ನಗರದ ವಿಜ್ಞಾನ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಾದೇಶಿಕ ಮಕ್ಕಳ ವಿಜ್ಞಾನ ಸಮ್ಮೇಳನವನ್ನು ನಿವೃತ್ತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಉದ್ಘಾಟಿಸಿದರು. ಪ್ರೊ.ವಿ.ಜಗನ್ನಾಥ, ಎಸ್.ಪಿ.ಬೋಸೆ, ಶ್ರೀನಿವಾಸನ್ ಇತರರಿದ್ದರು. 
ಮೈಸೂರು

ಗುಣಮಟ್ಟ ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ

ಎಂ.ರವಿ
ಮೈಸೂರು: ವಿಜ್ಞಾನ ಮತ್ತು ಗುಣಮಟ್ಟ ಶಿಕ್ಷಣದಿಂದ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಯುವ ಜನರು ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.
ಜವಾಹರ ನವೋದಯ ವಿದ್ಯಾಲಯದ ವತಿಯಿಂದ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಾದೇಶಿಕ ಮಕ್ಕಳ ವಿಜ್ಞಾನ ಸಮ್ಮೇಳನದಲ್ಲಿ ಮಾತನಾಡಿ, 30 ವರ್ಷ ಹಿಂದೆ ಚೀನಾ ಏನು ಅಲ್ಲ. ಆದರೀಗ ದೊಡ್ಡ ಆರ್ಥಿಕ ಶಕ್ತಿಯಾಗಿ ಜಾಗತಿಕ ಮಟ್ಟದಲ್ಲಿ ಮುಂಚೂಣಿ ದೇಶವಾಗಿ ಹೊರಹೊಮ್ಮಿದೆ. ಪ್ರಪಂಚವನ್ನೇ ಆಳುತ್ತಿದೆ. ಇದು ಸಾಧ್ಯವಾಗಿದ್ದು ವಿಜ್ಞಾನ ಮತ್ತು ಗುಣಮಟ್ಟದ ಶಿಕ್ಷಣದಿಂದ ಮಾತ್ರ. ಭಾರತ ದೇಶವನ್ನು ಕಟ್ಟಲು ಇದುವೇ ಉತ್ತಮ ಮಾದರಿ ಎನಿಸಿದೆ ಎಂದರು.
ಭವಿಷ್ಯದಲ್ಲಿ ವಿಜ್ಞಾನಕ್ಕೆ ಉಜ್ವಲ ಭವಿಷ್ಯ ಇದೆ. ಆದ್ದರಿಂದ ಮೂಲ ವಿಜ್ಞಾನದತ್ತ ಯುವ ಜನರು, ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಂಡು ಅಧ್ಯಯನ ಮಾಡಬೇಕು ಎಂದರು.
ಭಾರತ ಬೇರೆ ಯಾವುದೇ ದೇಶಕ್ಕಿಂತಲೂ ಕಡಿಮೆ ಇಲ್ಲ. ಇದು ಬುದ್ಧಿವಂತರ, ಪ್ರತಿಭಾವಂತರ ರಾಷ್ಟ್ರವಾಗಿದ್ದು, ಬುದ್ಧಿಮಟ್ಟ, ಸಂಸ್ಕೃತಿ, ಸೃಜನಶೀಲತೆ ಮತ್ತು ಕ್ರಿಯಾಶೀಲತೆಯಲ್ಲೂ ಅತ್ಯುತ್ತಮವಾಗಿದೆ. ಈ ಕಾರಣದಿಂದಲೇ ವಿದೇಶದಲ್ಲಿ ಭಾರತೀಯ ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ದೊರೆಯುತ್ತಿವೆ. ಆದರೆ, ಈ ಪ್ರತಿಭೆಗಳನ್ನು ದೇಶದಲ್ಲೇ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಇಸ್ರೋ ನಿವೃತ್ತ ವಿಜ್ಞಾನಿ ಪ್ರೊ.ವಿ.ಜಗನ್ನಾಥ ಮಾತನಾಡಿ, ಆಧುನಿಕ ಆವಿಷ್ಕಾರವಾದ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ಹೊಸ ಸವಾಲು ಮತ್ತು ಹೊಸ ಅವಕಾಶ ಸೃಷ್ಟಿಸುತ್ತಿದೆ. ಈ ತಾಂತ್ರಿಕತೆಯನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಬೇಕು. ಎಐ ಬಳಕೆ ಕೌಶಲವನ್ನೂ ಕರಗತ ಮಾಡಿಕೊಳ್ಳಬೇಕು ಎಂದರು.
ನವೋದಯ ವಿದ್ಯಾಲಯ ಸಮಿತಿಯ ಹೈದ್ರಾಬಾದ್‌ನ ಪ್ರಾದೇಶಿಕ ಸಹಾಯಕ ಆಯುಕ್ತ ಎಸ್.ಪಿ.ಬೋಸೆ, ನವೋದಯ ಶಾಲೆಯ ಪ್ರಾಚಾರ್ಯ ಶ್ರೀನಿವಾಸನ್ ಇನ್ನಿತರರಿದ್ದರು.