ಮೈಸೂರು ನಗರ ಪಾಲಿಕೆ ವತಿಯಿಂದ ನಗರದ ಪುರಭವನ ಆವರಣದಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಬಹುಮಾನ ವಿತರಿಸಿದರು.
ಮೈಸೂರು: ಸ್ವಚ್ಛ ಭಾರತ ಅಭಿಯಾನ ಮತ್ತು ಸ್ವಚ್ಛ ಸರ್ವೇಕ್ಷಣಾ 2025-26 ಪ್ರಯುಕ್ತ ನಗರ ಪಾಲಿಕೆ ವತಿಯಿಂದ ನಗರದ ಪುರಭವನ ಆವರಣದಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ‘ತ್ಯಾಜ್ಯದಿಂದ ಕಲಾಕೃತಿ’ ಹಾಗೂ ಪೋಸ್ಟರ್ ತಯಾರಿಕಾ ಸ್ಪರ್ಧೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ವಿವಿಧ ತ್ಯಾಜ್ಯವನ್ನು ಬಳಕೆ ಮಾಡಿಕೊಂಡು ಆಕರ್ಷಕ ಕಲಾಕೃತಿಗಳನ್ನು ರಚಿಸುವ ಮೂಲಕ ಗಮನ ಸೆಳೆದರು.
‘ಸ್ವಚ್ಛತೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ’ ವಿಷಯದ ಕುರಿತು ನಡೆದ ಪೋಸ್ಟರ್ ತಯಾರಿಕಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಸ್ಥಳದಲ್ಲೇ ಆಕರ್ಷಕ ಚಿತ್ರಗಳನ್ನು ಬಿಡಿಸುವ ಮೂಲಕ ಸ್ವಚ್ಛತೆಯ ಸಂದೇಶ ಸಾರಿದರು. ಇದರೊಂದಿಗೆ ‘ತ್ಯಾಜ್ಯದಿಂದ ಕಲಾಕೃತಿ’ ತಯಾರಿಸುವ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿ ಉತ್ಪತಿಯಾಗುವ ತ್ಯಾಜ್ಯ ಬಳಸಿಕೊಂಡು ಸುಂದರ ಕಲಾಕೃತಿಗಳನ್ನು ರಚಿಸಿ ಪ್ರದರ್ಶನಕ್ಕೆ ಇಟ್ಟಿದ್ದರು.
ಯುವ ಪೀಳಿಗೆಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.ನಗರದ ವಿವಿಧ ಶಾಲೆ ಮತ್ತು ಕಾಲೇಜುಗಳಿಂದ 1200 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಮುಂದಿನ ಪೀಳಿಗೆಯಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವಲ್ಲಿ ಪಾಲಿಕೆಯ ಈ ಪ್ರಯತ್ನ ಯಶಸ್ವಿಯಾಗಿದೆ. ಇದಕ್ಕೆ ಶಾಲಾ, ಕಾಲೇಜುಗಳ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ನೀಡಿದ ಸಹಕಾರ ಅತ್ಯಂತ ಮಹತ್ವದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಾಲಿಕೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೀನಾಕ್ಷಿ, ಪರಿಸರ ಇಂಜಿನಿಯರ್‌ಗಳಾದ ಮಹಾದೇವಮ್ಮ, ನವೀನ್, ಜ್ಯೋತಿ, ಲೋಕೇಶ್ವರಿ, ಕೃಷ್ಣಮೂರ್ತಿ, ಶ್ರೀದೇವಿ ಹಾಗೂ ಇತರರು ಪಾಲ್ಗೊಂಡಿದ್ದರು.
ವಿಜೇತರ ವಿವರ: ತ್ಯಾಜ್ಯದಿಂದ ಕಲಾಕೃತಿ ತಯಾರಿಸುವ ಸ್ಪರ್ಧೆಯಲ್ಲಿ ಬೇತೆಲ್ ಪೊವೆಲ್ ಪಬ್ಲಿಕ್ ಶಾಲೆಯ ಬಿ.ಪ್ರನರದತ್ತ (ಪ್ರ), ಶ್ರೀರಾಂಪುರ ಬಿಜಿಎಸ್ ಪ್ರೌಢ ಶಾಲೆಯ ಶ್ರೀಕಾಂತ್ (ದ್ವಿ), ಸೆಂಟ್ ಥಾಮಸ್ ಪ್ರೌಢ ಶಾಲೆಯ ಅಮೂಲ್ಯ (ತೃ), ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಕ್ಯಾಪಿಟಲ್ ಪಬ್ಲಿಕ್ ಸ್ಕೂಲ್‌ನ ಎಚ್.ಪಿ. ಪಾವನಿ (ಪ್ರ), ಐಡಿಯಲ್ ಜಾವಾ ರೋಟರಿ ಶಾಲೆಯ ಎಂ. ಚಾರುಮಿತ್ರ (ದ್ವಿ), ಸಿದ್ದಾರ್ಥ ಬಡಾವಣೆಯ ಜೆಎಸ್‌ಎಸ್ ಪಬ್ಲಿಕ್ ಶಾಲೆಯ ಎಚ್.ಮಂಜುಶ್ರೀ (ತೃ) ಬಹುಮಾನ ಪಡೆದರು. ವಿಶೇಷ ಚೇತನ ವಿದ್ಯಾರ್ಥಿಗಳ ವಿಭಾಗದಲ್ಲಿ ಆಯೋಜಿಸಿದ್ದ ತ್ಯಾಜ್ಯದಿಂದ ಕಲಾಕೃತಿ ತಯಾರಿಸುವ ಸ್ಪರ್ಧೆಯಲ್ಲಿ ಕುಸುಮಾ (ಪ್ರ), ಕೆ. ಪವನ (ದ್ವಿ), ತುಷಾರ್ ಗೌಡ (ತೃ) ಬಹುಮಾನ ಪಡೆದರು.