ಪಿಯುಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಯುಕೇಶ್ ಕುಮಾರ್ ಗುರುವಾರ ಸಭೆ ನಡೆಸಿದರು. 
ಮೈಸೂರು

ಪಿಯುಸಿ ಫಲಿತಾಂಶ ಸುಧಾರಣೆಗೆ ಮೈಸೂರು ಜಿ.ಪಂ. ಸಿಇಒ ನಿರ್ದೇಶನ

ಮೈಸೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯು ರಾಜ್ಯದ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆಯಬೇಕು. ಹಾಗಾಗಿ ಹೆಚ್ಚಿನ ಫಲಿತಾಂಶ ಪಡೆಯಲು ಶ್ರಮಿಸಬೇಕು. ಶೇ.40ಕ್ಕಿಂತ ಕಡಿಮೆ ಫಲಿತಾಂಶ ಪಡೆಯುವ ಕಾಲೇಜುಗಳ ಪ್ರಾಂಶುಪಾಲರ ಮೇಲೆ ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್ ಎಚ್ಚರಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ಸಭೆಯಲ್ಲಿ ಮಾತನಾಡಿ, ಕಳೆದ ವರ್ಷ ಜಿಲ್ಲೆಯು 14ನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಅದಕ್ಕಿಂತ ಕಡಿಮೆ ಫಲಿತಾಂಶ ಬರದಂತೆ ನೋಡಿಕೊಂಡು 10 ರೊಳಗೆ ಸ್ಥಾನ ಪಡೆಯಬೇಕು. ಈ ವಿಚಾರದಲ್ಲಿ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ನಿರ್ದೇಶನ ನೀಡಿದರು.
ಪರೀಕ್ಷೆಯು ಹತ್ತಿರದಲ್ಲಿ ಇರುವ ಕಾರಣ ಮೊದಲ 5ರೊಳಗೆ ಬರಲು ಶ್ರಮಿಸಿದರೆ 10ನೇ ಸ್ಥಾನಕ್ಕೆ ತಲುಪಬಹುದು. ಸರ್ಕಾರಿ ಕಾಲೇಜುಗಳಲ್ಲಿ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಬಂದರೆ ನಾನು ಸುಮ್ಮನಿರುವುದಿಲ್ಲ. ಅಂತಹ ಕಾಲೇಜುಗಳ ಪ್ರಾಂಶುಪಾಲರ ಕಾರ್ಯವೈಖರಿ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೈಸೂರು ಶಿಕ್ಷಣ ಕ್ಷೇತ್ರದಲ್ಲಿ ಗಮನ ಸೆಳೆದಿರುವ ಜಿಲ್ಲೆಯಾಗಿದೆ. ಮುಖ್ಯಮಂತ್ರಿ ಜಿಲ್ಲೆಯಾಗಿರುವ ಜತೆಗೆ, ಅನುದಾನ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳನ್ನು ಒದಗಿಸಲು ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ನಾವು ಅದರಂತೆ ಫಲಿತಾಂಶ ಹೆಚ್ಚು ಬರುವಂತೆ ಮಾಡಬೇಕು. ಒಂದು ವೇಳೆ ಕಡಿಮೆ ಬಂದು ಕೆಟ್ಟ ಹೆಸರು ಬರುವಂತೆ ಮಾಡಿದರೆ ಸಹಿಸಲ್ಲ ಎಂದು ನುಡಿದರು.
ನಂಜನಗೂಡು ತಾಲೂಕಿನ ಕಾರ್ಯ, ದಾಸನೂರು, ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿ ಕಾಲೇಜುಗಳಲ್ಲಿ ಪೂರ್ವ ಪರೀಕ್ಷೆಯಲ್ಲಿ ಇಂಗ್ಲಿಷ್, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳಲ್ಲಿ ಕಡಿಮೆ ಅಂಕ ಪಡೆದಿರುವ ವಿದ್ಯಾರ್ಥಿಗಳ ಅಂಕಿ ಅಂಶಗಳನ್ನು ಪರಿಶೀಲಿಸಿದ ಸಿಇಒ, ಒಂದೊಂದು ಕಾಲೇಜುಗಳ ಪ್ರಾಂಶುಪಾಲರಿಂದ ವಿವರಣೆ ಪಡೆದರು.
ದೇವನೂರು ಸರ್ಕಾರಿ ಕಾಲೇಜಿನಲ್ಲಿ 30 ವಿದ್ಯಾರ್ಥಿಗಳು ಇದ್ದು, ಫಲಿತಾಂಶ ಸುಧಾರಿಸಲಾಗಿದೆ. ಅದೇ ರೀತಿ ಬೇರೆ ಕಾಲೇಜುಗಳಲ್ಲಿ ಸುಧಾರಿಸಲು ಯಾಕೇ ಹಿಂದೇಟು ಹಾಕಲಾಗುತ್ತಿದೆ? ನೀವು ವಿಶೇಷ ತರಗತಿಗಳನ್ನು ಮಾಡುವ ಜತೆಗೆ, ಮೊದಲ ಎರಡು ತರಗತಿ ಬಿಟ್ಟು ಬರುವ ವಿದ್ಯಾರ್ಥಿಗಳನ್ನು ಗಮನಿಸಬೇಕು. ಅಂತಹವರ ಪಾಲಕರನ್ನು ಕರೆಯಿಸಿ ಎಚ್ಚರಿಕೆ ಕೊಡಿಸಬೇಕು ಎಂದು ಸೂಚಿಸಿದರು. ಎಚ್.ಡಿ.ಕೋಟೆ ತಾಲೂಕಿನಲ್ಲಿ ಫಲಿತಾಂಶ ತೃಪ್ತಿಕರವಾಗದೆ ಇರುವ ಬಗ್ಗೆ ಅಸಮಾಧಾನವ್ಯಕ್ತಪಡಿಸಿದ ಅವರು, ಶೇ.100ರಷ್ಟು ಗುರಿ ಇಟ್ಟುಕೊಳ್ಳುವ ಕೆಲಸ ಮಾಡಿದರೆ ಕನಿಷ್ಠ 80ರಷ್ಟು ಫಲಿತಾಂಶ ಬರಲಿದೆ. ಮಕ್ಕಳಿಗೆ ಸುಮ್ಮನೇ ಪಾಠ ಮಾಡಿ ಹೋದರೆ ಪ್ರಯೋಜನವಾಗದು. ನಮ್ಮ ಗುರಿ ಫಲಿತಾಂಶ ಹೆಚ್ಚು ಮಾಡುವ ಕಡೆಗೆ ಇರಬೇಕು ಎಂದರು.
ಪೂರ್ವ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಬೇಕು. ಇಂಗ್ಲಿಷ್ ಸೇರಿದಂತೆ ಇನ್ನಿತರ ಏಕವಿಷಯಗಳಲ್ಲಿ ತೀರಾ ಕಡಿಮೆ ಅಂಕ ಪಡೆದಿರುವ ಮಕ್ಕಳಿಗೆ ವಿಶೇಷ ನಿಗಾ ಇರಿಸಿದರೆ ಉತ್ತಮವಾಗಲಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕಿ ನಾಗಮ್ಮ ಮಾತನಾಡಿ, ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶ ಸುಧಾರಿಸಲು ಅಗತ್ಯ ಕ್ರಮಕೈಗೊಂಡು ಹಲವಾರು ಸುಧಾರಣಾ ಕ್ರಮಗಳನ್ನು ನೀಡಲಾಗಿದೆ. ಪ್ರಾಂಶುಪಾಲರು, ಉಪನ್ಯಾಸಕರು ಪೂರ್ವ ಪರೀಕ್ಷೆಯಲ್ಲಿ 20 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಕರೆದು ಮಾತುಕತೆ ನಡೆಸಿ ಹೆಚ್ಚಿನ ಪಾಠ ಮಾಡಲಾಗುತ್ತಿದೆ. ಕೆಲವು ಉಪನ್ಯಾಸಕರು ಇಂತಿಷ್ಟು ಮಕ್ಕಳು ಎನ್ನುವಂತೆ ದತ್ತು ಪಡೆದುಕೊಂಡು ಫಲಿತಾಂಶ ಹೆಚ್ಚು ತರಲು ಒಪ್ಪಿಕೊಂಡಿದ್ದಾರೆ. ಕೆಲವು ಉಪನ್ಯಾಸಕರು ವಿದ್ಯಾರ್ಥಿನಿಲಯಗಳಿಗೆ ತೆರಳಿ ವಿಶೇಷ ತರಗತಿ ನಡೆಸುತ್ತಿದ್ದಾರೆ ಎಂದು ವಿವರಿಸಿದರು.