ಸೋಮವಾರಪೇಟೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಸ್ಥಳಕ್ಕೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಸಂದೀಪ್ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಶೈಲೆಂದ್ರಕುಮಾರ್, ರೋಜಾ, ಭೋಜೇಗೌಡ ಇದ್ದರು. 
ಮೈಸೂರು

ಅಕ್ರಮವಾಗಿ ನಡೆಯುತ್ತಿದ್ದ 18 ಕಲ್ಲು ಗಣಿಗಾರಿಕೆ ಬಂದ್

ಸೋಮವಾರಪೇಟೆ: ತಾಲೂಕಿನ ಯಲಕನೂರು, ಹೊಸಳ್ಳಿ ಗ್ರಾಮಗಳಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ, ಕಂದಾಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ 18 ಕೋರೆಗಳನ್ನು ಬಂದ್ ಮಾಡಿಸಿದರು.
ಈ ಗ್ರಾಮಗಳಲ್ಲಿ 18ಕ್ಕೂ ಹೆಚ್ಚು ಕಲ್ಲುಕೋರೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಸುತ್ತ ಕನಿಷ್ಠ ತಂತಿ ಬೇಲಿ ಅಳವಡಿಸದೆ, ಗಣಿಗಾರಿಕೆ ನಡೆಸಲಾಗುತ್ತಿತ್ತು. ಇದರೊಂದಿಗೆ ಯಾವುದೇ ಕಲ್ಲುಕೋರೆಗಳಲ್ಲಿ ಬ್ಲಾಸ್ಟಿಂಗ್‌ಗೆ ಅವಕಾಶ ಇಲ್ಲದಿದ್ದರೂ ಬ್ಲಾಸ್ಟಿಂಗ್ ಮಾಡಿ ಕಲ್ಲನ್ನು ತೆಗೆಯಲಾಗುತ್ತಿತ್ತು. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ನೂರಾರು ಕುಟುಂಬಗಳು ಪ್ರತಿದಿನ ಭಯದಲ್ಲಿಯೇ ಕಾಲ ಕಳೆಯುವಂತಾಗಿ ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಬಗ್ಗೆ ಗ್ರಾಮಸ್ಥರು ದೂರಿದರು.  
ಬೆಳಗ್ಗೆಯಿಂದಲೇ ಬೃಹತ್ ಲಾರಿಗಳಲ್ಲಿ ಕಲ್ಲನ್ನು ಸಾಗಿಸುತ್ತಿದ್ದರಿಂದ ಹಲವು ಜನರ ಆರೋಗ್ಯಕ್ಕೆ ತೊಂದರೆಯಾಗುತ್ತಿತ್ತು. ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಭೆ ನಡೆಸಿ ಸೂಕ್ತ ಕ್ರಮದ ಭರವಸೆ ನೀಡಿದ್ದರು. ಮುಂದಿನ ದಿನಗಳಲ್ಲಿ ಸ್ಥಳ ಪರಿಶೀಲನೆ ಮಾಡಿ, ಸರ್ವೇ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. 
 ಆದರೆ, ಮಂಗಳವಾರ ಸ್ಥಳಕ್ಕೆ ಪರಿಶೀಲನೆಗೆ ಬಂದ ಅಧಿಕಾರಿಗಳು ಸ್ಥಳದ ಯಾವುದೇ ದಾಖಲೆಯನ್ನು ತಂದಿರಲಿಲ್ಲ. ಇದರಿಂದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಾಕಷ್ಟು ಸಮಯದಿಂದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ. ಆದರೂ ಪರಿಶೀಲನೆಗೆ ಬರುವಾಗ ಅಧಿಕಾರಿಗಳು ಯಾವುದೇ ದಾಖಲೆಗಳಿಲ್ಲದೆ ಬಂದಿರುವುದು ಖಂಡನೀಯ. ಯಾವ ಕಾರಣಕ್ಕೆ ಪರಿಶೀಲನೆ ಮಾಡಲು ಬಂದಿದ್ದೀರಾ. ಈ ಭಾಗದಲ್ಲಿ ಇನ್ನಷ್ಟು ಕಲ್ಲು ಕೋರೆಗಳಿಗೆ ಅವಕಾಶ ನೀಡಲು ಬಂದಿದ್ದೀರಾ ಎಂದು ಸ್ಥಳೀಯರಾದ ಬೋಜೆಗೌಡ ಅಧಿಕಾರಿಗಳನ್ನು ಪ್ರಶ್ನಿಸಿದರು. 
ಇದೀಗ ಕಲ್ಲುಗಣಿಗೆ ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ ಅಷ್ಟೆ. ಈಗಲಾದರೂ ಸೂಕ್ತ ಕಾನೂನು ಕ್ರಮಕೈಗೊಳ್ಳುತ್ತಾರೆಯೇ ಕಾದು ನೋಡಬೇಕಿದೆ. ಇಲ್ಲಿ ನಡೆಯುತ್ತಿರುವ ಎಲ್ಲ ಕಲ್ಲುಗಣಿಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅಕ್ರಮ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು. ಅಕ್ರಮವಾಗಿ ಸಾಗಿಸಿದ ಕಲ್ಲುಗಳ ಸಂಪೂರ್ಣ ಮೌಲ್ಯವನ್ನು ಸರ್ಕಾರ ವಸೂಲಿ ಮಾಡಬೇಕು. ತಪ್ಪಿದಲ್ಲಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಬೋಜೇಗೌಡ, ಅನಿಲ್, ರಾಜೇಶ್ ಎಚ್ಚರಿಸಿದರು. 
ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಸಂದೀಪ್ ಮಾತನಾಡಿ, ಈ ಭಾಗದ ಗ್ರಾಮಸ್ಥರ ಮನವಿಯಂತೆ ತನಿಖೆ ನಡೆಸಿ, ಇಲ್ಲಿ ನಡೆದಿರುವ ಕಲ್ಲು ಗಣಿಗಾರಿಕೆ  ಬಗ್ಗೆ ವಿಸ್ತೃತ ವರದಿಯನ್ನು ಮೇಲಿನ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.