ಮೈಸೂರಿನಲ್ಲಿ ಮಂಜು ಕವಿದ ವಾತಾವರಣ ಕಾಣಿಸಿಕೊಂಡಿದೆ
- ಹವಾಮಾನ ಇಲಾಖೆ ಮುನ್ಸೂಚನೆ
- ತಾಪಮಾನ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆ
ಮೈಸೂರು: ಜಿಲ್ಲೆಯಲ್ಲಿ ಚಳಿ ಮತ್ತೆ ತೀವ್ರಗೊಂಡಿದ್ದು, ಹವಾಮಾನ ಇಲಾಖೆಯು ಮುಂದಿನ 5 ದಿನಗಳ ಅವಧಿಯಲ್ಲಿ 13 ರಿಂದ 14 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗುವ ಮುನ್ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ನವೆಂಬರ್ ಅಂತ್ಯದಲ್ಲಿ ತೀವ್ರ ಚಳಿ ಕಾಣಿಸಿಕೊಂಡಿತ್ತು. ಮಧ್ಯಾಹ್ನದ ವೇಳೆಯಲ್ಲೂ ಚಳಿಯ ವಾತಾವರಣ ಕಂಡು ಬಂದ ಹಿನ್ನೆಲೆಯಲ್ಲಿ ಜನರು ಬೆಚ್ಚನೆಯ ಉಡುಪು ಧರಿಸಿ ಓಡಾಡುತ್ತಿದ್ದ ದೃಶ್ಯ ಕಂಡು ಬಂದಿತ್ತು. ನಂತರ ಕೆಲವು ದಿನಗಳ ಕಾಲ ಚಳಿಯ ಪ್ರಮಾಣ ಕಡಿಮೆಯಾಗಿತ್ತು. ಇದೀಗ ಮತ್ತೆ ಚಳಿ ತೀವ್ರಗೊಳ್ಳಲು ಪ್ರಾರಂಭಗೊಂಡಿದ್ದು, ಜಿಲ್ಲೆಯಲ್ಲಿ ಮಂಗಳವಾರ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಜಿಲ್ಲೆಯಲ್ಲಿ ಡಿ.10 ರಿಂದ 14ರವರೆಗೆ ಮೋಡ ಕವಿದ ವಾತಾವರಣ ಇದ್ದು, ಮಳೆ ಬರುವ ಸಾಧ್ಯತೆ ಇಲ್ಲ. ಆದರೆ, ಈ ಅವಧಿಯಲ್ಲಿ ಕನಿಷ್ಠ ಉಷ್ಣಾಂಶ 13 ರಿಂದ 14 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ಉಷ್ಣಾಂಶ 30 ರಿಂದ 31 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ ಗಾಳಿಯು ಗಂಟೆಗೆ 4 ರಿಂದ 6 ಕಿ.ಮೀ. ವೇಗದಲ್ಲಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಎನ್. ಉಮಾಶಂಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶುಷ್ಕ ಹವಾಮಾನ ಮುಂದುವರೆದಿರುವ ಹಿನ್ನೆಲೆಯಲ್ಲಿ ಭತ್ತದ ಕೊಯ್ಲಿಗೆ ಇದು ಸೂಕ್ತ ಅವಧಿಯಾಗಿದೆ. ಧಾನ್ಯದ ಬಣ್ಣ ಬದಲಾಗು ವುದನ್ನು ತಪ್ಪಿಸಲು ಇಬ್ಬನಿ ಒಣಗಿದ ನಂತರ ಬೆಳಗ್ಗೆ ಬೇಗನೆ ಕೊಯ್ಲು ಮಾಡಬೇಕು. ಧಾನ್ಯದ ಗುಣಮಟ್ಟ ಕಾಯ್ದುಕೊಳ್ಳಲು 2 ರಿಂದ 3 ದಿನಗಳವರೆಗೆ ಸರಿಯಾದ ಸೂರ್ಯನ ಬೆಳಕಿನಲ್ಲಿ ಒಣಗಿಸಬೇಕು. ಶಿಲೀಂದ್ರಗಳ ಬೆಳವಣಿಗೆಯನ್ನು ತಡೆಯಲು ಧಾನ್ಯಗಳನ್ನು ಸುರಕ್ಷಿತ ತೇವಾಂಶ ಮಟ್ಟದಲ್ಲಿ (ಶೇ.12ಕ್ಕಿಂತ ಕಡಿಮೆ) ಸಂಗ್ರಹಿಸಬೇಕು ಎಂದು ಉಮಾಶಂಕರ್ ಸಲಹೆ ನೀಡಿದ್ದಾರೆ.
ಬೆಳಗ್ಗಿನ ತಾಪಮಾನ ಕಡಿಮೆ ಇದ್ದರೆ ಇಬ್ಬನಿ ಶೇಖರಣೆಯಾಗುತ್ತದೆ. ಇಬ್ಬನಿ ಇರುವಾಗ ಕೊಯ್ಲು ಮಾಡುವುದನ್ನು ತಪ್ಪಿಸಬೇಕು. ಕಾರ್ಮಿಕರು ಮುಂಜಾನೆ ಬೆಚ್ಚನೆಯ ಬಟ್ಟೆಗಳನ್ನು ಧರಿಸಬೇಕು. ಮಳೆ ಸಾಧ್ಯತೆ ಇಲ್ಲವಾದ ಹಿನ್ನೆಲೆಯಲ್ಲಿ ಸೂಕ್ಷ್ಮ ಬೆಳೆಗಳಿಗೆ (ತರಕಾರಿಗಳು, ದ್ವಿದಳ ಧಾನ್ಯಗಳು) ಅಗತ್ಯವಿರುವ ನೀರು ಹಾಕಬೇಕು. ಸಂಜೆ ಕಡಿಮೆ ಆರ್‌ಎಚ್‌ನಿಂದಾಗಿ ಒಣಗುವುದನ್ನು ತಡೆಯಲು ಅತಿಯಾದ ನೀರಾವರಿಯನ್ನು ತಪ್ಪಿಸಬೇಕು. ವಾತಾವರಣ ತಂಪಾಗಿರುವ ಹಿನ್ನೆಲೆಯಲ್ಲಿ ಎಂಜಿನ್‌ಗಳನ್ನು ಚಾಲನೆಗೊಳಿಸಲು ಕಷ್ಟವಾಗಬಹುದು. ಹಾಗಾಗಿ ನೀರಾವರಿ ಪಂಪ್‌ಗಳು ಹಾಗೂ ಯಂತ್ರೋಪಕರಣಗಳು ಸರಿಯಾದ ಕಾರ್ಯನಿರ್ವಹಣೆಗಾಗಿ ಪರಿಶೀಲಿಸಬೇಕು.
ತೋಟಗಾರಿಕಾ ಬೆಳೆಗಳಲ್ಲಿ ತೇವಾಂಶದ ಒತ್ತಡ ತಪ್ಪಿಸಲು ಹಣ್ಣಿನ ಬೆಳೆಗಳಿಗೆ ಲಘು ನೀರಾವರಿ ಒದಗಿಸಬೇಕು, ತರಕಾರಿಗಳ ಎಳೆಯ ಸಸಿಗಳಿಗೆ ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಲು ಹಸಿಗೊಬ್ಬರ ಒದಗಿಸಬೇಕು. ತರಕಾರಿ ನರ್ಸರಿಗಳನ್ನು ಶೀತದಿಂದ ರಕ್ಷಿಸಲು ಸಂಜೆ ಲಘು ನೀರಾವರಿ ಒದಗಿಸಬೇಕು ಮತ್ತು ರಾತ್ರಿಯಲ್ಲಿ ಒಣ ಹುಲ್ಲು ಅಥವಾ ಹಾಳೆಗಳಿಂದ ಮುಚ್ಚಬೇಕು. ಬಾಳೆ, ತೆಂಗಿನಕಾಯಿ, ಅಡಿಕೆಗೆ ನೀರಾವರಿ ಒದಗಿಸಬೇಕು.
ಕೀಟ ನಿರ್ವಹಣೆ
ಶುಷ್ಕ ಮತ್ತು ತಂಪಾದ ಬೆಳಗ್ಗಿನ ಅವಧಿಯಲ್ಲಿ ಮೆಣಸಿನಕಾಯಿ, ತರಕಾರಿಗಳಲ್ಲಿ ಮಿಟೆ (ಕೀಟ) ಚಟುವಟಿಕೆಯನ್ನು ಹೆಚ್ಚಿಸಬಹುದು. ಒಣ ಗಾಳಿಯ ಪರಿಸ್ಥಿತಿಯಿಂದಾಗಿ ಈರುಳ್ಳಿ ಮತ್ತು ಮೆಣಸಿನಕಾಯಿಯಲ್ಲಿ ಥ್ರಿಪ್ಸ್‌ಅನ್ನು ಮೇಲ್ವಿಚಾರಣೆ ಮಾಡಬೇಕು, ಹೊಲಗಳಲ್ಲಿ ಭತ್ತದ ಹುಲ್ಲು ದಂಶಕಗಳನ್ನು ಆಕರ್ಷಿಸುವ ಹಿನ್ನೆಲೆಯಲ್ಲಿ ಬಲೆಗಳನ್ನು ಬಳಸಿ ಮತ್ತು ಹೊಲದ ನೈರ್ಮಲ್ಯವನ್ನು ಕಾಪಾಡಬೇಕು.
ಚಳಿಯಿಂದ ಜಾನುವಾರುಗಳನ್ನು ರಕ್ಷಿಸಿ
ಚಳಿಯ ವಾತಾವರಣ ಇರುವ ಹಿನ್ನೆಲೆಯಲ್ಲಿ ಜಾನುವಾರು ಮತ್ತು ಕೋಳಿಗಳಿಗೆ ರಾತ್ರಿ ಮತ್ತು ಮುಂಜಾನೆ ಬೆಚ್ಚಗಿನ ಮತ್ತು ಒಣ ಆಶ್ರಯಗಳನ್ನು ಒದಗಿಸಬೇಕು. ಪ್ರಾಣಿಗಳ ಕೊಟ್ಟಿಗೆಗಳಿಗೆ ಶೀತ ಗಾಳಿ ಪ್ರವೇಶಿಸುವುದನ್ನು ತಪ್ಪಿಸಬೇಕು. ತಂಪಾದ ಗಾಳಿಯ ಪ್ರವೇಶ ವನ್ನು ಕಡಿಮೆ ಮಾಡಲು ಕೊಟ್ಟಿಗೆಗಳ ಸುತ್ತಲೂ ಪರದೆಗಳು ಅಥವಾ ಗೋಣಿ ಚೀಲಗಳನ್ನು ಬಳಸಬೇಕು.