Mallikarjun Kharge 
ಮೈಸೂರು

ಖರ್ಗೆಗೆ ಸಿಎಂ ಸ್ಥಾನ ನೀಡದಿದ್ದರೆ ಚುನಾವಣೆಯಲ್ಲಿ ಪಾಠ

ಎಂ.ರವಿ
ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮುಂದಿನ ಎರಡೂವರೆ ವರ್ಷಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಬೇಕೆಂದು ಆಗ್ರಹಿಸಿ ಪಕ್ಷದ ಪ್ರಮುಖರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಪ್ರಬುದ್ಧ ಭಾರತ ಭೀಮ್ ಸೇನೆ ಪತ್ರ ಬರೆದಿದೆ ಎಂದು ಅಧ್ಯಕ್ಷ ಸಿದ್ದರಾಜು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಅಲ್ಪಸಂಖ್ಯಾತರು ಹಾಗೂ ದಲಿತರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಆದರೆ, ಬಸವಲಿಂಗಪ್ಪನವರ ಕಾಲದಿಂದ ಹಿಡಿದು ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ.ಪರಮೇಶ್ವರ್ ಅವರಿಗೆ ಒಂದಲ್ಲ ಒಂದು ರೀತಿ ಅನ್ಯಾಯವಾಗುತ್ತಲೇ ಬಂದಿದೆ. 1999 ರಿಂದ 2004ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಂಪೂರ್ಣ ಜವಾಬ್ದಾರಿ ಹೊತ್ತವರು ಮಲ್ಲಿಕಾರ್ಜುನ ಖರ್ಗೆ. ಹೀಗಿದ್ದರೂ ಸಿಎಂ ಸ್ಥಾನ ನೀಡುವಾಗ ಇವರನ್ನು ಕಡೆಗಣಿಸುತ್ತಿರುವುದು ಬೇಸರದ ಸಂಗತಿ. ಪಕ್ಷಕ್ಕಾಗಿ ಹಗಲಿರುಳೂ ದುಡಿಯುತ್ತಿದ್ದಾರೆ. ಆದರೆ, ಪಕ್ಷವು ಇತರರಿಗೆ ಮಣೆ ಹಾಕುತ್ತ ಬಂದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು. 
ಒಂದು ವೇಳೆ ಈಗಲಾದರೂ ಖರ್ಗೆ ಅವರಿಗೆ ಸಿಎಂ ಸ್ಥಾನ ನೀಡದಿದ್ದಲ್ಲಿ ಸಮುದಾಯದವರು ಮುಂಬರುವ ಚುನಾವಣೆ ವೇಳೆ ಪಾಠ ಕಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚೆಲುವರಾಜು, ರಂಗಸ್ವಾಮಿ, ನಿಂಗರಾಜು, ಸಿ.ಶಿವರಾಮು, ಮರಿಸ್ವಾಮಿ, ಪ್ರಸನ್ನಕುಮಾರ್, ಅನ್ವರ್ ಪಾಷ, ಮಂಜಯ್ಯ ಹಾಜರಿದ್ದರು.