ಮೈಸೂರು ಪೊಲೀಸರು ವಶಪಡಿಕೊಂಡು ಗಾಂಜಾ 
ಮೈಸೂರು

ಮೈಸೂರು ಪೊಲೀಸರಿಂದ ಗಾಂಜಾ ಸಾಗಿಸುತ್ತಿದ್ದ ನಾಲ್ವರ ಬಂಧನ

ಪ್ರಮುಖ ಮುಖ್ಯಾಂಶಗಳು

  • ತೆಂಗಿನ ಸಸಿಗಳ ಜತೆಗೆ ಸಾಗಾಟ
  • ನಗರದಲ್ಲಿ ಮಾದಕ ವಸ್ತುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ
ಮೈಸೂರು:ತೆಂಗಿನ ಸಸಿಗಳ ಜತೆಗೆ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ನಗರ ಅಪರಾಧ ಪತ್ತೆ ದಳ ಪೊಲೀಸರು ಬಂಧಿಸಿ, 1.40 ಕೋಟಿ ರೂ. ಮೌಲ್ಯದ 280 ಕೆ.ಜಿ.ಗಾಂಜಾ ವಶಪಡಿಸಿಕೊಂಡಿದ್ದಾರೆ.
ನಗರದ ಉದಯಗಿರಿ ಸೇರಿದಂತೆ ವಿವಿಧ ಬಡಾವಣೆಯ ಮಹಮ್ಮದ್ ಜುಬೇರ್, ಮುದಾಸಿರ್ ಅಹಮದ್, ಅಬುಬಕರ್ ಸಿದ್ದಿಕ್ ಮತ್ತು ಸೈಯದ್ ಮಜಾರ್ ಬಂಧಿತ ಆರೋಪಿಗಳು.
ಅಸ್ಸಾಂನಿಂದ ಕೇರಳಕ್ಕೆ ಈಚರ್ ಟ್ರಕ್‌ನಲ್ಲಿ ಗಾಂಜಾ ಸಾಗಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು, ಮಳವಳ್ಳಿ- ಮೈಸೂರು ಮುಖ್ಯರಸ್ತೆಯ ಗ್ರೀನ್ ಕೌಂಟಿ ಲೇಔಟ್‌ನಲ್ಲಿರುವ ಹಸಿರು ಗೂಡು ನರ್ಸರಿ ಗೇಟ್ ಮುಂಭಾಗ ರಸ್ತೆಯಲ್ಲಿ ದಾಳಿ ಮಾಡಿದ್ದಾರೆ.
ಈ ವೇಳೆ ತೆಂಗಿನ ಗಿಡಗಳ ಮಧ್ಯೆ ಗಾಂಜಾ ಸಾಗಣೆ ಮಾಡುತ್ತಿದ್ದದ್ದು ಕಂಡು ಬಂದಿದೆ. ಈಚರ್ ಟ್ರಕ್ ಹಿಂಬಾಲಿಸಿಕೊಂಡು ಬಂದಿದ್ದ ಕಾರನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದಲ್ಲಿ ಮಾದಕ ವಸ್ತುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳು ಮುಂದುವರಿದಿದ್ದು, ಈ ಮಧ್ಯೆಯೂ ಹೊರ ರಾಜ್ಯಗಳಿಂದ ಗಾಂಜಾ ಸರಬರಾಜಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಕಠಿಣ ತಪಾಸಣೆ ಕೈಗೊಳ್ಳಲಾಗುವುದು ಎಂದು ಪೊಲೀಸ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.
ಇದಲ್ಲದೆ ಕಳೆದ 3 ತಿಂಗಳಲ್ಲಿ ಒಟ್ಟು 12 ಎನ್.ಡಿ.ಪಿ.ಎಸ್ ಕಾಯ್ದೆ ಪ್ರಕರಣಗಳನ್ನು ದಾಖಲು ಮಾಡಿ 28 ಆರೋಪಿಗಳನ್ನು ಬಂಧಿಸಿ, 43 ಕೆ.ಜಿ. ಗಾಂಜಾ ಹಾಗೂ 164 ಗ್ರಾಂ ಸಿಂಥೆಟಿಕ್ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ 36 ಸೇವನೆ ಪ್ರಕರಣಗಳನ್ನು ಸಹ ದಾಖಲಿಸಲಾಗಿದೆ ಎಂದರು.
ಚಿನ್ನತಂಬಿ ವಿರುದ್ಧ 310 ದೂರು
ಚಿನ್ನಾಭರಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನತಂಬಿಯಿಂದ 310 ಪ್ರಕರಣ ದಾಖಲಾಗಿದೆ. ಈತನ ವಿರುದ್ಧ ಈವರೆಗೂ 38 ಕೆಜಿ ಚಿನ್ನ ಮೋಸ ಮಾಡಿರುವ ದೂರು ಕೇಳಿ ಬಂದಿದೆ. ಕನಿಷ್ಠ 10 ವರ್ಷಗಳ ಶಿಕ್ಷೆಯಾಗುವಂತಹ ಪ್ರಕರಣ ದಾಖಲು ಮಾಡಲಾಗಿದೆ.
ಸೀಮಾಲಾಟ್ಕರ್, ಪೊಲೀಸ್ ಕಮಿಷನರ್