ವಿಧಾನಸೌಧ 
ಮೈಸೂರು

ಮೈಸೂರು: ಸಚಿವ ಸ್ಥಾನದ ಮೇಲೆ ಇಬ್ಬರ ಕಣ್ಣು

ಪ್ರಮುಖ ಮುಖ್ಯಾಂಶಗಳು

  • ಸಚಿವ ಸಂಪುಟ ವಿಸ್ತರಣೆಗೆ ಕಾದಿರುವ ಶಾಸಕರು
  • ಯಾರಿಗೆ ಒಲಿಯಲಿದೆ ಸಚಿವ ಸ್ಥಾನ
  • ಸಚಿವ ಸಂಪುಟದಿಂದ ಯಾರಿಗೆ ದೊರೆಯಲಿದೆ ಖೋಕ್
ಮೈಸೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಮರುರಚನೆಯ ಚರ್ಚೆ ಬಿರುಸಾಗಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಕೆಲವು ಶಾಸಕರು ಸಚಿವ ಸ್ಥಾನ ಪಡೆಯುವ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಚಿವ ಸಂಪುಟ ಮರುರಚನೆಗೆ ಹೈಕಮಾಂಡ್‌ನಿಂದ ಸದ್ಯದಲ್ಲಿಯೇ ಗ್ರೀನ್ ಸಿಗ್ನಲ್ ದೊರೆಯುವ ಸಾಧ್ಯತೆ ಇದೆ. ಹೀಗಾಗಿ ಹಿರಿತನದ ಆಧಾರದ ಮೇಲೆ ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು ಸಚಿವ ಸ್ಥಾನದ ಆಕಾಂಕ್ಷಿಗಳಾಗಿ ಕಾಣಿಸಿಕೊಂಡಿದ್ದಾರೆ. 
2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 11 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್, 2 ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ 1 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ನ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಹಾಗೂ ತನ್ವೀರ್ ಸೇಠ್ ತಲಾ 6 ಬಾರಿ ಗೆಲುವು ಸಾಧಿಸಿದ್ದಾರೆ. ಎಚ್.ಡಿ. ಕೋಟೆ ಕ್ಷೇತ್ರದ ಅನಿಲ್ ಚಿಕ್ಕಮಾದು 2 ಬಾರಿ ಗೆಲುವು ಸಾಧಿಸಿದ್ದಾರೆ. ಚಾಮರಾಜದ ಕೆ. ಹರೀಶ್ ಗೌಡ, ನಂಜನಗೂಡಿನ ದರ್ಶನ್ ಧ್ರುವನಾರಾಯಣ, ಕೆ.ಆರ್.ನಗರದ ಡಿ. ರವಿಶಂಕರ್ ಪ್ರಥಮ ಬಾರಿಗೆ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. 
ಹಿರಿತನದ ಆಧಾರದ ಮೇಲೆ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಕೆ.ವೆಂಕಟೇಶ್ ಮೊದಲ ಅವಧಿಯಲ್ಲಿ ಸಚಿವರಾಗಿದ್ದಾರೆ. ಸಮಾಜ ಕಲ್ಯಾಣ ಸಚಿವರಾಗಿರುವ ಡಾ.ಎಚ್.ಸಿ. ಮಹದೇವಪ್ಪ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ, ಪಶುಸಂಗೋಪನಾ ಸಚಿವರಾಗಿರುವ ಕೆ.ವೆಂಕಟೇಶ್ ಚಾಮರಾಜನಗರ ಕ್ಷೇತ್ರದ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಇಬ್ಬರು ಸಚಿವರು ಇದ್ದು, ಇಬ್ಬರನ್ನು ಉಳಿಸಿಕೊಂಡು ಮತ್ತೊಬ್ಬರಿಗೆ ಅವಕಾಶ ನೀಡಲಾಗುತ್ತದೆಯೇ ಅಥವಾ ಯಾರನ್ನಾದರು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುತ್ತದೆಯೇ ಎಂಬ ಕುತೂಲಹ ಮೂಡಿದೆ. ಸದ್ಯದ ರಾಜಕೀಯ ವಾತಾವರಣದಲ್ಲಿ ಕೆ.ವೆಂಕಟೇಶ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಜಿಲ್ಲೆಯ ಮತ್ತೊಬ್ಬ ಶಾಸಕರಿಗೆ ಅವಕಾಶ ಮಾಡಿಕೊ ಡುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಂಪುಟ ಮರುರಚನೆಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‌ನೊಂದಿಗೆ ಮಾತುಕತೆ ನಡೆಸಿದ್ದು, ಹೈಕಮಾಂಡ್‌ನಿಂದ ಅಧಿಕೃತ ಸಮ್ಮತಿ ದೊರೆಯುವುದಷ್ಟೇ ಬಾಕಿ ಇದೆ. ಸಂಪುಟ ಮರುರಚನೆ ಖಚಿತವಾದರೆ ರಾಜಕೀಯ ಚಟುವಟಿಕೆಗೆ ಮತ್ತಷ್ಟು ರಂಗೇರಲಿದೆ.

ತನ್ವೀರ್ ಸೇಠ್ ಪ್ರಬಲ ಆಕಾಂಕ್ಷಿ

ತನ್ವೀರ್ ಸೇಠ್ ಬೆಂಬಲಿಗರು ಇತ್ತೀಚೆಗೆ ಗಾಂಧಿಚೌಕದಲ್ಲಿ ಪತ್ರ ಚಳವಳಿ ನಡೆಸಿ ಸಚಿವ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ಅನ್ನು ಒತ್ತಾಯಿಸಿದ್ದಾರೆ. ತನ್ವೀರ್ ಸೇಠ್ ಸಹ ಸಾಕಷ್ಟು ಬಾರಿ ಸಚಿವ ಸ್ಥಾನದ ಆಕಾಂಕ್ಷೆಯನ್ನು ಮಾಧ್ಯಮದ ಎದುರು ತೆರೆದಿಟ್ಟಿದ್ದಾರೆ. ಸರ್ಕಾರ ರಚನೆಯಾದ ಸಂದರ್ಭದಲ್ಲಿಯೇ ತನ್ವೀರ್ ಸೇಠ್ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಆ ಸಂದರ್ಭ ಜಿಲ್ಲೆಯಲ್ಲಿ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಕೆ.ವೆಂಕಟೇಶ್ ಅವರಿಗೆ ಸಚಿವ ಸ್ಥಾನ ನೀಡಲಾಯಿತು. ಅಲ್ಲದೆ, ಅಲ್ಪಸಂಖ್ಯಾತ ಖೋಟಾದಡಿಯಲ್ಲಿ ಜಮೀರ್ ಅಹ್ಮದ್ ಹಾಗೂ ರಹೀಂಖಾನ್‌ಗೆ ಸಚಿವ ಸ್ಥಾನ ನೀಡಿದ ಹಿನ್ನೆಲೆಯಲ್ಲಿ ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ಕೈತಪ್ಪಿ ಹೋಯಿತು. ಮೊದಲ ಅವಧಿಯಲ್ಲಿ ಸಚಿವರಾಗುವ ಅವಕಾಶ ಕಳೆದುಕೊಂಡ ಅವರು ಸಂಪುಟ ಮರುರಚನೆ ಸಂದರ್ಭ ನಿಶ್ಚಿತವಾಗಿಯೂ ತನಗೆ ಸಚಿವ ಸ್ಥಾನ ದೊರೆಯುತ್ತದೆ ಎಂಬ ವಿಶ್ವಾಸದಲ್ಲಿ ಇದ್ದಾರೆ. ಈ ಬಾರಿ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡದೆ ಇದ್ದರೆ ಮೈಸೂರು ಭಾಗದಲ್ಲಿ ಅಲ್ಪಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗುವ ಆತಂಕವನ್ನು ಕಾಂಗ್ರೆಸ್ ಪಕ್ಷ ಎದುರಿಸುತ್ತಿದೆ. ತನ್ವೀರ್ ಸೇಠ್ ಧರ್ಮಸಿಂಗ್ ಸಂಪುಟದಲ್ಲಿ ಕಾರ್ಮಿಕ ಸಚಿವ, ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ  ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು. 

ಅನಿಲ್ ಚಿಕ್ಕಮಾದು ಆಗಲಿದ್ದಾರೆಯೇ ಸಚಿವ?

2ನೇ ಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ಎಚ್.ಡಿ. ಕೋಟೆ ಕ್ಷೇತ್ರದ ಅನಿಲ್ ಚಿಕ್ಕಮಾದು ಸಚಿವ ಸ್ಥಾನದ ಆಕಾಂಕ್ಷೆ ಹೊಂದಿ ದ್ದಾರೆ.‘ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಅವಕಾಶ ಸಿಕ್ಕರೆ ಉತ್ತಮ ಕೆಲಸ ಮಾಡುತ್ತೇನೆ’ ಎಂದು ಅನಿಲ್ ಚಿಕ್ಕಮಾದು ತಮ್ಮ ಆಕಾಂಕ್ಷೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಕೆ.ಎನ್.ರಾಜಣ್ಣ, ಬಿ.ನಾಗೇಂದ್ರ ಅವರ ರಾಜೀನಾಮೆಯಿಂದ ತೆರವಾಗಿರುವ ಎರಡು ಪರಿಶಿಷ್ಟ ಪಂಗಡದ ಮಂತ್ರಿ ಸ್ಥಾನಗಳನ್ನು ತುಂಬಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ವಲದಯಲ್ಲಿ ಗುರುತಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸಲು ಹಾಗೂ ನಾಯಕ ಸಮುದಾಯದ ಮತಗಳನ್ನು ಸೆಳೆಯಲು ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

ಯತೀಂದ್ರ ಅವರ ನಡೆ ಏನು?

ವರುಣ ವಿಧಾನಸಭಾ ಕ್ಷೇತ್ರವನ್ನು ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿದ್ದರು. ಆದರೆ, 2023ರ ಚುನಾವಣೆಯಲ್ಲಿ ಆ ಕ್ಷೇತ್ರವನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಯತೀಂದ್ರ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ನಂತರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಯ ಕೇಳಿ ಬಂದಿತ್ತು. ಆದರೆ, ಅಪ್ಪ (ಸಿದ್ದರಾಮಯ್ಯ) ಮುಖ್ಯಮಂತ್ರಿಯಾಗಿರುವಾಗ ಮಗ (ಯತೀಂದ್ರ) ಸಚಿವನಾಗುವುದು ಬೇಡ ಎಂಬ ಅಭಿಪ್ರಾಯವನ್ನು ಸಿದ್ದರಾಮಯ್ಯ ಹಾಗೂ ಯತೀಂದ್ರ ಹೊಂದಿದ್ದಾರೆ. ಈ ವಿಚಾರವನ್ನು ಸ್ವತಃ ಡಾ.ಯತೀಂದ್ರ ಸಿದ್ದರಾಮಯ್ಯ ಮಾಧ್ಯಮದ ಮುಂದೆ ಬಹಿರಂಗ ಪಡಿಸಿರುವ ಹಿನ್ನೆಲೆಯಲ್ಲಿ ಅವರು ಸಚಿವ ಸ್ಥಾನದ ರೇಸ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ, ಒಂದುವೇಳೆ ನಾಯಕತ್ವ ಬದಲಾವಣೆಯಾದರೆ ಅವರಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆ ಇದೆ.