ಮೈಸೂರು ವಿಶ್ವವಿದ್ಯಾಲಯದಿಂದ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿಗೆ ಮೂವರು ಮಹನೀಯರು ಭಾಜನ
- ಎಸ್.ವಿ.ರಾಜೇಂದ್ರಸಿಂಗ್ ಬಾಬು, ಡಾ.ಟಿ.ಶ್ಯಾಮ್ ಭಟ್, ಪಿ.ಜಯಚಂದ್ರ ರಾಜು ಪುರಸ್ಕಾರಕ್ಕೆ ಭಾಜನ
- ಮೈವಿವಿ 106ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಈ ಮಹನೀಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ
ಮೈಸೂರು: ಮೈಸೂರು ವಿಶ್ವವಿದ್ಯಾಲಯದಿಂದ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿಗೆ ಮೂವರು ಮಹನೀಯರು ಭಾಜನರಾಗಿದ್ದಾರೆ.
ಕನ್ನಡ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಎಸ್.ವಿ.ರಾಜೇಂದ್ರಸಿಂಗ್ ಬಾಬು, ನಿವೃತ್ತ ಐಎಎಸ್ ಅಧಿಕಾರಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಮತ್ತು ನಗರದ ಗ್ಲೋಬಲ್ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಪಿ.ಜಯಚಂದ್ರ ರಾಜು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಗೌಡಾ ಆಯ್ಕೆಗಾಗಿ ರಾಜ್ಯಪಾಲರು ರಚನೆ ಮಾಡಿದ ಸಮಿತಿಗೆ 26 ಹೆಸರುಗಳು ಬಂದಿದ್ದವು. ಈ ಪೈಕಿ ಕೆಲವರ ಶಿಫಾರಸುಗಳೂ ಇದ್ದವು. ಅವುಗಳನ್ನು ಪರಿಶೀಲಿಸಿ ರಾಜ್ಯಪಾಲರು ಹೆಸರನ್ನು ಅಂತಿಮಗೊಳಿಸಿದ್ದು, ಇದರಲ್ಲಿ ಮೈವಿವಿ ಪಾತ್ರ ಇಲ್ಲ. ಸರ್ಕಾರಿ ಅಧಿಕಾರಿಯಾಗಿದ್ದವರಿಗೆ ಈ ಪದವಿ ಕೊಡಬಾರದು ಎಂಬ ನಿಯಮ ಎಲ್ಲೂ ಇಲ್ಲ.
ಶ್ಯಾಮ್ ಭಟ್ ಸೇವೆಯನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗುತ್ತಿದೆ ಎಂದು ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಶನಿವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.
ಜ.5ರಂದು ಬೆಳಗ್ಗೆ 11.30ಕ್ಕೆ ಆಯೋಜಿಸಿರುವ ಮೈವಿವಿ 106ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಈ ಮಹನೀಯರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್‌ಚಂದ್‌ಗೆಹಲೋತ್ ಪ್ರದಾನ ಮಾಡಲಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಶ್ರಾಂತ ಅಧ್ಯಕ್ಷ ಡಾ.ಎಸ್.ಸೋಮನಾಥ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
30,966 ಅಭ್ಯರ್ಥಿಗಳಿಗೆ ವಿವಿಧ ಪದವಿ, 449 ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುತ್ತದೆ. 442 ಪದಕಗಳು, 197 ಬಹುಮಾನಗಳನ್ನು 213 ಅಭ್ಯರ್ಥಿಗಳು ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.