ಕ್ರಿಕೆಟ್ ಅಂಗಳದಲ್ಲಿ ಅರಳಿದ ಮೈಸೂರಿನ ಪ್ರತಿಭೆಗಳು
- ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ಬೌಂಡರಿ, ಸಿಕ್ಸರ್ ಅಬ್ಬರ, ಬೌಲಿಂಗ್‌ನಲ್ಲೂ ಕಮಾಲ್
ರಾಜ್ಯಾದ್ಯಂತ ಕ್ರಿಕೆಟ್ ಕ್ರೇಜ್ ಹೆಚ್ಚಿಸುತ್ತಿರುವ 5ನೇ ಆವೃತ್ತಿಯ ‘ಮಹಾರಾಜ ಟ್ರೋಫಿ’ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಸ್ಟಾರ್ ಆಟಗಾರರ ಜತೆ ಮೈಸೂರು ಭಾಗದ ಸ್ಥಳೀಯ ಪ್ರತಿಭೆಗಳ ಕಲರವ ಜೋರಾಗಿದೆ.
ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್, ಕೋಸ್ಟಲ್ ಕಿಂಗ್ಸ್ ಮಂಗಳೂರು, ಗುಲ್ಬರ್ಗಾ ಮಿಸ್ಟಿಕ್ಸ್, ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಶಿವಮೊಗ್ಗ ಯೋಧಾಸ್ ತಂಡಗಳು ಭಾಗವಹಿಸಿದ್ದು, ಬಹುತೇಕ ಎಲ್ಲ ತಂಡಗಳಲ್ಲೂ ಮೈಸೂರು, ಮಂಡ್ಯ, ಕೊಡಗು ಪ್ರತಿಭೆಗಳು ಆಡುತ್ತಿದ್ದು, ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.
ಅಸಾಧಾರಣ ಪ್ರತಿಭೆ ಹೊಂದಿದ್ದರೂ ಸರಿಯಾದ ವೇದಿಕೆ ಇಲ್ಲದೆ ಎಲೆಮರೆಯ ಕಾಯಿಯಂತೆ ಆಗಿದ್ದ ಹತ್ತಾರು ಸ್ಥಳೀಯ ಪ್ರತಿಭೆಗಳಿಗೆ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಕ್ರಿಕೆಟ್ ಉತ್ತಮ ವೇದಿಕೆ ಕಲ್ಪಿಸಿದೆ. ಹೀಗಾಗಿ, ಮೈಸೂರು ಭಾಗದ ಹತ್ತಕ್ಕೂ ಹೆಚ್ಚಿನ ಪ್ರತಿಭೆಗಳು ಬಹುತೇಕ ತಂಡಗಳಲ್ಲಿ ಬ್ಯಾಟ್ಸ್‌ಮನ್, ಆಲ್‌ರೌಂಡರ್, ಪ್ರಮುಖ ಬೌಲರ್...ಹೀಗೆ ನಾನಾ ವಿಭಾಗಗಳಲ್ಲಿ ಮಿಂಚುತ್ತಿದ್ದಾರೆ. ಬೌಂಡರಿ, ಸಿಕ್ಸರ್ ಬಾರಿಸಿ ಅಬ್ಬರಿಸುತ್ತಿದ್ದಾರೆ. ಬೌಲಿಂಗ್‌ನಲ್ಲೂ ಕಮಾಲ್ ಮಾಡುತ್ತಿದ್ದಾರೆ.
ಎಲ್.ಆರ್.ಚೇತನ್ ಅಬ್ಬರ
ಸ್ಥಳೀಯ ಮೈಸೂರು ವಾರಿಯರ್ಸ್ ತಂಡದ ಪರ ಮೈಸೂರಿನ ಪ್ರತಿಭೆಗಳಾದ ಎಸ್.ಯು.ಕಾರ್ತಿಕ್, ಎಲ್.ಆರ್.ಚೇತನ್, ಕೆ.ಎಸ್.ಲಂಕೇಶ್, ಗೌತಮ್ ಸಾಗರ್ ಆಡುತ್ತಿದ್ದಾರೆ.
ಈ ಪೈಕಿ ಟೂರ್ನಿಯಲ್ಲಿ ಈಗಾಗಲೇ 3 ಪಂದ್ಯಗಳನ್ನು ಆಡಿರುವ ಸ್ಟಾರ್ ಬ್ಯಾಟರ್ ಎಲ್.ಆರ್.ಚೇತನ್ ಅಬ್ಬರ ತೋರಿದ್ದಾರೆ. 76 ಎಸೆತಗಳಲ್ಲಿ 125 ರನ್ ಪೇರಿಸಿ, ಟೂರ್ನಿಯ ಸದ್ಯ ಟಾಪ್ 4ನೇ ಬ್ಯಾಟರ್ ಎನಿಸಿದ್ದಾರೆ. ಇದರಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಸಿಡಿಸಿದ ಭರ್ಜರಿ ಶತಕವೂ ಇದ್ದು, 10 ಬೌಂಡರಿ, 9 ಸಿಕ್ಸರ್ ಬಾರಿಸಿದ್ದಾರೆ. 164.47 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಚೇತನ್, 41.67 ಸರಾಸರಿ ಕಾಯ್ದುಕೊಂಡಿದ್ದಾರೆ. ಮತ್ತೊಬ್ಬ ಆಟಗಾರ ಎಸ್.ಯು.ಕಾರ್ತಿಕ್ 2 ಪಂದ್ಯದಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಿತ 52 ರನ್ ಬಾರಿಸಿದ್ದಾರೆ.
ನಿಕಿನ್ ಆರ್ಭಟವೂ ಜೋರು
ಕೋಸ್ಟಲ್ ಕಿಂಗ್ಸ್ ಮಂಗಳೂರು ಪರ ಆಡುತ್ತಿರುವ ಮೈಸೂರಿನ ನಿಕಿನ್ ಜೋಶ್ ಕೂಡ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮೈದಾನದಲ್ಲಿ ವಿಜೃಂಭಿಸಿದ ಅವರು ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿದ್ದಾರೆ. 47 ಎಸೆತದಲ್ಲಿ 7 ಬೌಂಡರಿ, 8 ಸಿಕ್ಸರ್ ಸಹಿತ 100 ರನ್ ಬಾರಿಸಿದ್ದಾರೆ. 212.76 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ವಿಶೇಷ. ಮಂಗಳೂರು ಪರ ಆಡುತ್ತಿರುವ ಮೈಸೂರಿನ ಮತ್ತೊಬ್ಬ ಆಟಗಾರ ಎಂ.ವೆಂಕಟೇಶ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ನವೀನ್ ಆಲ್‌ರೌಂಡರ್ ಮೋಡಿ:
ಶಿವಮೊಗ್ಗ ಯೋಧಾಸ್ ಪರ ಆಡುತ್ತಿರುವ ಮಂಡ್ಯ ಹುಡುಗ ಆಲ್‌ರೌಂಡರ್ ಎಂ.ಜಿ.ನವೀನ್ 3 ಪಂದ್ಯದಲ್ಲಿ 98 ರನ್ ಬಾರಿಸುವ ಜತೆಗೆ 2 ವಿಕೆಟ್ ಕಬಳಿಸಿದ್ದಾರೆ. ಶಿವಮೊಗ್ಗ ಮೊದಲ ಪಂದ್ಯದಲ್ಲಿ ಗೆಲ್ಲುಲು ಇಬ್ಬರ ಪರಿಶ್ರಮ ಇದೆ. ಬುಧವಾರ ನಡೆದ ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿ ಮಿಂಚಿದರು. ಇನ್ನೂ ಹುಬ್ಬಳ್ಳಿ ಟೈಗರ್ಸ್ ಪರ ಮೈಸೂರಿನ ಎಲ್.ಆರ್.ಕುಮಾರ್ ಆಡುತ್ತಿದ್ದು, 2 ಪಂದ್ಯದಲ್ಲಿ 3 ವಿಕೆಟ್ ಕಬಳಿಸಿದ್ದಾರೆ. ಎಲ್.ಮನ್ವಂತ್‌ಕುಮಾರ್ 1 ವಿಕೆಟ್ ಹಾಗೂ ವಿಕಾಸ್‌ಗೌಡ 2 ವಿಕೆಟ್ ಪಡೆದು ಗಮನ ಸೆಳೆಯುತ್ತಿದ್ದಾರೆ. ಇನ್ನು ಬೆಂಗಳೂರು ಬ್ಲಾಸ್ಟರ್ ಪರ ಎಂ.ಬಿ.ದರ್ಶನ್ ಹಾಗೂ ಕೊಡಗಿನ ವಿದ್ವತ್ ಕಾವೇರಪ್ಪ ಮೋಡಿ ಮಾಡುತ್ತಿದ್ದಾರೆ.
ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಪರ ಆಡುತ್ತಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಟೂರ್ನಿಯಲ್ಲಿ ಗಮನ ಸೆಳೆಯುತ್ತಿದ್ದಾರೆ.
ಆಲ್ ರೌಂಡರ್ ಆಗಿರುವ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಮಿಂಚುತ್ತಿದ್ದಾರೆ. ಈಗಾಗಲೇ 4 ಪಂದ್ಯದಲ್ಲಿ ಆಡಿರುವ ಅವರು 6 ಬೌಂಡರಿ, 3 ಸಿಕ್ಸರ್ ಸಹಿತ 80 ರನ್ ಪೇರಿಸಿದ್ದಾರೆ. ಜತೆಗೆ 3 ವಿಕೆಟ್ ಕೂಡ ಕಬಳಿಸಿದ್ದಾರೆ.
ಉಳಿದಂತೆ ಸ್ಟಾರ್ ಆಟಗಾರರಾದ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ನಾಯಕ ಮನೀಶ್ ಪಾಂಡೆ, ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕ ಕರುಣ್ ನಾಯರ್, ಹುಬ್ಬಳ್ಳಿ ತಂಡದ ಮೊಹಮದ್ ತಾಹ, ಅಭಿನವ್ ಮನೋಹರ್, ಶಿವಮೊಗ್ಗ ಯೋಧಾಸ್ ತಂಡದ ನಾಯಕ ಆರ್.ಸ್ಮರಣ್, ಲವನೀತ್ ಸಿಸೋಡಿಯಾ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.