- ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ
- ಕಂಬೈನ್ಡ್ ಹಾರ್ವೆಸ್ಟರ್ ಯಂತ್ರಗಳಿಗೆ ಬಾಡಿಗೆ ನಿಗದಿ
ಮೈಸೂರು: ಜಿಲ್ಲೆಯಲ್ಲಿ ಭತ್ತ ಹಾಗೂ ರಾಗಿ ಕಟಾವು ಯಂತ್ರದ ಬಾಡಿಗೆ ನಿಗದಿ ಪಡಿಸಲು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಜಿ.ಲಕ್ಷೀಕಾಂತ ರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಜಿಲ್ಲೆಯಲ್ಲಿ 2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 83,430 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಆವರಿಸಿದ್ದು, ಕಟಾವು ಕಾರ್ಯ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಭತ್ತ ಹಾಗೂ ರಾಗಿ ಕಟಾವಿಗೆ ರೈತರು ಕಂಬೈನ್ಡ್ ಹಾರ್ವೆಸ್ಟರ್ ಯಂತ್ರಗಳನ್ನು ಬಾಡಿಗೆಗೆ ಪಡೆದು ಒಕ್ಕಣೆ ಮಾಡುವುದು ವಾಡಿಕೆಯಾಗಿರುತ್ತದೆ. ಆದ್ದರಿಂದ ಕಂಬೈನ್ಡ್ ಹಾರ್ವೆಸ್ಟರ್ ಯಂತ್ರಗಳ ಬಾಡಿಗೆ ದರ ನಿಗದಿ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಭತ್ತ ಕಟಾವು ಯಂತ್ರದಿಂದ ಕಟಾವು ಮಾಡಲು ಪ್ರತಿ ಗಂಟೆಗೆ ಚೈನ್ ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ಗರಿಷ್ಠ 2500 ರೂ., ಟೈರ್ (ಗ್ರಿಪ್) ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ಗರಿಷ್ಟ ರೂ. 2000 ರೂ., ಟೈರ್ (ಸಾಮಾನ್ಯ) ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ಗರಿಷ್ಠ 1800 ರೂ. ಹಾಗೂ ರಾಗಿ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ಗರಿಷ್ಠ 2900 ರೂ. ದರ ನಿಗದಿ ಪಡಿಸಲಾಗಿದೆ ಎಂದರು.