ಮೈಸೂರು ವಿಶ್ವವಿದ್ಯಾಲಯದ 106ನೇ ವಾರ್ಷಿಕ ಘಟಿಕೋತ್ಸವ 
ಮೈಸೂರು

ಮೈಸೂರು ವಿಶ್ವವಿದ್ಯಾಲಯ ಘಟಿಕೋತ್ಸವ: ಪದಕ, ಬಹುಮಾನ ಬಾಚಿದ ವನಿತೆಯರು!

ಪ್ರಮುಖ ಮುಖ್ಯಾಂಶಗಳು

  • 30,966 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ
  • ಮೂವರಿಗೆ ಗೌರವ ಡಾಕ್ಟರೇಟ್
  • ಪದಕ ಬೇಟೆಯಾಡಿದ ವೀರರು
ಮೈಸೂರು: ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಪಾರುಪತ್ಯಕ್ಕೆ ಮೈಸೂರು ವಿಶ್ವವಿದ್ಯಾಲಯದ 106ನೇ ವಾರ್ಷಿಕ ಘಟಿಕೋತ್ಸವ ಸಾಕ್ಷೀಕರಿಸಿತು.
 ಪದಕ, ನಗದು ಬಹುಮಾನಗಳನ್ನು ವನಿತೆಯರೇ ಬಾಚಿಕೊಂಡರು. ನಾವುಗಳು ಯಾವುದರಲ್ಲೂ ಕಡಿಮೆ ಇಲ್ಲ ಎಂಬ ಸಂದೇಶ ಸಾರಿದ ಅವರು ‘ಹೆಣ್ಣು ಮಕ್ಕಳೇ ಸ್ಟ್ರಾಂಗು’ ಎಂಬುದನ್ನೂ ಮತ್ತೊಮ್ಮೆ ಸಾಬೀತುಪಡಿಸಿದರು.
ವಿವಿ ಕಾರ್ಯಸೌಧ ಕ್ರಾಫರ್ಡ್ ಭವನದಲ್ಲಿ ಸೋಮವಾರ ನಡೆದ ಘಟಿಕೋತ್ಸವದಲ್ಲಿ ಮಹಿಳೆಯರು ತಮ್ಮ ಸಾಧನೆಯೊಂದಿಗೆ ಗಮನ ಸೆಳೆದರು.
 442 ಪದಕಗಳು, 197 ಬಹುಮಾನಗಳನ್ನು 213 ಅಭ್ಯರ್ಥಿಗಳು ಸ್ವೀಕರಿಸಿದರು. ಇವರಲ್ಲಿ 158 ಮಹಿಳೆಯರು ಎಂಬುದು ವಿಶೇಷ. 30,966 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ ಶೇ.60.10ರಷ್ಟು ಮಹಿಳೆಯರು(16,612) ಮತ್ತು ಶೇ.39.89ರಷ್ಟು ಪುರುಷರು(12,354). 
5,796 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ನೀಡಲಾಯಿತು. ಅವರಲ್ಲಿ ಶೇ.61.26ರಷ್ಟು ಮಹಿಳೆಯರು(3551). 
ಅಂತೆಯೇ 24,721 ಅಭ್ಯರ್ಥಿಗಳಿಗೆ ಪ್ರದಾನ ಮಾಡಿದ ಸ್ನಾತಕ ಪದವಿಯಲ್ಲೂ ಮಹಿಳೆಯರ (14,850)ಪ್ರಮಾಣ ಶೇ.60.07ರಷ್ಟು ಎಂಬುದು ಗಮನಾರ್ಹ. ವಿವಿಧ ವಿಷಯಗಳಲ್ಲಿ 449 ಸಂಶೋಧಕರು ಪಿಎಚ್.ಡಿ ಪದವಿ ಭಾಜನರಾದರು. ಇದರಲ್ಲಿ 211 ಮಹಿಳೆಯರು(ಶೇ.46.99), 238 ಪುರುಷರು(ಶೇ.53) ಆಗಿದ್ದರು.

ಪದಕ ಬೇಟೆಯಾಡಿದ ವೀರರು: 

ಎಂ.ಎಸ್ಸಿ ರಸಾಯನಶಾಸ್ತ್ರ ವಿಷಯದಲ್ಲಿ ಎನ್.ಅದಿತಿ 24 ಪದಕ, 8 ನಗದು ಬಹುಮಾನದೊಂದಿಗೆ ಅಧಿಕ ಪದಕಗಳನ್ನು ಬೇಟೆಯಾಡಿದರು. ಎಂ.ಎಸ್ಸಿ ಗಣಿತದಲ್ಲಿ ಆರ್.ಪುನೀತ್ 6 ಪದಕ, 2 ನಗದು, ಬಿ.ಎಸ್ಸಿಯಲ್ಲಿ ಟಿ. ಹರ್ಮೈನ್ 6 ಪದಕ, 5 ನಗದು, ಬಿಎ-ಎಲ್‌ಎಲ್‌ಬಿಯಲ್ಲಿ ನಯನಾ ಪಾಂಡೆ 1 ಪದಕ, ಎಲ್‌ಎಲ್‌ಎಂನಲ್ಲಿ ಕೆ.ಶ್ರುತಿ 4 ಪದಕ, 3 ನಗದು ಬಹುಮಾನ ಸ್ವೀಕರಿಸಿದರು.
ಬಿ.ಎ.ದಲ್ಲಿ ಎಂ.ಸಿ.ತ್ರೀವೇಣಿ 2 ಪದಕ, 2 ನಗದು, ಬಿ.ಎಸ್.ವರ್ಣಿಕಾ 5 ಪದಕ, 6 ನಗದು, ಎಂ.ಎ. ಕನ್ನಡ ವಿಷಯದಲ್ಲಿ ಚಂದ್ರಶೇಖರ್ 13 ಪದಕ, 2 ನಗದು ಬಹುಮಾನ ಗಿಟ್ಟಿಸಿಕೊಂಡರು. ಬಿ.ಕಾಂ.ನಲ್ಲಿ ಬುಷರ್ ಕೌಸರ್ 3 ಪದಕ, 3 ನಗದು, ಎಂ.ಕಾ.ನಲ್ಲಿ ಎಂ.ಸುಮಲತಾ 7 ಪದಕ, 2 ನಗದು, ಬಿಪಿಎಡ್‌ನಲ್ಲಿ ಎನ್.ಅವಿನಾಶ್ 5 ಪದಕ, 1 ನಗದು, ಎಂ.ಪಿಎಡ್‌ನಲ್ಲಿ ಎಚ್.ಪಿ. ದೇವಕರ್ 5 ಪದಕ, 3 ನಗದು ಬಹುಮಾನ ಪಡೆದರು.