ಮೈಸೂರು: ಯಾರು ಏನೇ ಹೇಳಿದರೂ ಅದಕ್ಕೆ ಕಿಮ್ಮತ್ತಿಲ್ಲ. ನಾಯಕತ್ವದ ಬಗ್ಗೆ ಹೈಕಮಾಂಡ್ ಹೇಳುವುದಷ್ಟೇ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂಬ ಬಿಹಾರ ಮುಖಂಡರ ಹೇಳಿಕೆಯ ಬಗ್ಗೆ ಸಿಡಿಮಿಡಿಗೊಂಡ ಅವರು, ಯಾರು ಏನೇ ಹೇಳಲಿ ಅದು ಮುಖ್ಯವಲ್ಲ. ಹೈಕಮಾಂಡ್ ಹೇಳುವುದಷ್ಟೇ ಮುಖ್ಯ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಏನಾದರೂ ಹೇಳಿದೆಯಾ?. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರಾ?. ಯಾಕೆ ಪದೇ ಪದೆ ಅದನ್ನೇ ಮಾತನಾಡುತ್ತೀರಿ? ಎಂದು ಸುದ್ದಿಗಾರರೊಂದಿಗೆ ಅಸಹನೆ ವ್ಯಕ್ತಪಡಿಸಿದರು.
ಜನ ಮಾತನಾಡುತ್ತಿಲ್ಲ, ಮಾಧ್ಯಮದವರೇ ಪದೇ ಪದೆ ಮಾತನಾಡುತ್ತಿದ್ದೀರಾ. ಕಾಂಗ್ರೆಸ್‌ಗೆ ಹೈಕಮಾಂಡ್ ಇದೆ. ಆ ವರಿಷ್ಠರು ಹೇಳುವುದು ಮಾತ್ರವೇ ಮುಖ್ಯ. ಅದೇ ಅಂತಿಮ ಎಂದು ಹೇಳಿದರು.
ಬಿಹಾರ ಚುನಾವಣೆ ಬಳಿಕ ರಾಹುಲ್ಗಾಂಧಿ ಭೇಟಿ ಮಾಡುತ್ತೇನೆ. ಸಂಪುಟ ಪುನಾರಚನೆ ಬಗ್ಗೆ ಸೋನಿಯಾಗಾಂಧಿ, ರಾಹುಲ್ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಜತೆ ಚರ್ಚೆ ಮಾಡುತ್ತೇನೆ. ಇದಕ್ಕಾಗಿಯೇ ನವಂಬರ್ 15ಕ್ಕೆ ದೆಹಲಿಗೆ ಹೋಗುತ್ತಿದ್ದೇನೆ ಎಂದು ಹೇಳಿದರು.
ಬಿಹಾರದಲ್ಲಿನ ಆಡಳಿತ ವಿರೋಧಿ ಅಲೆ ಹಾಗೂ ಬಿಜೆಪಿಯ ಭ್ರಷ್ಟ ಹಾಗೂ ದುರಾಡಳಿತದ ಅಂಶಗಳು ಪ್ರಮುಖವಾಗಲಿದ್ದು, ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.