- ಫೇಸ್ ಬುಕ್ ವಿಡಿಯೋ ತುಣುಕು ನೋಡಿ ಆ ಲಿಂಕ್‌ಕ್ಲಿಕ್ ಮಾಡಿದ್ದಾರೆ
- ತಿಂಗಳಿಗೆ 50 ರಿಂದ 55 ಸಾವಿರ ರೂ.ಲಾಭಗಳಿಸಬಹುದು ಎಂದು ವಿವಿಧ ಹೂಡಿಕೆ ಯೋಜನೆಗಳ ಬಗ್ಗೆ ಮಾಹಿತಿ ಕಂಡಿದೆ
ಸಾಮಾಜಿಕ ಜಾಲತಾಣದಲ್ಲಿ ಬಂದ ಮಾಹಿತಿ ನಂಬಿದ ನಗರದ ಇಬ್ಬರು ನಿವಾಸಿಗಳು ಅಪಾರ ಹಣ ಗಳಿಸಬಹುದು ಎಂಬ ಆಸೆಯಿಂದ ಸುಮಾರು 28 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ.
ಜೆ.ಪಿ.ನಗರದ ರಾಜೇಶ್ (72) ಎಂಬುವರು ಜೂನ್ 19ರಂದು ಫೇಸ್‌ಬುಕ್ ನೋಡುತ್ತಿದ್ದಾಗ ಅದರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೂಡಿಕೆ ಯೋಜನೆಯೊಂದನ್ನು ಪ್ರಚಾರ ಮಾಡುತ್ತಿರುವಂತೆ ಬಿಂಬಿಸಲಾದ ವಿಡಿಯೋ ತುಣುಕು ನೋಡಿ ಆ ಲಿಂಕ್‌ಕ್ಲಿಕ್ ಮಾಡಿದ್ದಾರೆ. ಅದರಲ್ಲಿ ತಿಂಗಳಿಗೆ 50 ರಿಂದ 55 ಸಾವಿರ ರೂ.ಲಾಭಗಳಿಸಬಹುದು ಎಂದು ವಿವಿಧ ಹೂಡಿಕೆ ಯೋಜನೆಗಳ ಬಗ್ಗೆ ಮಾಹಿತಿ ಕಂಡಿದೆ. ಇದನ್ನು ನಂಬಿದ ಅವರು, ಆ ಲಿಂಕ್‌ನಲ್ಲಿ ಸೂಚನೆಗಳನ್ನು ಅನುಸರಿಸಿ ಜೂ.19ರಿಂದ ಜು.2ರವರೆಗೆ ತಮ್ಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗಳಿಂದ 12,93,899 ರೂ. ಹಣವನ್ನು ವರ್ಗಾಯಿಸಿದ್ದಾರೆ.
ಆರಂಭದಲ್ಲಿ 65 ಸಾವಿರ ರೂ.ಹಣ ವಾಪಸ್ ಪಡೆದಿದ್ದಾರೆ. ಆದರೆ ನಂತರ ಯಾವುದೇ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ. ಲಾಭದ ಹಣ ಪಡೆಯಲು ಇನ್ನಷ್ಟು ಹಣವನ್ನು ನೀವು ಠೇವಣಿ ಮಾಡಬೇಕು ಎಂದು ವಂಚಕರು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ರಾಜೇಶ್ ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.
ಸಿದ್ದಾರ್ಥನಗರದ 50ವರ್ಷದ ಅರುಣ್ ಎಂಬುವರನ್ನು ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡುವಂತೆ ವಂಚಕರು ಫೇಸ್‌ಬುಕ್‌ನಲ್ಲಿ ನಂಬಿಸಿ 15,29,894 ರೂ. ದೋಚಿದ್ದಾರೆ. ಫೇಸ್
ಬುಕ್‌ನಲ್ಲಿ ಹೂಡಿಕೆಗೆ ಸಂಬಂಧಿಸಿದ ಮಾಹಿತಿ ನೋಡಿದ ಅರುಣ್ ಅದರಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವಂಚಕರು ಷೇರು ಮಾರುಕಟ್ಟೆ ಕುರಿತು ಮಾಹಿತಿ ನೀಡಿ, ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ಗಳಿಸಬಹುದು ಎಂದು ನಂಬಿಸಿದ್ದಾರೆ.
ಬಳಿಕ ವಂಚಕರು ಹೇಳಿದಂತೆ ಅರುಣ್ ಅವರ ವಾಟ್ಸ್‌ಆ್ಯಪ್‌ಗೆ ಬಂದ ಲಿಂಕ್ ಕ್ಲಿಕ್ ಮಾಡಿ ಮೊಬೈಲ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇದರ ಮೂಲಕ ಹಂತ ಹಂತವಾಗಿ ಒಟ್ಟು 15,29,894 ರೂ. ಹಣ ಹೂಡಿಕೆ ಮಾಡಿದ್ದಾರೆ. ಆದರೆ, ಬಳಿಕ ವಂಚಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಸಂಪರ್ಕಿಸಿ ಬಳಿಕ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.