ಪುಸ್ತಕಪ್ರೇಮಿ ಡಾ.ಎಚ್.ಬಿ.ಬೆಟ್ಟಸ್ವಾಮಿ  
ಮೈಸೂರು

ಮೈಸೂರಿನ ಪುಸ್ತಕಪ್ರೇಮಿ ಬೆಟ್ಟಸ್ವಾಮಿಗೆ ಒಲಿದ ನಂಜನಗೂಡು ತಿರುಮಲಾಂಬ ಪ್ರಶಸ್ತಿ

ಮೈಸೂರು: ಪುಸ್ತಕ ಓದುವ ಸಂಸ್ಕೃತಿ ಉತ್ತೇಜಿಸುವಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಕುವೆಂಪುನಗರದ ಬಿಜಿಎಸ್ ಬಿಇಡಿ ಕಾಲೇಜಿನ ಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಬಿ.ಬೆಟ್ಟಸ್ವಾಮಿ ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರತಿಷ್ಠಿತ ನಂಜನಗೂಡು ತಿರುಮಲಾಂಬ ಪ್ರಶಸ್ತಿ ಲಭಿಸಿದೆ.

ಅಪಾರ ಪುಸ್ತಕ ಪ್ರೇಮಿಯಾಗಿರುವ ಡಾ. ಬೆಟ್ಟಸ್ವಾಮಿ ಅವರು ತಮ್ಮ ನಿವಾಸದಲ್ಲೇ ವಿವಿಧ್ ವಾಚನಾಲಯ ಎಂಬ ಗ್ರಂಥಾಲಯ ಸ್ಥಾಪಿಸಿದ್ದು, ಅದರಲ್ಲಿ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳ 15,000ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಪುಸ್ತಕ ಓದುವುದರಿಂದ ದೊರೆಯುವ ಜ್ಞಾನ ಮತ್ತು ಅನುಭವಕ್ಕೆ ಪರ್ಯಾಯವೇ ಇಲ್ಲ ಎಂಬ ನಂಬಿಕೆಯನ್ನು ಹೊಂದಿರುವ ಅವರು, ತಮ್ಮ ಸಂಗ್ರಹದಲ್ಲಿರುವ ಪುಸ್ತಕಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಹಾಗೂ ಪುಸ್ತಕಾಸಕ್ತರು ಬಳಸಿಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ.
ಸ್ವತಃ ಲೇಖಕರಾಗಿರುವ ಡಾ. ಬೆಟ್ಟಸ್ವಾಮಿ ಅವರು ಕನ್ನಡ ಪುಸ್ತಕ ಲೋಕಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪುಸ್ತಕಗಳ ಮೇಲಿನ ಅವರ ಅಭಿರುಚಿ ಮತ್ತು ಓದು ಸಂಸ್ಕೃತಿ ಬೆಳೆಸುವ ಸೇವೆಯನ್ನು ಗುರುತಿಸಿ ಕನ್ನಡ ಪುಸ್ತಕ ಪ್ರಾಧಿಕಾರವು ಈ ಹಿಂದೆ ಅವರ ಮನೆಯಲ್ಲಿ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿತ್ತು. ಈಗ ಅವರ ಪುಸ್ತಕ ಸಂರಕ್ಷಣೆ ಹಾಗೂ ಸಮಾಜದಲ್ಲಿ ವಾಚನ ಸಂಸ್ಕೃತಿ ಬೆಳೆಸುವ ಕಾರ್ಯವನ್ನು ಪರಿಗಣಿಸಿ ಕನ್ನಡ ಪುಸ್ತಕ ಪ್ರಾಧಿಕಾರವು ನಂಜನಗೂಡು ತಿರುಮಲಾಂಬ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಡಾ. ಎಚ್.ಬಿ.ಬೆಟ್ಟಸ್ವಾಮಿ, ಕಳೆದ 20 ವರ್ಷಗಳಿಂದ ನಿರಂತರವಾಗಿ ಪುಸ್ತಕವನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದೇನೆ. ಯುವಜನರಲ್ಲಿ ಪುಸ್ತಕ ಪ್ರೀತಿ ಬೆಳೆಸುವ ಪ್ರಯತ್ನ ನಡೆಸುತ್ತಿದ್ದೇನೆ. ನನ್ನ ಈ ಸೇವೆ ಗುರುತಿಸಿ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದರು.
ಬೋಗಾದಿಯ ಎಸ್‌ಬಿಎಂ ಲೇಔಟ್‌ನಲ್ಲಿ ನನ್ನ ಮನೆ ಇದ್ದು, ಮನೆಯಲ್ಲಿಯೇ ಗ್ರಂಥಾಲಯ ನಿರ್ಮಾಣ ಮಾಡಿದ್ದೇನೆ. ನನ್ನ ಬಳಿ 15 ಸಾವಿರ ಕೃತಿಗಳ ಸಂಗ್ರಹ ಇದೆ. ಕನ್ನಡ ಪುಸ್ತಕ ಓದುವ ಸಂಸ್ಕೃತಿ ಮರೆಯಾದರೆ ಕನ್ನಡ ಸಂಸ್ಕೃತಿ ಮರೆಯಾಗುವ ಆತಂಕ ಇದೆ. ಒಬ್ಬ ನಿಜವಾದ ಕನ್ನಡಿಗನನ್ನು ಪುಸ್ತಕ ರೂಪಿಸುತ್ತದೆ. ಹಾಗಾಗಿ ಎಲ್ಲರಲ್ಲೂ ಪುಸ್ತಕ ಪ್ರೀತಿ ಬೆಳೆಸಬೇಕು. ಈ ನಿಟ್ಟಿನಲ್ಲಿ ನಾನು ಸಣ್ಣದೊಂದು ಪ್ರಯತ್ನ ನಡೆಸುತ್ತಿದ್ದೇನೆ ಎಂದು ಹೇಳಿದರು.