ಬೃಹತ್ ಮೈಸೂರು ಮಹಾನಗರ ಪಾಲಿಕೆ ವಿಸ್ತರಣೆಯನ್ನು ವೈಜ್ಞಾನಿಕವಾಗಿ ಮಾಡುವಂತೆ ಕೋರಿ ಮೈಸೂರಿನ ಪ್ರಜ್ಞಾವಂತ ನಾಗರಿಕರು ಮತ್ತು ನಾಗರಿಕ ಸಮಾಜದ ಸಂಘಟನೆಗಳ ಒಕ್ಕೂಟದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಡಾ.ಸುಶ್ರುತಗೌಡ, ಕೆ.ಡಿ.ಶೈಲಾ ಇತರರಿದ್ದರು. 
ಮೈಸೂರು

ಮೈಸೂರು ಬೃಹತ್ ನಗರಪಾಲಿಕೆ ವಿಸ್ತರಣೆ ವೈಜ್ಞಾನಿಕವಾಗಿರಲಿ: ಸರ್ಕಾರಕ್ಕೆ ಒತ್ತಾಯ

ಮೈಸೂರು:ಬೃಹತ್ ಮೈಸೂರು ಮಹಾನಗರ ಪಾಲಿಕೆ ವಿಸ್ತರಣೆಯನ್ನು ವೈಜ್ಞಾನಿಕವಾಗಿ ಮಾಡುವಂತೆ ಕೋರಿ ಮೈಸೂರಿನ ಪ್ರಜ್ಞಾವಂತ ನಾಗರಿಕರು ಮತ್ತು ನಾಗರಿಕ ಸಮಾಜದ ಸಂಘಟನೆಗಳ ಒಕ್ಕೂಟದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರಸ್ತುತ ಹೊರಡಿಸಲಾಗಿರುವ ಅಧಿಸೂಚನೆಯನ್ನು ತಕ್ಷಣ ಹಿಂಪಡೆದು, ವೈಜ್ಞಾನಿಕ ಹಾಗೂ ಜನ ಸಹಭಾಗಿತ್ವದ ಮೂಲಕ ಬೃಹತ್ ಮೈಸೂರು ಮಹಾನಗರಪಾಲಿಕೆ ರಚಿಸುವಂತೆ ಭವಿಷ್ಯದರ್ಶಿ ಮಹಾ ಮೈಸೂರು ಸಂಘಟನೆಯ ಪ್ರವರ್ತಕರಾದ ಬಿಜೆಪಿ ಮುಖಂಡ ಡಾ.ಸುಶ್ರುತಗೌಡ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಇಲಾಖೆಯ ಪೌರಾಡಳಿತ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಕೆ.ಡಿ.ಶೈಲಾ ಅವರಿಗೆ ಆಕ್ಷೇಪಣೆ ಸಲ್ಲಿಸಲಾಯಿತು.
ನಮ್ಮ ಮೈಸೂರು ಫೌಂಡೇಷನ್, ಕ್ರಿಸ್ಟಲ್ ಗ್ರೀನ್ ಬಡ್ಸ್, ಕ್ರೆಡಿಟ್-ಐ ಸಂಸ್ಥೆ, ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಮಿತಿ, ಕನ್ನಡ ರಕ್ಷಣಾ ವೇದಿಕೆ, ಮೈಸೂರು ಗ್ರಾಹಕರ ಪರಿಷತ್ತು, ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್‌ಮೆಂಟ್ ಟ್ರಸ್ಟ್, ಯೂತ್ ಫಾರ್ ನೇಷನ್, ಹಲವಾರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಇದ್ದರು.
ಡಾ.ಸುಶ್ರುತಗೌಡ ಮಾತನಾಡಿ, ನಾವು ಅಭಿವೃದ್ಧಿಗೆ ವಿರುದ್ಧವಾಗಿಲ್ಲ. ನಗರಗಳು ಬೆಳೆಯಬೇಕು ಮತ್ತು ಮೂಲಸೌಕರ್ಯಗಳು ಸುಧಾರಿಸಬೇಕು. ಆದರೆ ಸರಿಯಾದ ಪೂರ್ವ ತಯಾರಿ-ಯೋಜನೆ, ವೈಜ್ಞಾನಿಕ ದತ್ತಾಂಶ ಮತ್ತು ಪ್ರಜಾಸತ್ತಾತ್ಮಕ ಮಾದರಿಯ ಸಮಾಲೋಚನೆ ಇಲ್ಲದ, ಏಕಪಕ್ಷೀಯ ಅವೈಜ್ಞಾನಿಕ ಅಭಿವೃದ್ಧಿಯು ಪ್ರಗತಿಯಲ್ಲ. ಇದು ಭವಿಷ್ಯದಲ್ಲಿ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನು ಉಂಟು ಮಾಡಬಹುದು ಎಂದು ಕಾಳಜಿ ವ್ಯಕ್ತಪಡಿಸಿದರು.
ಪ್ರಸ್ತುತ ಹೊರಡಿಸಲಾಗಿರುವ ಪ್ರಸ್ತಾವನೆಯಲ್ಲಿ ಪಾರದರ್ಶಕತೆ ಮತ್ತು ಸಮರ್ಪಕ ಸಿದ್ಧತೆಯ ಕೊರತೆಯಿದೆ. ಈ ವಿಸ್ತರಣೆಯನ್ನು ಹಂತ ಹಂತವಾಗಿ ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಯೋಜಿಸಬೇಕು. ದುರದೃಷ್ಟವಶಾತ್, ಪ್ರಸ್ತುತ ಬೃಹತ್ ಮೈಸೂರು ಪ್ರಸ್ತಾವನೆಯು ಈ ಮೂಲತತ್ವಕ್ಕೆ ವಿರುದ್ಧವಾಗಿದೆ ಎಂದು ಟೀಕಿಸಿದರು.
ನಮ್ಮ ಮೈಸೂರು ಫೌಂಡೇಷನ್‌ನ ದಶರಥ್, ರಾಜರ ದೂರದೃಷ್ಟಿತ್ವದಂತೆ ಮೈಸೂರನ್ನು ವೈಜ್ಞಾನಿಕವಾಗಿ ಬೆಳೆದರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. ಆದ್ದರಿಂದ ಅವೈಜ್ಞಾನಿಕವಾಗಿ ಆದೇಶ ಹಿಂಪಡೆದು ವೈಜ್ಞಾನಿಕವಾಗಿ ಸರ್ವೇ ನಡೆಸಿ ಬಳಿಕ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಮೈಸೂರು ಗ್ರಾಹಕರ ಪರಿಷತ್ತಿನ ಸ್ಥಾಪಕ ಅಧ್ಯಕ್ಷ ಡಾ.ಭಾಮಿ ವಿ.ಶೆಣೈ ಮಾತನಾಡಿ, ಯೋಜನೆಯ ಪರಿಸರ ಪರಿಣಾಮಗಳ ಮೌಲ್ಯಮಾಪನ ನಡೆದಿಲ್ಲ. ಯಾವುದೇ ಪರಿಸರ ಪ್ರಭಾವದ ಮೌಲ್ಯಮಾಪನ ವರದಿ ಸಾರ್ವಜನಿಕವಾಗಿ ಲಭ್ಯವಿಲ್ಲ. ಅಗತ್ಯ ಮುನ್ನೆಚ್ಚರಿಕೆಗಳಿಲ್ಲದೆ ಈ ಯೋಜನೆಯನ್ನು ಜಾರಿಗೆ ತಂದರೆ ಕೆರೆಗಳು, ಜೌಗು ಪ್ರದೇಶಗಳು, ಹಸಿರು ವಲಯಗಳು ಮತ್ತು ವನ್ಯಜೀವಿ ಕಾರಿಡಾರ್‌ಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದರು.
ಗ್ರಾಮಸಭೆ ಮತ್ತು ವಾರ್ಡ್ ಸಮಿತಿಗಳ ಕಡೆಗಣನೆ, ಮಾಸ್ಟರ್ ಪ್ಲಾೃನ್ ಅಲಭ್ಯತೆ, ಸದ್ಯ ಮೈಸೂರು ನಗರ ಎದುರಿಸುತ್ತಿರುವ ನೀರಿನ ಅಭಾವ, ಒಳಚರಂಡಿ ಅವ್ಯವಸ್ಥೆ, ಪ್ರವಾಹ, ಸಂಚಾರ ದಟ್ಟಣೆ ಮತ್ತು ಘನತ್ಯಾಜ್ಯ ವಿಲೇವಾರಿಯಂತಹ ಸಮಸ್ಯೆಗಳನ್ನು ಬಗೆಹರಿಸದೆ ನಗರ ವಿಸ್ತರಣೆ ಮಾಡುತ್ತಿರುವುದು. ರೈತರು ಮತ್ತು ಗ್ರಾಮೀಣ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಸಾಧ್ಯತೆ, ಹೆಚ್ಚಿನ ತೆರಿಗೆ ಮತ್ತು ಸೌಲಭ್ಯಗಳ ಮೇಲಣ ಶುಲ್ಕದಿಂದ ಜೀವನ ವೆಚ್ಚ ಏರಿಕೆ, ನೀರಿನ ಭದ್ರತೆ ಮತ್ತು ಸುಸ್ಥಿರತೆಯ ಬಗ್ಗೆ ಸ್ಪಷ್ಟತೆ ಕೊರತೆ, ಚಾಮುಂಡಿ ಬೆಟ್ಟ ಮತ್ತು ಪರಿಸರ ಸೂಕ್ಷ್ಮ ವಲಯಗಳಿಗೆ ಅಪಾಯ ಸಾಧ್ಯತೆ, ವಿಪತ್ತು ನಿರ್ವಹಣೆ ಮತ್ತು ಸಾರ್ವಜನಿಕ ಆರೋಗ್ಯ ಸಿದ್ಧತೆಯ ಕೊರತೆ, ಪಾರದರ್ಶಕತೆ ಇಲ್ಲದೆ ಸಾರ್ವಜನಿಕ ಖಜಾನೆಯ ಮೇಲೆ ಬೀಳುವ ಆರ್ಥಿಕ ಹೊರೆ, ಈ ವಿಸ್ತರಣೆಯು ಭೂ-ಮಾಫಿಯಾದ ಹಿತಾಸಕ್ತಿಯಿಂದ ಪ್ರೇರಿತವಾಗಿದೆ ಎಂಬ ಅಂಶ ಕುರಿತು ಸರ್ಕಾರದ ಗಮನ ಸೆಳೆಯಲಾಯಿತು.