ಸಾಂದರ್ಭಿಕ ಚಿತ್ರ 
ಮೈಸೂರು

ಮೈಸೂರು: ಉದಯಗಿರಿ ಹತ್ಯೆ ಪ್ರಕರಣದ ಆರೋಪಿ ಬಂಧನ

ಮೈಸೂರು: ನಗರದ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಗೌಸಿಯಾನಗರದ ಉಮರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ದಾವಣಗೆರೆ ನಿವಾಸಿ, ಕಳೆದ 10 ವರ್ಷಗಳಿಂದ ಕ್ಯಾತಮಾರನಹಳ್ಳಿಯಲ್ಲಿ ನೆಲೆಸಿರುವ ನೆಲೆಸಿರುವ ಖಾಸಿಂಸಾಬ್ ಪುತ್ರ ಬಾಬು ಬಂಧಿತ ಆರೋಪಿ. ಕೆ.ಎನ್.ಪುರ-ಶಾಂತಿನಗರ ಬಾರ್ ಬಳಿಯ ಗಲ್ಲಿಯಲ್ಲಿ ಉಮರ್ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಅಲ್ಲದೆ, ಹತ್ಯೆ ನಡೆದ ಸುತ್ತಮುತ್ತಲಿನ ಪ್ರದೇಶದ ಸಿಸಿ ಕ್ಯಾಮರಾದ ಫೂಟೇಜ್ ಪಡೆದು ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹತ್ಯೆಗೀಡಾದ ಉಮರ್ ಅಡುಗೆ ಕೆಲಸ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುತ್ತಿದ್ದ. ಈತನೊಂದಿಗೆ ಬಾಬು ಸಹ ಕೆಲಸ ಮಾಡುತ್ತಿದ್ದ. ಮದ್ಯ ಸೇವಿಸಲು ಹಣ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದು ಹತ್ಯೆ ನಡೆದಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.