ಮೈಸೂರು ಜಿಲ್ಲೆಯಲ್ಲಿ ಗ್ಯಾಸ್ ಕೊರತೆ ಕಂಡು ಬಂದಿದೆ 
ಮೈಸೂರು

ಗ್ಯಾಸ್ ಕೊರತೆ : ಮೈಸೂರಿನಲ್ಲಿ ಹೋಟೆಲ್'ಗಳು ಬಂದ್ ಆಗುವ ಆತಂಕ

ಮೈಸೂರು: ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆ ಸ್ಥಗಿತದಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಹಾಗೂ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಲು ಪ್ರಾರಂಭವಾಗಿದೆ.
ಜಿಲ್ಲೆಯಲ್ಲಿ ಬುಧವಾರದಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಪೂರೈಕೆಯಾಗಿರುವ ಗ್ಯಾಸ್ ಸಿಲಿಂಡರ್‌ನಲ್ಲಿ ಹೋಟೆಲ್‌ಅನ್ನು ನಡೆಸಲಾಗುತ್ತಿದ್ದು, ಈ ಗ್ಯಾಸ್ ಸಿಲಿಂಡರ್‌ಗಳು 2 ದಿನಗಳ ಒಳಗೆ ಖಾಲಿಯಾಗಲಿ ದ್ದು, 2 ದಿನಗಳ ನಂತರ ಬಹುತೇಕ ಎಲ್ಲ ಹೋಟೆಲ್‌ಗಳು ಬಂದ್ ಆಗುವ ಸಾಧ್ಯತೆ ಹೆಚ್ಚು ಇದೆ.
ಗ್ಯಾಸ್ ಸಿಲಿಂಡರ್ ದೊರೆಯುವ ಯಾವುದೇ ಮುನ್ಸೂಚನೆ ಇಲ್ಲದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಈಗಾಗಲೇ ಆಹಾರ ತಯಾರಿಸುವ ಪ್ರಯಾಣ ಕಡಿಮೆ ಮಾಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ತರಕಾರಿ ಹಾಗೂ ಹಾಲಿನ ಬೇಡಿಕೆಯ ಪ್ರಮಾಣದಲ್ಲೂ ಇಳಿಕೆ ಕಾಣಲು ಪ್ರಾರಂಭವಾಗಿದೆ.
ಬಂದ್ ಮಾಡಲು ಚಿಂತನೆ: ಬಹುತೇಕ ಹೋಟೆಲ್‌ಗಳು ಅಡುಗೆಗೆ ಗ್ಯಾಸ್ ಸಿಲಿಂಡರ್‌ಅನ್ನು ಅವಲಂಬಿಸಿದ್ದಾರೆ. ಆದರೆ, ಪ್ರಸ್ತುತ ಗ್ಯಾಸ್ ಸಿಲಿಂಡರ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ಹೋಟೆಲ್‌ಗಳನ್ನು ಕೆಲವು ದಿನಗಳ ಮಟ್ಟಿಗೆ ಬಂದ್ ಮಾಡುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಹೋಟೆಲ್ ಮಾಲೀ ಕರು ಬಂದಿದ್ದಾರೆ.
ವಾಣಿಜ್ಯ ಬಳಕೆಯ 19 ಕೆ.ಜಿ. ಸಿಲಿಂಡರ್ ಬೆಲೆ 1938 ರೂ. ಇದ್ದು, ಖಾಸಗಿ ಗ್ಯಾಸ್ ಕಂಪನಿಗಳಲ್ಲಿ 17 ಕೆ.ಜಿ.ಯ ವಾಣಿಜ್ಯ ಬಳಕೆಯ ಸಿಲಿಂಡರ್ ದರ 1700 ರೂ. ಇದೆ. ಸರ್ಕಾರಿ ಸ್ವಾಮ್ಯದ ಗ್ಯಾಸ್ ಕಂಪನಿಗಳು ವಾಣಿಜ್ಯ ಬಳಕೆಯ ಗ್ಯಾಸ್ ಪೂರೈಕೆ ಸಂಪೂರ್ಣ ಸ್ಥಗಿತಗೊ ಳಿಸಿದೆ. ಹೀಗಾಗಿ ಹೋಟೆಲ್ ಮಾಲೀಕರು ಖಾಸಗಿ ಗ್ಯಾಸ್ ಬಳಕೆಯ ಕಡೆಗೆ ಮುಖ ಮಾಡುತ್ತಿದ್ದಾರೆ. ಆದರೆ, ಖಾಸಗಿ ಕಂಪನಿಗಳಲ್ಲೂ ಗ್ಯಾಸ್ ಸಿಲಿಂಡರ್‌ಗಳ ಕೊರತೆ ತೀವ್ರವಾಗಿ ಕಂಡು ಬಂದಿದ್ದು, ಕೆಲವರು ಪರಿಸ್ಥಿತಿಯ ಲಾಭ ಪಡೆಯಲು ಗ್ಯಾಸ್ ಸಿಲಿಂಡರ್‌ಅನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ರೈತರಿಗೆ ಸಂಕಷ್ಟ: ಜಿಲ್ಲೆಯ ರೈತರು ಬೆಳೆದ ತರಕಾರಿ ಮೈಸೂರು ಮಾತ್ರವಲ್ಲದೆ ಕೇರಳ, ಕೊಡಗು, ಮಂಗಳೂರಿಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತದೆ. ಆದರೆ, ಇದೀಗ ಎಲ್ಲ ಕಡೆಗಳಲ್ಲೂ ಸಿಲಿಂಡರ್ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತರಕಾರಿಯ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಜಿಲ್ಲೆಯಲ್ಲಿ ಪ್ರತಿನಿತ್ಯ 9.27 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಹೋಟೆಲ್‌ಗಳು ಬಂದ್ ಆದರೆ ಹಾಲಿನ ಬೇಡಿಕೆ ಸಹ ಕುಸಿತ ಕಾಣಲಿದೆ. ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕುಸಿದರೆ ಹಾಲನ್ನು ಪೌಡರ್‌ಆಗಿ ಪರಿವರ್ತಿಸಲು ಅವಕಾಶವಿದೆ. ಆದರೆ, ರೈತರು ಬೆಳೆದ ಬೆಳೆಗಳನ್ನು ಈ ರೀತಿ ಉಳಿಸಿಕೊಳ್ಳಲು ಪರ್ಯಾಯ ಮಾರ್ಗ ಇಲ್ಲ. ಹೀಗಾಗಿ ರೈತರು ಬೆಳೆದ ಬೆಳೆಗಳು ಹೊಲದಲ್ಲಿಯೇ ಕೊಳೆಯುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೋಟೆಲ್‌ಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆಯಾದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.
ಪಿಜಿಗಳಿಗೆ ಸಮಸ್ಯೆ: ಉದ್ಯೋಗ ಹಾಗೂ ಶಿಕ್ಷಣ ಪಡೆಯುವ ಉದ್ದೇಶದಿಂದ ನಗರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನರು, ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳು ಪಿಜಿಗಳಲ್ಲಿ ಉಳಿದುಕೊಂಡಿದ್ದಾರೆ. ಪಿಜಿಗಳಿಗೂ ಸಿಲಿಂಡರ್ ಕೊರತೆಯ ಸಮಸ್ಯೆ ಎದುರಾಗಿದ್ದು, ಪಿಜಿ ಸ್ಥಗಿತವಾದರೆ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಉದ್ಯೋಗಿಗಳು ಹೋಟೆಲ್‌ಅನ್ನು ಆಶ್ರಯಿಸಿದ್ದು, ಹೋಟೆಲ್‌ಗಳು ಬಂದ್ ಆದರೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಪ್ರವಾಸೋದ್ಯಮಕ್ಕೆ ಹೊಡೆತ: ದೇಶದಲ್ಲಿ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಿಲ್ಲೆಗಳ ಪೈಕಿ ಮೈಸೂರು ಸಹ ಒಂದು. ಆಗ್ರದ ತಾಜ್‌ಮಹಲ್ ನಂತರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಮೈಸೂರು ಅರಮನೆಯು ಆಕರ್ಷಿಸುತ್ತದೆ. ಆದರೆ, ಇದೀಗ ಗ್ಯಾಸ್ ಸಿಲಿಂಡರ್ ಅಭಾವದಿಂದ ಹೋಟೆಲ್‌ಗಳು ಬಂದ್ ಆಗುವ ಆತಂಕ ಇದ್ದು, ಇದು ಪ್ರವಾಸೋದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಹೊಡೆತ ನೀಡುವ ಸಾಧ್ಯತೆ ಇದೆ. ಕೋವಿಡ್ ಸಂದರ್ಭದಲ್ಲಿ ಪ್ರವಾಸಿ ತಾಣಗಳು ಬಂದ್ ಆದ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯವನ್ನು ನಿರ್ವಹಣೆ ಮಾಡಲು ಸಹ ಆರ್ಥಿಕ ಸಮಸ್ಯೆ ಎದುರಾಗಿತ್ತು. ಆ ಸಂದರ್ಭ ದಾನಿಗಳ ನೆರವು ಪಡೆದು ಮೃಗಾಲಯದ ಪ್ರಾಣಿಗಳಿಗೆ ಅಹಾರ ಪೂರೈಕೆ ಮಾಡಲಾಗಿತ್ತು. ಗ್ಯಾಸ್ ಕೊರತೆಯ ಸಮಸ್ಯೆ ದೀರ್ಘಾವಧಿಗೆ ಮುಂದುವರೆದರೆ ಪ್ರವಾಸೋದ್ಯಮ ಕ್ಷೇತ್ರ ದೊಡ್ಡ ಪ್ರಮಾಣದ ನಷ್ಟ ಅನುಭವಿಸುವುದು ನಿಶ್ಚಿತ.
ಮೈಸೂರು ಜಿಲ್ಲೆಯಲ್ಲಿ ಬುಧವಾರದಿಂದ ಹೋಟೆಲ್‌ಗಳಿಗೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಮಂಗಳವಾರದವರೆಗೆ ಪೂರೈಕೆಯಾಗಿರುವ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಇಟ್ಟುಕೊಂಡು 2 ದಿನಗಳವರೆಗೆ ಹೋಟೆಲ್‌ಅನ್ನು ನಡೆಸಬಹುದು. ಮಿತವ್ಯಯವಾಗಿ ಬಳಕೆ ಮಾಡಿದರೆ 4 ದಿನಗಳವರೆಗೆ ಹೋಟೆಲ್ ನಡೆಸಬಹುದು. ಆದರೆ, ನಂತರ ಹೋಟೆಲ್ ಬಂದ್ ಮಾಡುವುದು ಅನಿವಾರ್ಯ.
ನಾರಾಯಣ ಗೌಡ, ಅಧ್ಯಕ್ಷ, ಜಿಲ್ಲಾ ಹೋಟೆಲ್ ಮಾಲೀಕರ ಸಂಘ