ಮೈಸೂರು: ನಗರದ ಮಧುವನ ಬಡಾವಣೆಯ ಮನೆಯೊಂದರಲ್ಲಿ ಯಾರೂ ಇಲ್ಲದೆ ಇರುವುದನ್ನು ಗಮನಿಸಿದ ಕಳ್ಳರು ಮನೆಯ ಬಾಗಿಲು ಮೀಟಿ ಚಿನ್ನಾಭರಣ ಕಳವು ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಶ್ರೀರಾಂಪುರದ ಮಧುವನ ಬಡಾವಣೆಯ ನಿವಾಸಿ ವಿಷ್ಣುಮೂರ್ತಿ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಇವರು ಏ. 17 ರಂದು ಪತ್ನಿಯೊಂದಿಗೆ ಚೆನ್ನೈನಲ್ಲಿರುವ ಮಗಳ ಮನೆಗೆ ತೆರಳಿದ್ದರು. ನಂತರ ಏ.26 ರಂದು ಬೆಂಗಳೂರಿನಲ್ಲಿ ಮತ್ತೊಬ್ಬ ಮಗಳ ಮನೆಗೆ ತೆರಳಿ ಏ.28 ರಂದು ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಳವು ನಡೆದಿರುವುದು ಕಂಡು ಬಂತು.
ಕಳ್ಳರು ಮನೆಯ ಬೀರು ಮುರಿದು 20 ಗ್ರಾಂ ತೂಕದ ಚಿನ್ನದ ನಾಣ್ಯಗಳು, 20 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಕಳವು ಮಾಡಿದ್ದಾರೆ. ಚಿನ್ನಭಾರಣಗಳ ದಾಖಲೆಗಳು ದೊರೆಯದ ಹಿನ್ನೆಲೆಯಲ್ಲಿ ವಿಷ್ಣನೂರ್ತಿ ಅವರು ತಡವಾಗಿ ಮಂಗಳವಾರ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೋರಿ ಕರು ರಕ್ಷಣೆ: ನಗರದ ಕಸಾಯಿಖಾನೆಗೆ ಮಂಗಳವಾರ ಸಾಗಾಟ ಮಾಡುತ್ತಿದ್ದ ಹೋರಿ ಕರುವನ್ನು ನರಸಿಂಹರಾಜ ಪೊಲೀಸ್ ಠಾಣೆ ಸಿಬ್ಬಂದಿ ರಕ್ಷಿಸಿದ್ದಾರೆ.
ತೊಣಚಿಕೊಪ್ಪಲಿನ ಟಿ.ಚಂದ್ರ ಎಂಬಾತ ಹೋರಿ ಕರುವನ್ನು ಗೂಡ್ಸ್ ಆಟೋದಲ್ಲಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೋರಿ ಕರುವನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ. ಆರೋಪಿಯಿಂದ ಹೋರಿ ಕರುವನ್ನು ರಕ್ಷಿಸಲಾಗಿದ್ದು, ಸಾಗಾಟಕ್ಕೆ ಬಳಕೆ ಮಾಡಲಾಗಿದ್ದ ಗೂಡ್ಸ್ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.