ತಾಯಿ ಮತ್ತು ಮಗುವಿನ ಎಐ ಚಿತ್ರ
- ಮೈಸೂರು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 11 ಸಾವು
- ಕಳೆದ ವರ್ಷ ಜಿಲ್ಲೆಯಲ್ಲಿ 28 ಸಾವು
ಮೈಸೂರು: ಗರ್ಭಿಣಿಯರು ಹಾಗೂ ಬಾಣಂತಿಯರ ಆರೈಕೆಗೆ ಹೆಚ್ಚಿನ ಒತ್ತು ನೀಡಿದ ಪರಿಣಾಮ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ತಾಯಿ ಮರಣ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ 28 ತಾಯಿ ಮರಣ (ಮರಣ ಅನುಪಾತ 76.50) ಸಂಭವಿಸಿತ್ತು. ಪ್ರಸಕ್ತ ವರ್ಷ 11 ತಾಯಂದಿರು ಮೃತಪಟ್ಟಿದ್ದು, ಮರಣ ಅನುಪಾತ 30.20ಕ್ಕೆ ಇಳಿಕೆಯಾಗಿದೆ. ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ತರಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ.
ತಾಯಿಯ ಮರಣ ಎಂದರೆ ಗರ್ಭಧಾರಣೆ, ಹರಿಗೆ ಅಥವಾ ಹೆರಿಗೆಯ ನಂತರದ ಸಮಯದಲ್ಲಿ ಸಂಭವಿಸುವ ತಾಯಿಯ ಸಾವು. ಇದು ಗರ್ಭಧಾರಣೆಗೆ ಸಂಬಂಧಿತ ತೊಡಕುಗಳಿಂದ ಉಂಟಾಗುತ್ತದೆ. ತಾಯಿ ಮರಣಕ್ಕೆ ಮುಖ್ಯ ಕಾರಣಗಳಲ್ಲಿ ತೀವ್ರ ರಕ್ತಸ್ರಾವ, ಸೋಂಕುಗಳು, ಅಧಿಕ ರಕ್ತದೊತ್ತಡ, ಅಸುರಕ್ಷಿತ ಗರ್ಭಪಾತ ಮತ್ತು ಹೃದಯ ಸಂಬಂಧಿ ರೋಗಗಳು ಸೇರಿವೆ. ತಾಯಿ ಮರಣ ಪ್ರಮಾಣ ಹೆಚ್ಚಾದಲ್ಲಿ ಇದು ಕುಟುಂಬ ಹಾಗೂ ಸಮಾಜದ ಮೇಲೆ ಆರ್ಥಿಕ ಮತ್ತು ಭಾವನಾತ್ಮಕ ದುಷ್ಪರಿಣಾಮಗಳನ್ನು ಊಂಟು ಮಾಡುತ್ತದೆ.
ತಾಯಿ ಕಾರ್ಡ್ ಮಾಹಿತಿ ಪ್ರಕಾರ ಸಮಯ ಮತ್ತು ಸಂದರ್ಭದನ್ವಯ ರಕ್ತಹೀನತೆ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸಂಪರ್ಕವಾಗಿ ಗರ್ಭೀರ್ಣಿ ಮಹಿಳೆಯರಿಗೆ ನೀಡಲಾಗುತ್ತಿದೆ. ಕೆ.ಪಿ.ಎಂ.ಇ.ಎ ಪ್ರಾಧಿಕಾರದಡಿಯಲ್ಲಿ ಬರುವ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಮೇಲ್ವಿಚಾ ರಣೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಾಧಿಕಾರದ ಸಭೆಗಳಲ್ಲಿ ತಾಯಿ ಆರೋಗ್ಯ ಸಂಪರ್ಕವಾಗಿ ನಿರ್ವಹಣೆ ಮಾಡುವಲ್ಲಿ ನ್ಯೂನತೆಗಳು ಕಂಡು ಬಂದ ಖಾಸಗಿ ಆಸ್ಪತ್ರೆಗಳಿಗೆ ದಂಡವನ್ನು ವಿಧಿಸಲಾಗಿದೆ.
ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಯೋಜನೆಯಡಿಯಲ್ಲಿ ತಾಯಿ ಕಾರ್ಡ್ ಅನುಸಾರ ಸಾಮಾನ್ಯ ಗರ್ಭಿಣಿ ಮತ್ತು ಹೆಚ್ಚಿನ ಅಪಾಯದ ಗರ್ಭಧಾರಣೆ (ಎಚ್‌ಆರ್‌ಪಿ) ಹೊಂದಿರುವವರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ತುರ್ತು ಹೆರಿಗೆ ನ ನಿರ್ವಹಣೆಗೆ ಹಾಗೂ ಎಚ್‌ಆರ್‌ಪಿ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಿ ಆ ಮೂಲಕ ಮೂಲಕ ಮಾಹಿತಿಯನ್ನು ರವಾನಿಸಲಾಗುತ್ತಿದೆ. ಕ್ಷೇತ್ರ ಮಟ್ಟದ ಆಯಕಟ್ಟಿನ ಪ್ರದೇಶಗಳಲ್ಲಿ ತುರ್ತು ವಾಹನಗಳನ್ನು ನಿಯೋಜಿಸಲಾಗಿದ್ದು, ಇದರ ಸಂಪರ್ಣ ಮೇಲ್ವಿಚಾರಣೆಯನ್ನು ಜಿಲ್ಲಾಮಟ್ಟದಿಂದಲೇ ನಿರ್ವಹಿಸಲಾಗುತ್ತಿದೆ.
ಪ್ರತಿ ತಿಂಗಳು ಗರ್ಭಿಣಿಯರ ಮಾಹಿತಿಯನ್ನು ಪಡೆದು ಈ ಮಾಹಿತಿಯನ್ನು ಅನುಸಾರ ನೇರ ಕಣ್ಗಾವಲಿನಲ್ಲಿರುವಂತೆ ವ್ಯವಸ್ಥೆ ಮಾಡಲಾಗಿದೆ. ಸಮುದಾಯ ಮಟ್ಟದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ವಿಎಚ್‌ಎಸ್‌ಎನ್‌ಸಿ, ವಿಎಚ್‌ಎನ್‌ಡಿ ಮತ್ತು ಬಾಲ ವಿಕಾಸ ಸಮಿತಿಗಳ ಮೂಲಕ ಗರ್ಭಿಣಿಯರ ಕುರಿತು ಪ್ರಸವ ಪೂರ್ವ ಮತ್ತು ಪ್ರಸನ ನಂತರದ ಮಾಹಿತಿಗಳನ್ನು ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಕ್ಷೇತ್ರ ಮಟ್ಟದಿಂದ ಹೆಚ್ಚಿನ ಚಿಕಿತ್ಸೆಗೆ ರೆಫರ್ ಆಗುವ ಎಲ್ಲ ಪ್ರಕರಣಗಳ ಕುರಿತು (ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ) ನಿಗಾ ವಹಿಸಲಾಗುತ್ತಿದೆ.
ರಾಜ್ಯ ಮಟ್ಟದ ಮಾರ್ಗಸೂಚಿಗಳ ಅನುಸಾರ ಹಾಗೂ ನಿರ್ದೇಶನದಂತೆ ಮತ್ತು ಜಿಲ್ಲಾ ಆಡಳಿತದ ಮಾರ್ಗದರ್ಶನದಂತೆ ಕ್ಷೇತ್ರ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಸಹಾಯವಾಣಿ ಸಂವಾದದ ಬಗ್ಗೆ ಹಾಗೂ ಸಹಾಯವಾಣಿಯನ್ನು ಆಲಿಸುವ ಬಗೆ ಕ್ಷೇತ್ರ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹದಿಹರೆಯದ ಹೆಣ್ಣು ಮಕ್ಕಳ ಗರ್ಭವ್ಯವಸ್ಥೆಯ ಕುರಿತು ವಿಶೇಷ ಕಾಳಜಿ ಹಾಗೂ ಈ ಬಗ್ಗೆ ಸಮುದಾಯದಲ್ಲಿ ಜಾಗೃತಿ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪ್ರಕರಣಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.
ಗರ್ಭಾವಸ್ಥೆಯ ಕನಿಷ್ಠ ಮೂರು ವರ್ಷಗಳ ಅಂತರದ ಬಗ್ಗೆ ಸಮುದಾಯ ಮಟ್ಟದಲ್ಲಿ ಅರಿವು ಮೂಡಿಸಲಾಗುತ್ತಿದೆ. ಜಿಲ್ಲಾ ಆಡಳಿತವು ಗರ್ಭಿಣಿ- ತಾಯಂದಿರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರಗಳ ಸಮನ್ವಯತೆಯಿಂದ ಹಾಗೂ ವಿನೂತನ ಕಾರ್ಯ ವಿಧಾನಗಳ ಮೂಲಕ, ತಪ್ಪಿಸಬಹುದಾದ ತಾಯಂದಿರ ಮರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಮಹಿಳೆಯರಿಗೆ ಸುರಕ್ಷಿತ ತಾಯಿನದ ಆರೋಗ್ಯ ಸೇವೆಯನ್ನು ನೀಡುವಲ್ಲಿ ನಾವು ಬದ್ಧರಾಗಿದ್ದೇವೆ.
ಜಿ. ಲಕ್ಷ್ಮಿಕಾಂತ್ ರೆಡ್ಡಿ, ಜಿಲ್ಲಾಧಿಕಾರಿ
ತಾಯಿ ಮರಣ ಪ್ರಮಾಣ ಕಡಿಮೆ ಮಾಡಲು ಸಮುದಾಯ ಮಟ್ಟದಲ್ಲಿ ಇಲಾಖೆಗಳ ನಡುವೆ ಸಮನ್ವಯತೆ ಅಗತ್ಯವಿದೆ. ಪ್ರತಿ ಗರ್ಭಿಣಿ ಮಹಿಳೆಯರಿಗೆ ಸಕಾಲಿಕ ಮತ್ತು ನಿಗದಿತ ಸಮಯದಲ್ಲಿ ಸೂಕ್ತ ಆರೈಕೆ ನೀಡುವ ಬಗ್ಗೆ ಜಿಲ್ಲಾ ಪಂಚಾಯಿತಿಯು ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ.
ಎಸ್.ಯುಕೇಶ್ ಕುಮಾರ್, ಸಿಇಒ, ಜಿಲ್ಲಾ ಪಂಚಾಯಿತಿ
ಪ್ರತಿಯೊಂದು ತಾಯಂದಿರ ಮರಣವು ಗಂಭೀರ ವಿಷಯವಾಗಿದ್ದು, ಆರೋಗ್ಯ ಸೇವಾ ವಿತರಣೆಯಲ್ಲಿ ನ್ಯೂನತೆಗಳ ಅಂತರವನ್ನು ಗುರುತಿಸಲು ಜಿಲ್ಲಾಮಟ್ಟದಲ್ಲಿ ಅಂತರಿಕ ತಜ್ಞರ ಸಮಿತಿಯ ಸಮ್ಮುಖದಲ್ಲಿ ಪರಿಶೀಲಿಸಲಾಗುತ್ತದೆ. ತಾಯಿ ಮರಣವನ್ನು ಕಡಿಮೆ ಮಾಡವ ನಿಟ್ಟಿನಲ್ಲಿ ಜಿಲ್ಲೆಯು ಉತ್ತಮ ಗುಣಮಟ್ಟದ ಪ್ರಸೂತಿ ಆರೈಕೆಯನ್ನು 24 * 7 ಮಾದರಿಯಲ್ಲಿ ತುರ್ತುಸೇವೆಗಳು ಸೇರಿದಂತೆ ಮತ್ತು ಆರೋಗ್ಯ ಸಿಬ್ಬಂದಿಗಳ ಕೌಶಲ್ಯ ಸಾಮರ್ಥ್ಯ ವೃದ್ಧಿಗೆ ಆದ್ಯತೆ ನೀಡುತ್ತಿದೆ.
ಡಾ.ಪಿ.ಸಿ. ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ
ಮಹಿಳೆಯರ ಗರ್ಭಧಾರಣೆಯ ಆರಂಭಿಕ ಹಂತದ ನೋಂದಣಿ, ಪ್ರಸವ ಪೂರ್ವ ಆರೈಕೆ ಹಾಗೂ ಕ್ಲಿಷ್ಟಕರವಾದ ಗರ್ಭಿಣಿ ಪ್ರಕರಣ ಗಳನ್ನು ಸಮಯೋಚಿತವಾಗಿ ಗುರುತಿಸುವುದರೊಂದಿಗೆ ತ್ವರಿತ ಹಾಗೂ ಸೂಕ್ತ ಚಿಕಿತ್ಸೆ ನೀಡುವ ಮೂಲಕ ತಾಯಿಮರಣವನ್ನು ತಡೆಗಟ್ಟಲಾಗುತ್ತಿದೆ. ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಇರುವ ಯೋಜನೆಗಳು, ಸೌಲಭ್ಯ ಮತ್ತು ಸವಲತ್ತುಗಳ ಬಗ್ಗೆ, ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಡಾ.ಸಿರಾಜ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ