ಮೈಸೂರಿನ ಮಾನಸಗಂಗೋತ್ರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಶೇಖ್ ತನ್ವೀರ್ ಅಸಿಫ್ ಉದ್ಘಾಟಿಸಿದರು. ಎಂ.ಕೆ. ಸವಿತಾ, ಪ್ರೊ.ಡಾ.ಬಿ.ಶಂಕರ್ , ಕೆ.ಎನ್.ನಾರಾಯಣಗೌಡ, ಎಸ್.ಬಿ. ಹೊನ್ನೂರು, ಎಂ.ಸಿ. ಶಶಿಕುಮಾರ್, ಎಚ್.ಎನ್.ನಾಗೇಂದ್ರ ಇತರರು ಇದ್ದರು.
- ರಾಜರ ದೃಷ್ಟಿಕೋನದಲ್ಲಿಯೇ ಪರಂಪರೆ ಮುಂದುವರಿಸಿಕೊಂಡು ಹೋಗಬೇಕಿದೆ
- ರಾಜರ ಕಾಲದಲ್ಲಿಯೇ ಮೈಸೂರು ವ್ಯವಸ್ಥಿತವಾಗಿ ರೂಪುಗೊಂಡಿದೆ
ಮೈಸೂರು: ಮೈಸೂರಿನ ಸಾಂಪ್ರದಾಯಿಕ ವಾಸ್ತುಶೈಲಿಯನ್ನು ಕಾಪಾಡಿಕೊಂಡು ಹೋಗುವುದು ಅತ್ಯಂತ ಅವಶ್ಯಕವಾಗಿದೆ ಎಂದು ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಅಸಿಫ್ ಹೇಳಿದರು.
ನಗರದ ಇಂಡಿಯನ್ ಟೌನ್ ಪ್ಯಾನರ್ಸ್ ಇನ್ಸಿಟ್ಯಿೂಟ್ (ಐಟಿಪಿಐ), ಪ್ರಾದೇಶಿಕ ಕೇಂದ್ರಯಿಂದ ‘ರಾಜ ದೂರದೃಷ್ಟಿತ್ವದಲ್ಲಿ ಆಧುನಿಕ ನಗರ ಯೋಜನೆ, ಮೈಸೂರಿನ ಪರಂಪರೆ ಕುರಿತು ಮಾನಸಗಂಗೋತ್ರಿಯಲ್ಲಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜರ ಕಾಲದಲ್ಲಿಯೇ ನಗರ ವ್ಯವಸ್ಥಿತವಾಗಿ ರೂಪುಗೊಂಡಿದೆ. ಅಂದಿನ ಶೈಲಿ, ಪರಂಪರೆಯಿಂದಾಗಿ ನಗರವನ್ನು ವಿಶಿಷ್ಠವಾಗಿ ಗುರುತಿಸಲಾಗಿದೆ. ಆ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು ಎಂದರು.
ವಿಶಾಲ ರಸ್ತೆ, ವ್ಯವಸ್ಥಿತ ಮಾರುಕಟ್ಟೆಗಳು, ಸುಸಜ್ಜಿತ ಬಡಾವಣೆಗಳು, ಸ್ವಚ್ಛತೆಗೆ ಅಧ್ಯತೆ ಇರುವುದರಿಂದ ಎರಡು ಬಾರಿ ದೇಶದಲ್ಲಿಯೇ ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಪರಂಪರೆಯನ್ನು ರಾಜರ ದೃಷ್ಟಿಕೋನದಲ್ಲಿಯೇ ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ. ಸವಿತಾ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿನ ಶ್ರೇಷ್ಠ ಯೋಜಿತ ನಗರಾಭಿವೃದ್ಧಿಗೆ ಬುನಾದಿ ಹಾಕಿಕೊಟ್ಟರು. ಇದರಿಂದ ಈಗಲೂ ನಗರ ಸುಂದರವಾಗಿ ಇದೆ ಎಂದರು.
ಮೈಸೂರಿನ ಕುರಿತು ಸಂಶೋಧನೆ, ಅಧ್ಯಯನ ಮತ್ತು ಯೋಜನಾ ಕಾರ್ಯವನ್ನು ಕೈಗೊಂಡು ನಗರಾಭಿವೃದ್ಧಿಗೆ ಕೊಡುಗೆ ನೀಡಬೇಕಿದೆ. ಮುಂಬೈ, ಪುಣೆ, ಚೆನ್ನೈಮೈಸೂರು ಸೆರಿದಂತೆ ಇನ್ನಿತರೆ ನಗರಗಳಲ್ಲಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಐಟಿಪಿಐ ಸಂಯೋಜಕ ಪ್ರೊ.ಡಾ.ಬಿ.ಶಂಕರ್ ಮಾತನಾಡಿ, ವಿಶ್ವ ನಗರ ಯೋಜನಾ ದಿನ, ವಿಶ್ವ ನಗರೀಕರಣ ದಿನ ಹಾಗೂ ವಿಶ್ವ ಪರಂಪರೆ ವಾರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದೆ. ಸುಸ್ಥಿರ, ವಾಸಯೋಗ್ಯ ವಾತಾವರಣವನ್ನು ನಿರ್ಮಿಸುವುದು ಉದ್ದೇಶವಾಗಿದೆ ಎಂದರು.
ಪ್ಯಾರಿಸ್, ರೋಮ್, ಬಾರ್ಸಿಲೋನಾ, ಕಿಯೋಟೊ ಮತ್ತು ಲಂಡನ್ ನಗರಗಳಲ್ಲಿ ಪರಂಪರೆ ಸಂರಕ್ಷಣೆ ಮತ್ತು ಆಧುನಿಕ ನಗರಾಭಿವೃದ್ಧಿ ಸಮನ್ವಯಗೊಂಡಿರುವ ಮಾದರಿಯಲ್ಲಿ ಮೈಸೂರು ನಗರವನ್ನುಸ ರೂಪಿಸಬೇಕಿದೆ ಎಂದು ಹೇಳಿದರು.
ಐಟಿಪಿಟಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎನ್.ನಾರಾಯಣಗೌಡ ಮಾತನಾಡಿ,ನಗರೀಕರಣದ ಸವಾಲುಗಳನ್ನು ಎದುರಿಸಲು ಸುಸ್ಥಿರ ಯೋಜನೆ, ಹವಾಮಾನ ಬದಲಾವಣೆಯ ನಿರ್ವಹಣೆ. ತಂತ್ರಜ್ಞಾನ ಸಂಯೋಜನೆ, ಸ್ಥಳೀಯ ಪ್ರದೇಶ ಯೋಜನೆ, ಆಡಳಿತ ಬಲವರ್ಧನೆ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯ ಪ್ರಾಮುಖ್ಯತೆಯನ್ನು ತಿಳಿಸಿದರು.
ಹೊಸದಿಲ್ಲಿಯ ಐಟಿಪಿಟಿ ಕೌನ್ಸಿಲ್ ಸದಸ್ಯ ಎಸ್.ಬಿ. ಹೊನ್ನೂರು, ರಾಜ್ಯ ಘಟಕದ ಕಾರ್ಯದರ್ಶಿ ಎಂ.ಸಿ. ಶಶಿಕುಮಾರ್, ನಿರ್ದೇಶಕರಾದ ಪ್ರೊ. ಪ್ರಮೋದ್ ಎಂ. ಗವಾರಿ, ವಿಭಾಗದ ಮುಖ್ಯಸ್ಥ ಪ್ರೊ. ಎಚ್.ಎನ್.ನಾಗೇಂದ್ರ, ಮೈಸೂರು ಶಾಖೆ ಕಾರ್ಯದರ್ಶಿ ಡಾ.ಎಸ್. ಯಶಸ್ವಿನಿ ಇತರರು ಇದ್ದರು.