ಸಾಂದರ್ಭಿಕ ಚಿತ್ರ 
ಮೈಸೂರು

ಮೈಸೂರು ಸಿಲ್ಕ್ ಸೀರೆ ಕಳವು

ಸದೇಶ್ ಕಾರ್ಮಾಡ್
ಮೈಸೂರು: ನಗರದ ಜೆಎಲ್‌ಬಿ ರಸ್ತೆಯ ಕೆಎಸ್‌ಐಸಿ ಮೈಸೂರು ಸಿಲ್ಕ್ ಮಳಿಗೆಯಲ್ಲಿ 72,633 ರೂ. ಮೌಲ್ಯದ ಸೀರೆ ಕಳುವಾಗಿದೆ.
ಈ ಮಳಿಗೆಯಲ್ಲಿ ಮೆ 5 ರಂದು 96 ಸೀರೆಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಆ ದಿನ 51 ಸೀರೆಗಳು ಮಾರಾಟವಾಗಿತ್ತು. ನಂತರ ಸಂಜೆ ಸ್ಟಾಕ್‌ಚೆಕ್ ಮಾಡುವ ಸಂದರ್ಭ 1 ಸೀರೆ ಕಡಿಮೆ ಇರುವುದು ಕಂಡು ಬಂತು. ಸೀರೆ ಪತ್ತೆಗಾಗಿ ಕೆಲವು ದಿನಗಳ ಕಾಲ ಶಾಪ್‌ನಲ್ಲಿ ಹುಡುಕಾಟ ನಡೆಸಲಾಯಿತು. ಆದರೆ, ಸೀರೆ ಪತ್ತೆಯಾಗದ ಹಿನ್ನೆಲೆಯಲ್ಲಿ ಸೋಮವಾರ ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಾಪ್‌ನಲ್ಲಿ ಸಿಸಿ ಟಿವಿ ಕಾರ್ಯನಿರ್ವಹಿಸುತ್ತಿರಲಿಲ್ಲ, ಇದರ ಲಾಭ ಪಡೆದ ಕಳ್ಳರು ಸೀರೆಯನ್ನು ಕಳವು ಮಾಡಿದ್ದಾರೆ.
ಚಿನ್ನಾಭರಣ ಕಳವು: ವಿವಾಹ ಸಮಾರಂಭಕ್ಕೆ ನಗರಕ್ಕೆ ಆಗಮಿಸಿದ್ದ ಬೆಂಗಳೂರಿನ ಮಹಿಳೆಯೊಬ್ಬರ 3 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳುವಾಗಿದೆ.
ಬೆಂಗಳೂರಿನ ಶ್ರೀನಗರ ನಿವಾಸಿ ಜೆ. ಕುಮಾರಿ ಎಂಬವರೇ ಚಿನ್ನ ಕಳೆದುಕೊಂಡವರು. ಇವರು ಮೇ ಭಾನುವಾರ ನಗರದಲ್ಲಿ ಆಯೋಜಿಸಿದ್ದ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಮೇ 9 ರಂದು ನಗರಕ್ಕೆ ಆಗಮಿಸಿ ಬಸವನಗುಡಿಯಲ್ಲಿರುವ ಸಹೋದರ ನಾಗೇಂದ್ರ ಮನೆಯಲ್ಲಿ ಉಳಿದುಕೊಂಡಿದ್ದರು.
ಮೇ 10 ರಂದು ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನಂತರ ಮತ್ತೆ ಸಹೋದರರ ಮನೆಗೆ ತೆರಳಿ ಅಲ್ಲಿ ಚಿನ್ನವನ್ನು ಕಳಚಿ ಹ್ಯಾಂಡ್‌ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು. ಬಸವನಗುಡಿಯಿಂದ ನಗರ ಬಸ್ ನಿಲ್ದಾಣಕ್ಕೆ ಬಸ್ ಹತ್ತುವಾಗ ಚಿನ್ನದ ಸರ ಇರುವುದನ್ನು ಖಚಿತ ಪಡಿಸಿಕೊಂಡಿದ್ದರು. ನಂತರ ಇವರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಆಗಮಿಸಿ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭ ಮಣಿಪಾಲ್ ಆಸ್ಪತ್ರೆಯ ಬಳಿ ಹ್ಯಾಂಡ್‌ಬ್ಯಾಗ್ ಪರಿಶೀಲಿಸಿದಾಗ ಚಿನ್ನದ ಸರ ಕಳುವಾಗಿರುವುದು ಕಂಡು ಬಂತು. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.