ಮೈಸೂರು ಮಹಾನಗರ ಪಾಲಿಕೆ 
ಮೈಸೂರು

ಮೈಸೂರು: ಸ್ವಚ್ಛ ಸರ್ವೇಕ್ಷಣೆ ಸಿದ್ಧತೆ ಶುರು

ಸದೇಶ್ ಕಾರ್ಮಾಡ್

ಪ್ರಮುಖ ಮುಖ್ಯಾಂಶಗಳು

  • ಟೂಲ್‌ಕಿಟ್ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
  • ಒಟ್ಟು 12,500 ಅಂಕಗಳಿಗೆ ಸ್ಪರ್ಧೆ
ಸದೇಶ್ ಕಾರ್ಮಾಡ್ ಮೈಸೂರು
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 2025-26ನೇ ಸಾಲಿಗೆ ನಡೆಸಲಿರುವ ಸ್ವಚ್ಛ ಸರ್ವೇಕ್ಷಣೆಗೆ ಟೂಲ್‌ಕಿಟ್ ಬಿಡುಗಡೆಯಾಗಿದ್ದು, ಈ ಬಾರಿ ‘ಒಟ್ಟಾಗಿ ಕೈಜೋಡಿಸಿ ಶುಚಿಗೊಳಿಸಿ’ ಎಂಬ ಘೋಷವಾಕ್ಯದೊಂದಿಗೆ ಸರ್ವೇಕ್ಷಣೆ ನಡೆಯಲಿದೆ.
ಸಾಂಸ್ಕೃತಿಕ ನಗರಿ ಮೈಸೂರು ಕಳೆದ ಬಾರಿ ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ ಪಡೆದುಕೊಂಡಿದ್ದು, ಈ ಪ್ರಶಸ್ತಿ ಪಡೆದ ದೇಶದ ಕೆಲವೇ ಕೆಲವು ನಗರಗಳ ಪೈಕಿ ಮೈಸೂರು ಒಂದು ಎಂಬುದು ಹೆಗ್ಗಳಿಕೆ ವಿಚಾರ. ಈ ಬಾರಿಯೂ ಸ್ವಚ್ಛತೆಯಲ್ಲಿ ದೇಶದ ಗಮನ ಸೆಳೆಯಲು ನಗರ ಸಜ್ಜುಗೊಳ್ಳುತ್ತಿದೆ.
ಕಳೆದ ಬಾರಿ ರೆಡ್ಯೂಸ್ (ಕಡಿಮೆ ಮಾಡು), ರೀಯೂಸ್ (ಮರುಬಳಕೆ) ಮತ್ತು ರೀಸೈಕಲ್ (ಪುನರ್ಬಳಕೆ) ಥೀಮ್‌ನಡಿ ಸ್ವಚ್ಛ ಸರ್ವೇಕ್ಷಣೆ ನಡೆದಿತ್ತು. ಈ ಬಾರಿ ‘ಒಟ್ಟಾಗಿ ಕೈಜೋಡಿಸಿ ಶುಚಿಗೊಳಿಸಿ’ ಥೀಮ್ ಅಡಿಯಲ್ಲಿ ಸ್ವಚ್ಛ ಸರ್ವೇಕ್ಷಣೆ ನಡೆಯಲಿದೆ. ಈ ಬಾರಿ ಅಂಕಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲದೆ ಇದ್ದರೂ ಸ್ವಚ್ಛ ಸರ್ವೇಕ್ಷಣ ತಂಡ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ನಡೆಸುವ ಮೌಲ್ಯ ಮಾಪನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

12,500 ಅಂಕಗಳಿಗೆ ಸ್ಪರ್ಧೆ

ಕಳೆದ ಬಾರಿಯಂತೆ ಈ ಬಾರಿಯೂ 12,500 ಅಂಕಗಳಿಗೆ ಸ್ಪರ್ಧೆ ನಡೆಯಲಿದೆ. 1 ರಿಂದ 4 ಹಂತಗಳಿಗೆ ಒಟ್ಟು 10,500 ಅಂಕಗ ಳನ್ನು ಹಂಚಿಕೆ ಮಾಡಲಾಗಿದೆ. ಉಳಿದ 2,000 ಅಂಕಗಳ ಪೈಕಿ ಒಡಿಎಫ್, ಒಡಿಎಫ್ +, ಒಡಿಎಫ್++, ವಾಟರ್+ಗೆ 1,000 ಅಂಕಗಳು, ತ್ಯಾಜ್ಯ ಮುಕ್ತ ನಗರಕ್ಕೆ 1,000 ಅಂಕಗಳನ್ನು ಹಂಚಿಕೆ ಮಾಡಲಾಗಿದೆ.
1 ರಿಂದ 4ರವರೆಗಿನ ಹಂತಗಳಲ್ಲಿ ಬರುವ 10,500 ಅಂಕಗಳನ್ನು 10 ವಿಭಾಗಗಳಿಗೆ ಹಂಚಿಕೆ ಮಾಡಲಾಗಿದೆ. ವಿಜಿಬಲ್ ಕ್ಲೀನ್ಲಿನೆಸ್ (ಬಡಾವಣೆ, ವಾಣಿಜ್ಯ ಪ್ರದೇಶಗಳನ್ನು ದಿನನಿತ್ಯ ಶುಚಿಗೊಳಿಸುವುದು ಹಾಗೂ ಇತ್ಯಾದಿ)ಗೆ 1,500 ಅಂಕಗಳು, ತ್ಯಾಜ್ಯದ ವಿಂಗಡಣೆ, ಸಂಗ್ರಹಣೆ ಹಾಗೂ ಸಾಗಾಟಕ್ಕೆ 1,000, ಘನತ್ಯಾಜ್ಯ ನಿರ್ವಹಣೆಗೆ 1,500, ಆ್ಯಕ್ಸಸಸ್ ಟು ಸ್ಯಾನಿಟೇಷನ್ (ಶೌಚಗೃಹಗಳ ಉತ್ತಮ ನಿರ್ವಹಣೆ)ಗೆ 1,000, ಮಲಿನ ನೀರಿನ ನಿರ್ವಹಣೆಗೆ 1,000, ತ್ಯಾಜ್ಯ ವಿಲೇವಾರಿ ಸೇವೆಗಳ ಯಾಂತ್ರೀಕರಣಕ್ಕೆ 500, ಅಡ್ವೋಕೆಸಿ ಆಫ್ ಸ್ವಚ್ಛತಾ (ಸ್ವಚ್ಛತಾ ಆ್ಯಪ್ ಬಳಕೆ, ಸ್ವಚ್ಛತೆ ಕುರಿತು ಜನಜಾಗೃತಿ ಹಾಗೂ ಇತ್ಯಾದಿ)ಗೆ 1,500, ಇಕೋ ಸಿಸ್ಟಮ್ ಸ್ಟ್ರೆಂಥನಿಂಗ್ ಆ್ಯಂಡ್ ಇನ್‌ಸ್ಟಿಟ್ಯೂಷನಲ್ ಪ್ಯಾರಾಮೀಟರ್ಸ್ (ಅನೈರ್ಮಲ್ಯ ಸೃಷ್ಟಿಸುವವರಿಗೆ ದಂಡ ವಿಧಿಸುವುದು, ಸ್ವಚ್ಛ ವಾರ್ಡ್ ರ‌್ಯಾಂಕಿಂಗ್)ಗೆ 1,000, ನೈರ್ಮಲ್ಯ ಕಾರ್ಮಿಕರ ಕಲ್ಯಾಣಕ್ಕೆ 500, ಸಿಟಿಜನ್ ಫೀಡ್‌ಬ್ಯಾಕ್‌ಗೆ 1000 ಅಂಕಗಳನ್ನು ಹಂಚಿಕೆ ಮಾಡಲಾಗಿದೆ.

ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ

ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 2015, 2016ರಲ್ಲಿ ದೇಶದ ನಂ.1 ಸ್ವಚ್ಛ ನಗರಿಯಾಗಿ ಹೊರ ಹೊಮ್ಮಿತ್ತು. ಆ ನಂತರ 2017ರಲ್ಲಿ 5ನೇ ಸ್ಥಾನ, 2018ರಲ್ಲಿ 8, 2019ರಲ್ಲಿ 3, 2020ರಲ್ಲಿ 5, 2021ರಲ್ಲಿ 11, 2022ರಲ್ಲಿ 8, 2023ರಲ್ಲಿ 27ನೇ ಸ್ಥಾನ ಪಡೆದಿತ್ತು. 2024-25 ರಲ್ಲಿ ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ ಪಡೆದುಕೊಂಡಿತ್ತು. ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ ಪಡೆದ ನಗರಗಳನ್ನು ರ‌್ಯಾಂಕಿಂಗ್ ವ್ಯಾಪ್ತಿಗೆ ಒಳಪಡಿಸಲಿಲ್ಲ.
ಹಲವು ಪ್ರಶಸ್ತಿಗಳು
ಸ್ವಚ್ಛತಾ ರ‌್ಯಾಂಕಿಂಗ್ ಜತೆಗೆ ಇದುವರೆಗೆ ಹಲವು ಪ್ರಶಸ್ತಿಗಳನ್ನು ಮೈಸೂರು ನಗರ ರಾಷ್ಟ್ರಮಟ್ಟದಲ್ಲಿ ಪಡೆದುಕೊಂಡಿದೆ. 2018, 2020 ಮತ್ತು 2022ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶದ ನಂ.1 ಸ್ವಚ್ಛ ನಗರಿ ಪಟ್ಟವನ್ನು ಪಡೆಯಿತು. 2021ರಲ್ಲಿ ದೇಶದ ನಂ.1 ‘ಸ್ವಯಂ ಸುಸ್ಥಿರ ನಗರ’ (ಸೆಲ್ಫ್ ಸಸ್ಟೈನಬಲ್ ಸಿಟಿ) ಪ್ರಶಸ್ತಿ, ಸಫಾಯಿ ಮಿತ್ರ ಸುರಕ್ಷಾ ಪ್ರಶಸ್ತಿ, ಪೌರಕಾರ್ಮಿಕರ ಸಮವಸ್ತ್ರ ವಿನ್ಯಾಸ ಪ್ರಶಸ್ತಿ, 2019 ರಿಂದ 2024ವರೆಗೆ ನಿರಂತರವಾಗಿ ಫೈವ್‌ಸ್ಟಾರ್ ರ‌್ಯಾಂಕಿಂಗ್‌ನೊಂದಿಗೆ ತ್ಯಾಜ್ಯ ಮುಕ್ತ ನಗರ, ಬಯಲು ಶೌಚಮುಕ್ತ ನಗರ ಪ್ರಶಸ್ತಿ, 2024ರಲ್ಲಿ ವಾಟರ್ ಪ್ಲಸ್ ನಗರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡಿರುವ ಟೂಲ್‌ಕಿಟ್‌ಗೆ ಅನುಸಾರವಾಗಿ ನಗರದಲ್ಲಿ ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಗೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಕಳೆದ ಬಾರಿ ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ ಪಡೆದು ದೇಶದ ಗಮನ ಸೆಳೆದಿದ್ದೇವೆ. ಈ ಬಾರಿಯೂ ಸಹ ಸ್ವಚ್ಛತೆಯಲ್ಲಿ ದೇಶದ ಗಮನ ಸೆಳೆಯಲು ನಗರದ ಜನರು ಸ್ವಚ್ಛತೆಗೆ ಹೆಚ್ಚಿನ ಸಹಕಾರ ನೀಡಬೇಕು. ಅದೇ ರೀತಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು.
ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ನಗರ ಪಾಲಿಕೆ