪ್ಪ

ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜ ಪ್ರಭುತ್ವದಲ್ಲಿ ಪ್ರಜಾಪ್ರಭುತ್ವದ ಮಾದರಿಯ ಆಡಳಿತ ನೀಡಿದರು. ಆದರ್ಶ ರಾಜ ಹೇಗಿರಬೇಕು ಎಂಬುದಕ್ಕೆ ನಾಲ್ವಡಿ ಅತ್ಯುತ್ತಮ ಮಾದರಿ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಗುರುವಾರ ನಗರದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ‘ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ನಾಲ್ವಡಿಯರು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಅನೇಕ ಸಾಧನೆ ಮಾಡಿದ್ದಾರೆ. ನಾಲ್ವಡಿಯವರು ತೋರಿದ ಧಾರ್ಮಿಕ ಸಾಮರಸ್ಯ ವರ್ತಮಾನಕ್ಕೆ ದೊಡ್ಡಮೌಲ್ಯ. ದೇಶಕ್ಕೆ ಬೇಕಾಗಿರುವುದು ಸೌಹಾರ್ದತೆ, ಸಮಾನತೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ತಾಂತ್ರಿಕ ಅಂಶ. ತಾತ್ವಿಕ ಅಂಶಗಳಾದ ಸಮಾನತೆ, ಸೌಹಾರ್ದತೆ, ತಾತ್ವಿಕತೆ ಅನುಷ್ಠಾನಕ್ಕೆ ತರಬೇಕು ಎಂದರು.
ಹಿರಿಯ ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣ ಸ್ವಾಮಿ ಮಾತನಾಡಿ, ನಾಲ್ವಡಿಯರಿಗೆ ಅನೇಕ ಬಿಕ್ಕಟ್ಟುಗಳಿದ್ದರೂ ಜನಪರವಾದ ಕೆಲಸ ಮಾಡಿದರು. ಆಡಳಿತ ಹಕ್ಕು, ಅಧಿಕಾರ ಎಂದುಕೊಳ್ಳದೇ ಜವಾಬ್ದಾರಿಯುತವಾಗಿ ನಿರ್ವಹಿಸಿದರು ಎಂದು ಹೇಳಿದರು.
ಪ್ರಜಾಪ್ರಭುತ್ವ ಸಂಸ್ಥೆಗಳು ಕುಸಿದು ಬೀಳುತ್ತಿವೆ. ವಿಶ್ವವಿದ್ಯಾನಿಲಯಗಳನ್ನು ಸರ್ಕಾರಗಳು, ರಾಜಕಾರಣಿಗಳು, ಅಧ್ಯಾಪಕರು, ವಿದ್ಯಾರ್ಥಿಗಳಿಂದ ತೀವ್ರ ನಿರ್ಲಕ್ಷೃಕ್ಕೆ ಗುರಿಯಾಗಿವೆ. ಓದುವುದರಿಂದ ಏನಾಗುತ್ತದೆ ಎಂಬ ಉದಾಸೀನ ಮತ್ತು ಉಢಾಪೆ ಅಘಾತಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ಪಿಎಚ್.ಡಿಗೆ ಗೌರವ ಹೊರಟು ಹೋಗಿದೆ. ಜೀವನ ನಿರ್ವಹಣೆಗಾಗಿ ಪಿಎಚ್.ಡಿ ಮಾಡಲಾಗುತ್ತಿದೆ. ಗೈಡ್‌ಗಳು ಋಣ ಸಂದಾಯದ ಹೆಸರಿನಲ್ಲಿ ಉಡುಗೊರೆ ಕೊಡುವಂತೆ, ಕಾರು ಕೊಡಿಸುವಂತೆ, ತಮ್ಮ ಮಕ್ಕಳ ಬರ್ತಡೇ ಮಾಡುವಂತೆ ಕೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಲೇಖಕ ಪ್ರೊ.ಎಸ್.ಚಂದ್ರಶೇಖರ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ನಂಜಯ್ಯ ಹೊಂಗನೂರು, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಡಾ.ಸಂಗಮೇಶ ಉಪಾಸೆ, ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಬೆಂಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಹಾಗೂ ಇತರರು ಇದ್ದರು