ಸರಗೂರಿನ ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರಂಗನಾಥ್, ಪ್ರೇಮಕುಮಾರ್, ನಿಂಗರಾಜು, ಪರಶಿವಮೂರ್ತಿ, ಪ್ರಕಾಶ್, ಶ್ರೀನಿವಾಸ ಇತರರು ಇದ್ದರು.
ಸರಗೂರು: ಕನ್ನಡ ನಾಡು ನುಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ ಎಂದು ಹಳಿಯೂರು ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರಂಗನಾಥ್ ಹೇಳಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಉದ್ಘಾಟಿಸಿ ಮಾತನಾಡಿದರು. ನಾಲ್ವಡಿ ಅವರು ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುತ್ತಿದ್ದರು. ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕತೆ ಕಡೆ ಹೆಚ್ಚು ಗಮನಹರಿಸಿದ್ದರು. ಅವರ ಆಡಳಿತ ಅವಧಿಯಲ್ಲಿ ಜಾತಿಯ ತಾರತಮ್ಯ ಮತ್ತು ಬಾಲ್ಯವಿವಾಹವನ್ನು ನಿಷೇಧಿಸಿದ್ದರು ಎಂದು ಸ್ಮರಿಸಿದರು.
ತಾಪಂ ಇಒ ಪ್ರೇಮ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿಗೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳನ್ನು ರಚಿಸಿ, ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟ ಮೊದಲಿಗರು ಅವರು. ರಾಜ್ಯದ ಸಣ್ಣ ಪುಟ್ಟ ಪಟ್ಟಣಗಳಲ್ಲಿ ಮುನ್ಸಿಪಲ್ ರಚನೆ ಮಾಡಿದರು. ಹಳ್ಳಿಗಳಲ್ಲಿ ಮೊದಲ ಬಾರಿಗೆ ಗ್ರಾಮ ಆಡಳಿತ ಪ್ರಾರಂಭವಾಗಿದ್ದು ಇವರ ಕಾಲದಲ್ಲೇ ಎಂದರು.
ಅರಸು ಸಮಾಜದ ಅಧ್ಯಕ್ಷ ಪ್ರಕಾಶ್, ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಮಾತನಾಡಿದರು.
ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ಪರಶಿವಮೂರ್ತಿ, ಕಸಾಪ ಅಧ್ಯಕ್ಷ ಕೆಂಡಗಣ್ಣ ಸ್ವಾಮಿ, ಕಸಾಪ ಕಾರ್ಯದರ್ಶಿ ನಿಂಗರಾಜು ಹೂವಿನಕೊಳ, ಪಪಂ ಅಧ್ಯಕ್ಷೆ ಚೈತ್ರಾ ಸ್ವಾಮಿ, ಪಪಂ ಸದಸ್ಯ ಶ್ರೀನಿವಾಸ್, ವರ್ತಕ ಸಂಘದ ಅಧ್ಯಕ್ಷ ಎಸ್.ಪಿ. ಪ್ರಸಾದ್, ಮನೋಹರ್, ರವಿಚಂದ್ರ ಇತರರು ಇದ್ದರು.