ಸ್ವಚ್ಛ ಶೆಹರ್ ಯೋಜನೆಯಡಿ ಮೈಸೂರಿನಲ್ಲಿ ತರಬೇತಿ ಪಡೆದ ರಾಯಚೂರು ಮಹಾನಗರ ಪಾಲಿಕೆ ತಂಡ
- ರಾಯಚೂರು, ಮಸ್ಕಿಗೆ ತರಬೇತಿ
- ಸ್ವಚ್ಛ ಶೆಹರ್ ಯೋಜನೆಯಡಿ ಒಡಂಬಡಿಕೆ
ಸ್ವಚ್ಛತೆಯಲ್ಲಿ ಹಲವು ಬಾರಿ ದೇಶದ ಗಮನ ಸೆಳೆದಿರುವ ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಸ್ವಚ್ಛತೆಯ ವಿಚಾರದಲ್ಲಿ ಮಾರ್ಗ ದರ್ಶಕ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದು, ಈ ಬಾರಿ ರಾಯಚೂರು ನಗರ ಹಾಗೂ ಮಸ್ಕಿ ಪಟ್ಟಣವು ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರಿನ ಮಾರ್ಗದರ್ಶನದೊಂದಿಗೆ ಮುನ್ನಡೆಯಲಿದೆ.
ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರಿನ ಮಾದರಿಯಲ್ಲಿಯೇ ರಾಯಚೂರು ಮಹಾನಗರ ಪಾಲಿಕೆ ಹಾಗೂ ಮಸ್ಕಿ ಪಟ್ಟಣ ಪಂಚಾಯಿತಿ ಗಮನ ಸೆಳೆಯುವ ಉದ್ದೇಶ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸ್ವಚ್ಛ ಶೆಹರ್ ಯೋಜನೆಯಡಿ ಈ ನಗರ, ಪಟ್ಟಣವು ಮೈಸೂರು ಮಹಾನಗರ ಪಾಲಿಕೆಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ.
ಏನಿದು ಒಡಂಬಡಿಕೆ?
ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸಾಧನೆ ತೋರಲು ಕೇವಲ ನಗರವನ್ನು ಶುಚಿಯಾಗಿಟ್ಟುಕೊಂಡರೆ ಮಾತ್ರ ಸಾಲದು. ಇದರ ಜತೆಗೆ ಕೇಂದ್ರ ಸರ್ಕಾರ ನೀಡುವ ನಿರ್ದೇಶನದ ಪ್ರಕಾರ ಹಲವಾರು ಮಾನದಂಡಗಳನ್ನು ಪೂರೈಸಬೇಕು. ಅಲ್ಲದೆ, ಹಲವು ದಾಖಲೆಗಳನ್ನು ಸಿದ್ಧಪಡಿಸಬೇಕು ಹಾಗೂ ಜನರಿಂದ ಅಭಿಪ್ರಾಯವನ್ನು ಸಂಗ್ರಹಿಸಬೇಕು. ಈ ವಿಚಾರದಲ್ಲಿ ಅಪಾರ ಅನುಭವ ಹೊಂದಿರುವ ಮೈಸೂರು ನಗರದ ಮಾರ್ಗದರ್ಶನವನ್ನು ರಾಯಚೂರು ನಗರ ಹಾಗೂ ಮಸ್ಕಿ ಪಡೆಯಲು ಪ್ರಾರಂಭಿಸಿದೆ.
ಒಡಂಬಡಿಕೆಯ ಭಾಗವಾಗಿ ಮೈಸೂರು ತನ್ನ ಉತ್ತಮ ಸ್ವಚ್ಛತಾ ಪದ್ಧತಿಗಳು, ತಾಂತ್ರಿಕ ಮಾರ್ಗದರ್ಶನ, ತ್ಯಾಜ್ಯ ನಿರ್ವಹಣಾ ವಿಧಾನಗಳು ಹಾಗೂ ಐಇಸಿ ಚಟುವಟಿಕೆಗಳ ಅನುಭವವನ್ನು ರಾಯಚೂರು ಮತ್ತು ಮಸ್ಕಿಯೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದೆ. ಈ ಮೂಲಕ ಈ ನಗರಗಳ ಸ್ವಚ್ಛತಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ.
ಮೈಸೂರಿನಲ್ಲಿ ತರಬೇತಿ
ಯೋಜನೆಯ ಭಾಗವಾಗಿ ಇತ್ತೀಚೆಗೆ ರಾಯಚೂರು ಮಹಾನಗರ ಪಾಲಿಕೆಯ ತಂಡ ನಗರಕ್ಕೆ ಭೇಟಿ ನೀಡಿ ಎರಡು ದಿನಗಳ ತರಬೇತಿ ಪಡೆಯಿತು. ಈ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ, ಸ್ವಚ್ಛ ಸರ್ವೇಕ್ಷಣ ಸರ್ವೇಯಲ್ಲಿ ನಿರ್ವಹಿಸಬೇಕಾದ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಸ್ವಚ್ಛ ಸರ್ವೇಕ್ಷಣೆಗೆ ಸಜ್ಜು
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣೆಗೆ ಪ್ರತಿ ವರ್ಷ ಭಿನ್ನವಾದ ಪರಿಕಲ್ಪನೆ ನೀಡಿ ಅಂಕಗಳನ್ನು ನಿಗದಿ ಪಡಿಸಲಾಗುತ್ತದೆ. ಅಂಕಗಳನ್ನು ಸಹ ನೂತನ ಪರಿಕಲ್ಪನೆಗೆ ಪೂರಕವಾಗಿ ಬದಲಾವಣೆ ಮಾಡಲಾಗುತ್ತದೆ. ಹಾಗಾಗಿ ಪ್ರತಿ ಬಾರಿ ನಗರವನ್ನು ಶುಚಿಯಾಗಿಡುವ ದೈನಂದಿನ ಕಾರ್ಯದ ಜತೆಗೆ ಕೇಂದ್ರ ಸರ್ಕಾರ ನೀಡುವ ನೂತನ ಪರಿಕಲ್ಪನೆಗೆ ಪೂರಕವಾಗಿ ನಗರವನ್ನು ಸ್ವಚ್ಛತೆಯಲ್ಲಿ ಸಜ್ಜುಗೊಳಿಸಬೇಕಾಗುತ್ತದೆ.
ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಯ ಅಂಕಗಳನ್ನು 9,500 ನಿಂದ 12,500ಕ್ಕೆ ಏರಿಕೆ ಮಾಡಿ ಹಲವಾರು ಮಾರ್ಪಾಡುಗಳನ್ನು ಮಾಡ ಲಾಗಿತ್ತು. ಈ ಮಾರ್ಪಾಡಿಗೆ ತಕ್ಕಹಾಗೆ ನಗರವನ್ನು ಸಜ್ಜುಗೊಳಿಸಲಾಗಿತ್ತು. ಇದರ ಪರಿಣಾಮ ಕಳೆದ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ಯನ್ನು ಮೈಸೂರು ನಗರ ಪಡೆದುಕೊಂಡಿತ್ತು. ಈ ಪ್ರಶಸ್ತಿಯನ್ನು ಪಡೆದ ದೇಶದ ಕೆಲವೇ ಕೆಲವು ನಗರಗಳ ಪೈಕಿ ಮೈಸೂರು ಸಹ ಒಂದಾಗಿದೆ. ಕಳೆದ ಬಾರಿ ರೆಡ್ಯೂಸ್ (ಕಡಿಮೆ ಮಾಡು), ರೀಯೂಸ್ (ಮರುಬಳಕೆ) ಮತ್ತು ರೀಸೈಕಲ್ (ಪುನರ್ಬಳಕೆ) ಪರಿಕಲ್ಪನೆಯಡಿ ಸ್ವಚ್ಛ ಸರ್ವೇಕ್ಷಣೆ ನಡೆದಿತ್ತು. ಈ ಬಾರಿ 2025ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆಯ ಟೂಲ್‌ಕಿಟ್ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಆ ಟೂಲ್‌ಕಿಟ್‌ನಲ್ಲಿ ನೀಡುವ ಥೀಮ್ ಅಡಿಯಲ್ಲಿ ನಗರವನ್ನು ಸಜ್ಜುಗೊಳಿಸುವ ಅವಶ್ಯಕತೆ ಇದೆ.
ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ: ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 2015, 2016ರಲ್ಲಿ ದೇಶದ ನಂ.1 ಸ್ವಚ್ಛ ನಗರಿಯಾಗಿ ಹೊರ ಹೊಮ್ಮಿತ್ತು. ಆ ನಂತರ 2017ರಲ್ಲಿ 5ನೇ ಸ್ಥಾನ, 2018ರಲ್ಲಿ 8, 2019ರಲ್ಲಿ 3, 2020ರಲ್ಲಿ 5, 2021ರಲ್ಲಿ 11, 2022ರಲ್ಲಿ 8, 2023ರಲ್ಲಿ 27ನೇ ಸ್ಥಾನ ಪಡೆದಿತ್ತು. 2024ರಲ್ಲಿ ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ ಪಡೆದ ನಗರಗಳನ್ನು ರ‌್ಯಾಂಕಿಂಗ್‌ನಿಂದ ಹೊರಗಿಡಲಾಗಿತ್ತು. ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ಯು ರ‌್ಯಾಂಕಿಂಗ್‌ಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಇದರ ಜತೆಗೆ ನಗರವು ಸ್ವಚ್ಛತೆಯಲ್ಲಿ ಹಲವಾರು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಸ್ವಚ್ಛ ಶೆಹರ್ ಯೋಜನೆಯಡಿ ರಾಯಚೂರು ಮಹಾನಗರ ಪಾಲಿಕೆ ಹಾಗೂ ಮಸ್ಕಿ ಪಟ್ಟಣ ಪಂಚಾಯಿತಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಈ ನಗರಗಳನ್ನು ಸ್ವಚ್ಛ ಸರ್ವೇಕ್ಷಣೆಗೆ ಸಜ್ಜುಗೊಳಿಸುವ ವಿಚಾರದಲ್ಲಿ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆ. ಸ್ವಚ್ಛತೆಯಲ್ಲಿ ನಾವು ಅನುಸರಿಸುತ್ತಿರುವ ಪದ್ಧತಿಗಳ ಕುರಿತು ಅವರಿಗೆ ಮಾಹಿತಿ ನೀಡಲಾಗುತ್ತಿದೆ. ಸ್ವಚ್ಛ ಸರ್ವೇಕ್ಷಣೆಗೆ ತಾಂತ್ರಿಕವಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ನಗರ ಪಾಲಿಕೆ