ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿ
- ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿ
- ನಿರೀಕ್ಷೆಗೂ ಮೀರಿದ ಅಭಿಮಾನಿಗಳ ಆಗಮನ
- ಎಲ್ಲಿ ನೋಡಿದರೂ ಕ್ರಿಕೆಟ್ ಅಭಿಮಾನಿಗಳ ಗುಂಪು
ಸಾಂಸ್ಕೃತಿಕ ನಗರಿಯ ಜನತೆ ಮಂಗಳವಾರವೂ ‘ಮಹಾರಾಜ ಟ್ರೋಫಿ’ ಟಿ-20 ಕ್ರಿಕೆಟ್ ಟೂರ್ನಿಯ ಗುಂಗಿನಲ್ಲಿ ತೇಲಿದರು. ಮುಖ್ಯವಾಗಿ ಸ್ಥಳೀಯ ಮೈಸೂರು ವಾರಿಯರ್ಸ್ ತಂಡ ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದರು. ಪ್ರಮುಖ ಸ್ಟಾರ್ ಆಟಗಾರರನ್ನು ಕಂಡು ಖುಷಿಪಟ್ಟರು.\
ಮಂಗಳವಾರ ಮೈಸೂರು ವಾರಿಯರ್ಸ್ ತಂಡದ ಪಂದ್ಯ ನಡೆದ ಕಾರಣ ನಿರೀಕ್ಷೆಗೂ ಮೀರಿದ ಅಭಿಮಾನಿಗಳು ಆಗಮಿಸಿದ್ದರು. ಪರಿಣಾಮ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನ ಕ್ರಿಕೆಟ್ ಅಭಿಮಾನಿಗಳಿಂದ ತುಂಬಿ ತುಳುಕಿತು. ಎಲ್ಲಿ ನೋಡಿದರೂ ಕ್ರಿಕೆಟ್ ಅಭಿಮಾನಿಗಳ ಗುಂಪು ಕಾಣುತ್ತಿತ್ತು.
ಮಂಗಳವಾರ ಗುಲ್ಬರ್ಗ ಮಿಸ್ಟಿಕ್ಸ್ ಹಾಗೂ ಶಿವಮೊಗ್ಗ ಯೋಧಾಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಿತು. ಬಳಿಕ ಸ್ಥಳೀಯ ಮೈಸೂರು ವಾರಿಯರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ಎರಡನೇ ಪಂದ್ಯ ನಡೆಯಿತು. ಎರಡು ರೋಚಕ ಪಂದ್ಯಗಳನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದರು. ಮೊದಲ ಪಂದ್ಯಕಿಂತಲೂ ಎರಡನೇ ಪಂದ್ಯದ ರಸದೌತಣ ಸವಿಯಲು ಮೈದಾನದಲ್ಲಿ ಹೆಚ್ಚು ಜನ ಸೇರಿದ್ದರು. ಮೈದಾನದ ಮೂಲೆ ಮೂಲೆಯಲ್ಲೂ ನೆರೆದಿದ್ದ ಸಾವಿರ ಅಭಿಮಾನಿಗಳು ನೆಚ್ಚಿನ ಆಟಗಾರರ ಹೆಸರನ್ನು ಕೂಗಿ, ಶಿಳ್ಳೆ ಹೊಡೆದರು.
ರಂಗು ನೀಡಿದ ಸ್ಟಾರ್ ಆಟಗಾರರು:
ಐಪಿಎಲ್ ಹಾಗೂ ರಾಷ್ಟ್ರೀಯ ತಂಡದಲ್ಲಿ ಆಡಿ ಗಮನ ಸೆಳೆದಿರುವ ಸ್ಟಾರ್ ಆಟಗಾರರು ನಾಲ್ಕನೇ ದಿನ ಟೂರ್ನಿಗೆ ರಂಗು ನೀಡಿದರು. ಪ್ರಮುಖವಾಗಿ ಸ್ಟಾರ್ ಬ್ಯಾಟ್ಸ್‌ಮನ್ ಐಪಿಎಲ್‌ನ ಕೆಕೆಆರ್ ತಂಡದ ಪರ ಆಡುವವ, ಗುಲ್ಬರ್ಗ ತಂಡದ ನಾಯಕ ಮನೀಶ್ ಪಾಂಡೆ, ಐಪಿಎಲ್‌ನ ಪಂಜಾಬ್ ಪ್ರಮುಖ ಬೌಲರ್ ಆಗಿರುವ ಮೈಸೂರು ತಂಡದ ನಾಯಕ ವೈಶಾಕ್ ವಿಜಯ್‌ಕುಮಾರ್, ರಾಜಸ್ತಾನ ತಂಡ ಸ್ಪಿನ್ನರ್ ಯಸ್ ರಾಜ್ ಪೂಂಜಾ, ಆರ್‌ಸಿಬಿ ತಂಡದ ಮನೋಜ್ ಭಂಗಡೆ ರಂಗು ನೀಡಿದರು. ಜತೆಗೆ ಮೈಸೂರಿನ ಪ್ರತಿಭೆ ಎಲ್.ಆರ್.ಚೇತನ್ ಕೂಡ ಹೆಚ್ಚು ಗಮನ ಸೆಳೆದರು. ಪಾಂಡೆ...ವೈಶಾಕ್...ಚೇತನ್...ಪೂಂಜಾ... ಎಂದು ಕೂಗುತ್ತಾ ಅಭಿಮಾನ ಮೆರೆದರು. ಯಾವುದೇ ತಂಡದ ಆಟಗಾರರು ಒಂದೊಂದು ರನ್ ಪೂರೈಸಿದಾಗಲೂ ಶಿಳ್ಳೆ ಹೊಡೆದು ಸಂಭ್ರಮಿಸಿದರು. ಕಮಾನ್, ಕಮಾನ್ ಎಂದು ಕೂಗಿ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ವಿಶೇಷವಾಗಿ, ಮೈಸೂರು ತಂಡದ ಆಟಗಾರರು ಬ್ಯಾಟಿಂಗ್‌ಗೆ ಇಳಿದಾಗ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತ್ತು. ಮೈದಾನದ ಮೂಲೆ-ಮೂಲೆಯಿಂದಲೂ ಸಿಕ್ಸ್... ಸಿಕ್ಸ್.... ಸಿಕ್ಸ್...’ ಎಂದು ಕೂಗಿದರು.
ಮೈಸೂರು ಪ್ರತಿಭೆಯ ಶತಕ:
ಮೈಸೂರಿನ ಸ್ಥಳೀಯ ಪ್ರತಿಭೆ, ಮೈಸೂರು ವಾರಿಯರ್ಸ್ ತಂಡದ ಆರಂಭಿಕ ಎಲ್.ಆರ್.ಚೇತನ್ ಮಂಗಳವಾರ ಭರ್ಜರಿ ಶತಕ ಸಿಡಿಸುವ ವಿಜೃಂಭಿಸಿದರು. ಆ ಮೂಲಕ ಮೈದಾನದಲ್ಲಿದ ಅಭಿಮಾನಿಗಳ ಸಂಭ್ರಮವನ್ನು ದುಪ್ಪಟ್ಟುಗೊಳಿಸಿದರು. ಮೈದಾನದ ಮೂಲೆ ಮೂಲೆಗೂ ಚಂಡನ್ನು ಕಳುಹಿಸಿ ಕ್ರಿಕೆಟ್ ರಸ ಉಣಬಡಿಸಿದರು.
ಕಡೆಯ ನಾಲ್ಕು ಪಂದ್ಯಗಳು ಮಾತ್ರ:
ಕರ್ನಾಟಕದ ಐಪಿಎಲ್ ಎಂದೇ ಖ್ಯಾತಿ ಪಡೆದಿರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ-20 ಕ್ರಿಕೆಟ್ ಟೂರ್ನಿ ಸಾಂಸ್ಕೃತಿಕ ನಗರಿಯಲ್ಲಿ ಇನ್ನು ಎರಡು ದಿನ ಮಾತ್ರ ಸ್ಥಳೀಯರಿಗೆ ಭರ್ಜರಿ ರಸದೌತಣ ನೀಡಲಿದೆ.
ಜೂನ್ 24 ರಂದು ಮಧ್ಯಾಹ್ನ 2.30 ಕೋಸ್ಟಲ್ ಕಿಂಗ್ಸ್ ಮಂಗಳೂರು-ಬೆಂಗಳೂರು ಬ್ಲಾಸ್ಟರ್ಸ್ ಪಂದ್ಯ, ಸಂಜೆ 7 ಗಂಟೆಗೆ ಹುಬ್ಬಳ್ಳಿ ಟೈಗರ್ಸ್-ಶಿವಮೊಗ್ಗ ಯೋಧಾಸ್ ಪಂದ್ಯ ನಡೆಯಲಿದೆ. ಜೂನ್ 25 ರಂದು ಮಧ್ಯಾಹ್ನ 2.30ಕ್ಕೆ ಮಂಗಳೂರು-ಮೈಸೂರು, ಸಂಜೆ 7 ಗಂಟೆಗೆ ಹುಬ್ಬಳ್ಳಿ ಟೈಗರ್ಸ್-ಗುಲ್ಬರ್ಗ ಮಿಸ್ಟಿಕ್ಸ್ ನಡುವೆ ಪಂದ್ಯ ನಡೆಯಲಿದೆ.
ವ್ಯಾಪಾರಿಗಳ ಪಾಲಿಗೆ ಸುಗ್ಗಿ: ‘ಮಹಾರಾಜ ಟ್ರೋಫಿ’ ಟಿ-20 ಕ್ರಿಕೆಟ್ ಪಂದ್ಯಾವಳಿ ಸ್ಥಳೀಯ ಆಟಗಾರರ ಪ್ರತಿಭೆ ಪ್ರದರ್ಶನದ ಜತೆಗೆ ವ್ಯಾಪಾರಿಗಳ ಪಾಲಿಗೂ ಸುಗ್ಗಿ ತಂದಿದೆ. ಪಂದ್ಯಾವಳಿ ನಡೆಯುತ್ತಿರುವ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದ ಬಳಿ 4ದಿನಗಳಿಂದ ಬೀಡುಬಿಟ್ಟಿರುವ ಸಣ್ಣ-ಪುಟ್ಟ ವ್ಯಾಪಾರಿಗಳ ಬಾಳಲ್ಲಿ ಸಂತಸ ತಂದಿದೆ. ಪಂದ್ಯಾವಳಿ ವೀಕ್ಷಣೆಗೆ ನೀರಿಕ್ಷೆಗೂ ಮೀರಿದ ಜನ ಆಗಮಿಸುತ್ತಿರುವ ಕಾರಣ ಮೈದಾನದ ಸುತ್ತಮುತ್ತ ಪಾನಿಪುರಿ, ಚಿಪ್ಸ್, ಐಸ್‌ಕ್ರಿಮ್, ಕಡಲೆಕಾಯಿ, ಚುರುಮುರಿ, ಸೌತೆಕಾಯಿ, ಮಿಠಾಯಿ ಸೇರಿದಂತೆ ಇತರ ವಸ್ತುಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ.
ಆದರ್ಶ್ ಪ್ರಜ್ವಲ್‌ಗೆ ಗಾಯ
ಫೀಲ್ಡಿಂಗ್ ವೇಳೆ ಬಿದ್ದು ಶಿವಮೊಗ್ಗ ಯೋಧಾಸ್ ಆಟಗಾರ ಆದರ್ಶ್ ಪ್ರಜ್ವಲ್ ಅವರ ಭುಜಕ್ಕೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪಂದ್ಯದ 12ನೇ ಆಟಗಾರನಾಗಿದ್ದ ಆದರ್ಶ್ ಯಶ್‌ರಾಜ್ ಪೂಂಜಾ ಬದಲಿಗೆ ಫೀಲ್ಡಿಂಗ್‌ಗೆ ಬಂದಿದ್ದರು. ಮೊದಲ ಇನಿಂಗ್ಸ್‌ನ 20ನೇ ಓವರ್‌ನಲ್ಲಿ ಎಂ.ಜಿ. ನವೀನ್ ಎಸೆತವನ್ನು ಗುಲ್ಬರ್ಗ ಮಿಸ್ಟಿಕ್ಸ್ ಬ್ಯಾಟ್ಸ್‌ಮನ್ ಕ್ರಾಂತಿಕುವಾರ್ ಬಲವಾಗಿ ಬಾರಿಸಿದರು. ಪಾಯಿಂಟ್‌ನಲ್ಲಿದ್ದ ಆದರ್ಶ್ ಕ್ಷೇತ್ರರಕ್ಷಣೆಗೆ ಮುಂದಾದಾಗ ಚೆಂಡು ಅವರಿಗೆ ಬಡಿಯಿತು. ನೋವಿನಿಂದ ಕುಸಿದ ಅವರನ್ನು ಕೂಡಲೇ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
’ ಸದ್ಯ ಅವರ ಭುಜಕ್ಕೆ ಪೆಟ್ಟಾಗಿದ್ದು, ನಿಗಾ ವಹಿಸಿದ್ದೇವೆ’ ಎಂದು ವೈದ್ಯರು ತಿಳಿಸಿದ್ದಾರೆ.