ಚಪ್ಪರದಹಳ್ಳಿಯಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಸಡಗರ ಸಂಭ್ರಮದಿಂದ ನಡೆಯಿತು.
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ಮಂಗಳವಾರ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಸಡಗರ ಸಂಭ್ರಮದಿಂದ ಸಂಪನ್ನಗೊಂಡಿತು.
ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಆರಂಭಗೊಂಡವು. ಬೆಳಗ್ಗೆ ಗ್ರಾಮದ ಕೆರೆಯಲ್ಲಿ ದೇವಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ವಿವಿಧ ಪುಷ್ಪಗಳಿಂದ ಅಲಂಕಾರಗೊಂಡ ಪಲ್ಲಕ್ಕಿ ಮೇಲೆ ಪ್ರತಿಷ್ಠಾಪಿಸಿ ವಾದ್ಯ ಮತ್ತು ವೀರಗಾಸೆ ಕುಣಿತದೊಂದಿಗೆ ಪ್ರಮುಖ ರಸ್ತೆ, ಬೀದಿಗಳಲ್ಲಿ ಮೆರವಣಿಗೆ ಭಕ್ತರೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಮಹಿಳೆಯರಿಂದ ವಿಶೇಷ ಪೂಜೆ: ದೇವಿಯ ಮಹಿಳಾ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿಶೇಷವಾಗಿ ಪೂಜಿ ಸಲ್ಲಿಸಿದರು. ನೂರಾರು ಮಹಿಳೆಯರು ಬಿದಿರು ಕುಕ್ಕೆಯಲ್ಲಿ ಪೂಜಾ ಸಾಮಗ್ರಿಗಳು, ಹಣ್ಣುಗಳನ್ನು ತುಂಬಿಕೊಂಡು ಬಂದು ದೇವಿಯ ಮೆರವಣಿಗೆಯೊಂದಿಗೆ ಹೆಜ್ಜೆ ಹಾಕಿ, ಬಳಿಕ ಗ್ರಾಮದ ಹೊರ ವಲಯದ ಗದ್ದಿಗೆಯ ಬಳಿ ವಿಶೇಷ ಪೂಜೆ ಸಲ್ಲಿಸಿದರು. ಗದ್ದಿಗೆಯ ಬಳಿ ಧಾರ್ಮಿಕ, ಸಂಪ್ರದಾಯಕ ಹಾಗೂ ವಿಶೇಷವಾಗಿ ದೇವಿಯ ಆರಾಧನೆ ಮಾಡಲಾಯಿತು.
ಗಮನ ಸೆಳೆದ ವೀರಗಾಸೆ ನೃತ್ಯ: ಗ್ರಾಮದ ಚಾಮುಂಡೇಶ್ವರಿ ದೇವಿಯ ಉತ್ಸವ ಹಿನ್ನಲೆ ಆಗಮಿಸಿದ ಕರ್ನಾಟಕದ ಸಾಂಪ್ರದಾಯಿಕ ಮತ್ತು ಅತ್ಯಂತ ಶಕ್ತಿಶಾಲಿ ಜಾನಪದ ಕಲೆಯಾದ ವೀರಗಾಸೆ ನೃತ್ಯ ತಂಡದವರು, ತಮ್ಮ ರುದ್ರನರ್ತನ, ತೀವ್ರತೆ ಮತ್ತು ಭಕ್ತಿಭಾವದಿಂದ ನೋಡುಗರ ಗಮನ ಸೆಳೆದರು. ವೀರಗಾಸೆ ಹಾಗೂ ದೇವಿಯ ಉತ್ಸವ ಸಂದರ್ಭದಲ್ಲಿ ಗ್ರಾಮದ ಭಕ್ತರು ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.
ದೇಗುಲದಲ್ಲಿ ನಡೆದ ಪೂಜಾ ಕೈಕಂರ್ಯಗಳಲ್ಲಿ ಸುತ್ತಮುತ್ತಲ ಗ್ರಾಮದ ಭಕ್ತರು, ದೇವಿಯ ಕುಲದ ಭಕ್ತರಿಗೆ ಕುಟುಂಬದೊಂದಿಗೆ ಆಗಮಿಸಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.