ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ‘ನಿಮ್ಮ ಹಣ ನಿಮ್ಮ ಹಕ್ಕು’ ವಿಶೇಷ ಅಭಿಯಾನಕ್ಕೆ ಚಾಲನೆ ನೀಡುವ ಸಭೆಯಲ್ಲಿ ವಾದಿರಾಜ್ ದೇಶ್‌ಪಾಂಡೆ, ಜೀವಿಕಾ, ಈಶ್ವರ್ ನಾಯಕ್, ಭೀಮಪ್ಪ ಇದ್ದರು.
ಮೈಸೂರು: ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯಲ್ಲಿ ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳನ್ನು ಸಕ್ರಿಯಗೊಳಿಸುವ ‘ನಿಮ್ಮ ಹಣ ನಿಮ್ಮ ಹಕ್ಕು’ ವಿಶೇಷ ಅಭಿಯಾನಕ್ಕೆ ಚಾಲನೆ ದೊರೆಯಿತು.
ಜಿಲ್ಲೆಯ ಒಟ್ಟು 31 ಬ್ಯಾಂಕ್‌ಗಳ 534 ಶಾಖೆಗಳಲ್ಲಿ ಬಳಕೆ ಮಾಡದ ಕಾರಣಕ್ಕೆ ಒಟ್ಟು 5,05,424 ಖಾತೆಗಳು ನಿಷ್ಕ್ರಿಯಗೊಂಡಿದ್ದು, ಈ ಖಾತೆಗಳಲ್ಲಿ ಒಟ್ಟು 157.33 ಕೋಟಿ ರೂ. ಇದೆ. ಸಂಬಂಧಿಸಿದವರು ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಈ ಖಾತೆಗಳನ್ನು ಸಕ್ರಿಯಗೊಳಿಸಬಹುದು ಎಂದು ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ವಾದಿರಾಜ್ ದೇಶ್‌ಪಾಂಡೆ ತಿಳಿಸಿದರು.
ಬ್ಯಾಂಕ್ ಖಾತೆಗಳನ್ನು ನಿರಂತರವಾಗಿ ಬಳಕೆ ಮಾಡದ ಹಿನ್ನೆಲೆಯಲ್ಲಿ ಸಾಕಷ್ಟು ಖಾತೆಗಳು ನಿಷ್ಕ್ರಿಯಗೊಂಡಿವೆ. ಸಂಬಂಧಿಸಿದವರು ಪಾಸ್‌ಬುಕ್, ಅವಧಿ ಠೇವಣಿ ರಶೀದಿ, ಚೆಕ್‌ಬುಕ್‌ನೊಂದಿಗೆ ಸಂಬಂಧಿಸಿದ ಬ್ಯಾಂಕ್‌ಗಳ ಶಾಖೆಗಳಿಗೆ ತೆರಳಿ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಖಾತೆಯನ್ನು ಚಾಲನೆಗೊಳಿಸಬಹುದು. ಈ ಅಭಿಯಾನವು ಮೂರು ತಿಂಗಳವರೆಗೆ ನಡೆಯಲಿದ್ದು, ಸಂಬಂಧಿಸಿದವರು ಇದರ ಅನುಕೂಲ ಪಡೆದುಕೊಳ್ಳಬಹುದು ಎಂದರು.
ಕಳೆದ 10 ವರ್ಷಗಳಿಂದ ಯಾವುದೇ ಖಾತೆ ನಿಷ್ಕ್ರಿಯಗೊಂಡಿದ್ದರೆ ಆ ಖಾತೆಯು ಆರ್‌ಬಿಐಗೆ ವರ್ಗಾವಣೆಯಾಗಿರುತ್ತದೆ. ಅಂತಹ ಖಾತೆಗಳ ಮಾಹಿತಿಯನ್ನು ಆರ್‌ಬಿಐಗೆ ಸಲ್ಲಿಸಿ ಮತ್ತೆ ಸಕ್ರಿಯಗೊಳಿಸಲಾಗುವುದು. ಇದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಬ್ಯಾಂಕ್ ಅಧಿಕಾರಿಗಳು ತಮ್ಮ ಶಾಖೆಗಳಿಗೆ ಮಾಹಿತಿ ನೀಡಿ ಈ ಅಭಿಯಾನವನ್ನು ಸಕ್ರಿಯಗೊಳಿಸಬೇಕು ಎಂದರು.
ಜನರಿಗೆ ಅನುಕೂಲ ಮಾಡಿಕೊಡಲು ಶ್ರಮಿಸಿ: ಆರ್‌ಬಿಐ ವ್ಯವಸ್ಥಾಪಕಿ ಜೀವಿಕಾ ಮಾತನಾಡಿ, ಮೂರು ತಿಂಗಳು ನಡೆಯುವ ಅಭಿಯಾನವನ್ನು ಯಶಸ್ವಿಗೊಳಿಸಲು ಪ್ರತಿಯೊಂದು ಬ್ಯಾಂಕ್‌ಗಳು ಶ್ರಮಿಸಬೇಕು. ಸಾಕಷ್ಟು ಜನರಿಗೆ ನಿಷ್ಕ್ರಿಯಗೊಂಡಿರುವ ತಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬ ಅರಿವು ಇರುವುದಿಲ್ಲ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ ಅವರ ಖಾತೆಗಳನ್ನು ಸಕ್ರಿಯಗೊಳಿಸಬೇಕು. ಆರ್‌ಬಿಐ ಸೂಚನೆ ನೀಡಿದೆ ಎಂಬ ಕಾರಣಕ್ಕಾಗಿ ಈ ಅಭಿಯಾನವನ್ನು ಯಶಸ್ವಿಗೊಳಿಸುವ ಬದಲು ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಅಭಿಯಾನವನ್ನು ಯಶಸ್ವಿಗೊ ಳಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ಈಶ್ವರ್ ನಾಯಕ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಭೀಮಪ್ಪ ಇದ್ದರು.
ಕೆನರಾ, ಎಸ್‌ಬಿಐನಲ್ಲಿ ಅತಿ ಹೆಚ್ಚು: ಜಿಲ್ಲೆಯಲ್ಲಿ ಕೆನರಾ, ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಕರ್ನಾಟಕ ಬ್ಯಾಂಕ್‌ನಲ್ಲಿ ಹೆಚ್ಚು ನಿಷ್ಕ್ರಿಯಗೊಂಡ ಖಾತೆಗಳು ಇವೆ. ಜಿಲ್ಲೆಯ ಕೆನರಾ ಬ್ಯಾಂಕ್ ವಿವಿಧ ಶಾಖೆಗಳಲ್ಲಿ 1,22,559 ನಿಷ್ಕ್ರಿಯ ಖಾತೆಗಳು ಇದ್ದು, ಇದರಲ್ಲಿ 44.38 ಕೋಟಿ ರೂ.ಗಳು ಇವೆ. ಅದೇ ರೀತಿ ಎಸ್‌ಬಿಐನ 85,061 ಖಾತೆಗಳಲ್ಲಿ 43.86 ಕೋಟಿ ರೂ., ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 60,712 ಖಾತೆಗಳಲ್ಲಿ 14.74 ಕೋಟಿ ರೂ., ಬ್ಯಾಂಕ್ ಆಫ್ ಬರೋಡಾದಲ್ಲಿ 25,432 ಖಾತೆಗಳಲ್ಲಿ 10.74 ಕೋಟಿ ರೂ. ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ ನಿಷ್ಕ್ರಿಯಗೊಂಡಿರುವ ಖಾತೆಗಳಲ್ಲಿ ಕೋಟ್ಯಾಂತರ ರೂ. ಇರುವುದು ಪರಿಶೀಲನೆ ವೇಳೆಯಲ್ಲಿ ಕಂಡುಬಂದಿದೆ.