ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕದಿಂದ ನಗರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಸುಗಮ ಸಂಗೀತ ಕಲಿಕಾ ಶಿಬಿರಕ್ಕೆ ಕಿಕ್ಕೇರಿ ಕೃಷ್ಣಮೂರ್ತಿ ಚಾಲನೆ ನೀಡಿದರು. ಶ್ರೀನಿವಾಸ ಉಡುಪ, ನಾಗರಾಜ್ ವಿ.ಬೈರಿ, ಅಂಶಿಪ್ರಸನ್ನಕುಮಾರ್, ಜಯಪ್ಪ ಹೊನ್ನಾಳಿ, ಮ್ಯಾಂಡೋಲಿನ್ ಪ್ರಸಾದ್, ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ದೇವನೂರು ಶಂಕರ್ ಇತರರು ಇದ್ದರು.
- ಬೆಳಗಾವಿಯ ಕಾಂಗ್ರೆಸ್ ಅಧಿವೇಶನ ಸಂದರ್ಭದಲ್ಲಿ ಹುಯಿಲಗೊಳ ನಾರಾಯಣರಾಯರ ‘ಉದಯವಾಗಲಿ ಚಲುವ ಕನ್ನಡನಾಡು’ ಗೀತೆಯನ್ನು ಮೊಟ್ಟ ಮೊದಲಿಗೆ ಹಾಡಲಾಯಿತು
- 10 ಗೀತೆಗಳನ್ನು ಸಿದ್ಧಪಡಿಸಿ, ರಾಜ್ಯದ 31 ಜಿಲ್ಲೆಗಳಿಂದ ಒಂದು ಸಾವಿರ ಗಾಯಕ- ಗಾಯಕರನ್ನು ಆಯ್ಕೆ ಮಾಡಿ ಹಾಡಿಸಲಾಗುವುದು
ಮೈಸೂರು: ಸುಗಮ ಸಂಗೀತದ ನೆಲೆಯಾಗಿರುವ ಮೈಸೂರಿನಲ್ಲಿ ಡಿಸೆಂಬರ್‌ನಲ್ಲಿ ಸುಗಮ ಸಂಗೀತದ ಶತಮಾನೋತ್ಸವ ಆಚರಿಸಲಾಗುವುದು ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಕಾರ್ಯಾಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕವು ನಗರದ ಹೂಟಗಳ್ಳಿ ಕೆಎಚ್‌ಬಿ ಕಾಲನಿಯ ಶ್ರೀಅನಂತೇಶ್ವರ ಭವನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಸುಗಮ ಸಂಗೀತ ಕಲಿಕಾ ಶಿಬಿರ ಹಾಗೂ ಶ್ರೀಅನಂತೇಶ್ವರ ಟ್ರಸ್ಟ್ ಸುಗಮ ಸಂಗೀತ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಗಾವಿಯ ಕಾಂಗ್ರೆಸ್ ಅಧಿವೇಶನ ಸಂದರ್ಭದಲ್ಲಿ ಹುಯಿಲಗೊಳ ನಾರಾಯಣರಾಯರ ‘ಉದಯವಾಗಲಿ ಚಲುವ ಕನ್ನಡನಾಡು’ ಗೀತೆಯನ್ನು ಮೊಟ್ಟ ಮೊದಲಿಗೆ ಹಾಡಲಾಯಿತು. ಆ ಅಧಿವೇಶನದಲ್ಲಿ ಭಾಗವಹಿಸಿದ್ದ ಮಹಾತ್ಮ ಗಾಂಧೀಜಿ ಈ ಗೀತೆಯ ಬಗ್ಗೆ ವಿಚಾರಿಸಿ, ಅಲ್ಲಿದ್ದ ನಾರಾಯಣರಾಯರನ್ನು ಸನ್ಮಾನಿಸಿದ್ದರು ಎಂದು ಹೇಳಿದರು. ಅಲ್ಲಿಂದ ಕರ್ನಾಟಕದಲ್ಲಿ ಸುಗಮ ಸಂಗೀತ ಬೆಳವಣಿಗೆಯನ್ನು ಗುರುತಿಸಲಾಗುತ್ತಿದೆ. ಇದು ಜರುಗಿ ನೂರು ವರ್ಷ ಅಗಿರುವುದರಿಂದ ಸುಗಮ ಸಂಗೀತಕ್ಕೂ ಶತಮಾನೋತ್ಸವ ಅಗಿದೆ ಎಂದರು.
ಶತಮಾನೋತ್ಸ ಆಚರಣೆ ಸಂಬಂಧ ಈಗಾಗಲೇ ರಾಜ್ಯ ಘಟಕದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಒಂದು ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಿದ್ದು, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
10 ಗೀತೆಗಳನ್ನು ಸಿದ್ಧಪಡಿಸಿ, ರಾಜ್ಯದ 31 ಜಿಲ್ಲೆಗಳಿಗೂ ಸಂಪನ್ಮೂಲ ವ್ಯಕ್ತಿಗಳನ್ನು ಕಳುಹಿಸಿ, ಗಾಯಕ- ಗಾಯಕರನ್ನು ಆಯ್ಕೆ ಮಾಡಲಾಗುವುದು. ಈ ರೀತಿ ಜಿಲ್ಲೆಯಿಂದ ಆಯ್ಕೆಯಾದ ಒಂದು ಸಾವಿರ ಜನರನ್ನು ಮೈಸೂರಿಗೆ ಕರೆಸಿ, ಸಾಮೂಹಿಕವಾಗಿ ಗೀತಗಾಯನ ಮಾಡಿಸಲಾಗುವುದು. ಈ ಕಾರ್ಯಕ್ರಮವನ್ನು ಕುವೆಂಪು ಹಾಗೂ ಸಿ. ಅಶ್ವತ್ಥ್ ಅವರಿಗೆ ಸಮರ್ಪಿಸಲಾಗುವುದು ಎಂದು ಹೇಳಿದರು.
ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಮಾನ್ಯತೆಯೊಂದಿಗೆ ಆರಂಭಗೊಂಡಿರುವ ಶ್ರೀಅನಂತೇಶ್ವರ ಟ್ರಸ್ಟ್ ಸುಗಮ ಸಂಗೀತ ಶಾಲೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿ ಕಾರ್ಜುನಸ್ವಾಮಿ ಚಾಲನೆ ನೀಡಿ, ಸಂಗೀತ ವಿವಿಯ ಮಾನ್ಯತೆಯೊಂದಿಗೆ ನಗರದಲ್ಲಿ ಇದೇ ಪ್ರಥಮ ಬಾರಿಗೆ ಡಿಫ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸುಗಳನ್ನು ಆರಂಭಿಸಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ವಿ. ಬೈರಿ ಮಾತನಾಡಿ, ನಮ್ಮ ಪರಿಷತ್ತಿನಿಂದ ಆಯೋಜಿಸುತ್ತಿರುವ ಮೂರನೇ ಕಲಿಕಾ ಶಿಬಿರ ಇದಾಗಿದೆ. ಮೊದಲ ವರ್ಷ ಕಿಕ್ಕೇರಿ ಕೃಷ್ಣಮೂರ್ತಿ, ಪುತ್ತೂರು ನರಸಿಂಹನಾಯಕ, ಎರಡನೇ ವರ್ಷ ಶ್ರೀನಿವಾಸ ಉಡುಪ, ನಾಗಚಂದ್ರಿಕಾ ಭಟ್ ಶಿಬಿರ ನಡೆಸಿಕೊಟ್ಟಿದ್ದರು. ಈ ಬಾರಿ ಮ್ಯಾಂಡೋಲಿನ್ ಪ್ರಸಾದ್ ಅವರ ಶಿಬಿರ ನಡೆಸಿಕೊಡುತ್ತಿದ್ದಾರೆ ಎಂದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಪ್ರಧಾನ ಕಾರ್ಯದರ್ಶಿಯಾದ ಗಾಯಕ ಶ್ರೀನಿವಾಸ ಉಡುಪ ಮಾತನಾಡಿ, ಸುಗಮ ಸಂಗೀತವನ್ನು ಕೇವಲ ಹಾಡಿದರೆ ಸಾಲದು. ಕವಿಗಳ ಸಾಹಿತ್ಯ, ಭಾಷೆ, ಪದಗಳನ್ನು ಗಮನದಲ್ಲಿರಿಸಿಕೊಂಡು ಅದಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿ, ಸುಗಮ ಸಂಗೀತದ ಹಾಡೊಂದನ್ನು ಪ್ರಸ್ತುತ ಪಡಿಸಿದರು.
ಚಿಂತಕ ಶಂಕರ್ ದೇವನೂರು ಮಾತನಾಡಿ, ಸಂಗೀತ ಮಾನವನ ಎಲ್ಲ ನೋವನ್ನು ಮರೆಸುತ್ತದೆ. ಗಾಯಕರಿಗೆ ಸಾಹಿತ್ಯದ ಪದಗಳ ಅರಿವಿರಬೇಕು. ಸಂದರ್ಭಕ್ಕೆ ಅನುಗುಣವಾಗಿ ಭಾವ ಇರಬೇಕು. ಸಂಗೀತ ಕೇಳುಗರ ಮನೋವಿಕಾಸ ಮಾಡುವಂತಿರಬೇಕು ಎಂದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಾಹಿತಿ ಜಯಪ್ಪ ಹೊನ್ನಾಳಿ, ಪರಿಷತ್ತಿನ ಜಿಲ್ಲಾ ಘಟಕದ ನ. ಗಂಗಾಧರಪ್ಪ, ಸಿರಿಬಾಲು, ಶಿಬಿರದ ಸಂಚಾಲಕರಾದ ಗೀತಲಕ್ಷ್ಮಿ ಕಿಣಿ, ಸುಜಾತಾ ಜಯಕುಮಾರ್, ಬೆಟ್ಟೇಗೌಡ ಇತರರು ಇದ್ದರು.
ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಮಾನ್ಯತೆಯೊಂದಿಗೆ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕವು ಹೂಟಗಳ್ಳಿ ಕೆಎಚ್‌ಬಿ ಕಾಲನಿ ಶ್ರೀಅನಂತೇಶ್ವರ ಟ್ರಸ್ಟ್ ಸುಗಮ ಸಂಗೀತ ಶಾಲೆ ಆರಂಭಿಸಿತು. ಒಂದು ವರ್ಷದ ಡಿಪ್ಲೋಮಾ, 6 ತಿಂಗಳ ಸರ್ಟಿಫಿಕೇಟ್ ಕೋರ್ಸ್ ಲಭ್ಯವಿದೆ. ಈಗಾಗಲೇ 30 ಜನ ಹೆಸರು ನೋಂದಾಯಿಸಿಕೊಂಡಿದ್ದಾರೆಂದು ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗರಾಜ್ ವಿ.ಬೈರಿ ಕೋರಿದರು.