ಮೈಸೂರಿನ ತಾಪಮಾನ 
ಮೈಸೂರು

ಕಾದ ಕಾವಲಿಯಾಗುತ್ತಿದೆ ಮೈಸೂರು

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ನಂಜನಗೂಡು, ತಿ.ನರಸೀಪುರ 39, ನಗರ ಕೇಂದ್ರದಲ್ಲಿ 38 ಡಿಗ್ರಿ ಸೆಲ್ಸಿಯಸ್
  • ಮುಂದಿನ ದಿನಗಳಲ್ಲಿ ಧಗೆ ಇನ್ನಷ್ಟು ಹೆಚ್ಚಾಗುವ ಮುನ್ಸೂಚನೆ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಆಹ್ಲಾದಕರ ವಾತಾವರಣಕ್ಕೆ ಹೆಸರಾಗಿರುವ ಮೈಸೂರು ಜಿಲ್ಲೆ ಇದೀಗ ಕಾದ ಕಾವಲಿಯಂತಾಗಿದೆ. ನೆತ್ತಿ ಸುಡುವ ಬಿಸಿಲಿನ ಝಳ, ದೇಹವನ್ನೇ ಆಯಾಸ ಮಾಡಿರುವ ಸೆಕೆಗೆ ಜನರು ಬಸವಳಿದು ಹೋಗಿದ್ದಾರೆ.
ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಉಷ್ಣಾಂಶ ನಿರೀಕ್ಷೆ ಮೀರಿ ಹೆಚ್ಚಾಗಿದ್ದು ಜನರು ತತ್ತರಿಸುತ್ತಿದ್ದಾರೆ. ಹೈರಾಣರಾಗಿರುವ ಜನರಿಗೆ ತಂಪೆರೆಯಲು ಮಳೆ ಸಹ ಆಗುತ್ತಿಲ್ಲ.
ದಿನದಿಂದ ದಿನಕ್ಕೆ ಕಾವು ಹೆಚ್ಚಾಗುತ್ತಿದ್ದು ಬರೋಬ್ಬರಿ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ತಾಪಮಾನದಲ್ಲಿ ನಂಜನಗೂಡು ಮತ್ತು ತಿ.ನರಸೀಪುರ ತಾಲೂಕುಗಳು ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿವೆ. ಎರಡು ತಾಲೂಕಿನಲ್ಲಿ 39 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ತಾಪಮಾನ ದಾಖಲಾಗಿದೆ. 
2ನೇ ಸ್ಥಾನದಲ್ಲಿರುವ ಜಿಲ್ಲಾ ಕೇಂದ್ರ ಮೈಸೂರು, ಕಾಡಂಚಿನ ಪ್ರದೇಶವಾಗಿರುವ ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಸಾಲಿಗ್ರಾಮ, ಸರಗೂರು ತಾಲೂಕಿನಲ್ಲಿ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದೆ. ಹುಣಸೂರು ತಾಲೂಕಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇದೆ. 
ಸದ್ಯಕ್ಕೆ ಜಿಲ್ಲೆಯಲ್ಲಿ ಕಡಿಮೆ ತಾಪಮಾನ ಕೆ.ಆರ್.ನಗರದಲ್ಲಿದ್ದು 36 ಡಿಗ್ರಿ ಸೆಲ್ಸಿಯಸ್ ಇದೆ. ಕನಿಷ್ಠ ತಾಪಮಾನ ತಿ.ನರಸೀಪುರ ತಾಲೂಕಿನಲ್ಲಿ 25.5 ಡಿಗ್ರಿ ಸೆಲ್ಸಿಯಸ್ ಇದ್ದರೆ, ಉಳಿದ ತಾಲೂಕಿನಲ್ಲಿ 23-24 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಲ್ಲಿ ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಶಾಖದ ಪ್ರಮಾಣ ಕಳೆದ ಎರಡ್ಮೂರು ದಿನಗಳಲ್ಲೇ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಧಗೆ ಇನ್ನಷ್ಟು ಹೆಚ್ಚಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ತಿಳಿಸಿದೆ.
ಕೆಂಡದಂಥ ಬೇಗೆಗೆ ಜನರು ಸುಸ್ತಾಗಿದ್ದು, ಬೆಳಗ್ಗೆ 11ರಿಂದ ಮಧ್ಯಾಹ್ನ 4ರ ವರೆಗೆ ಜನ ಸಂಚಾರದ ಪ್ರಮಾಣ ತಗ್ಗಿದೆ. ಇತ್ತೀಚಿನ ದಶಕದಲ್ಲೇ ಬಿಸಿಲಿನ ಪ್ರಮಾಣ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೂ, ಮೈಸೂರಿಗೂ ವ್ಯತ್ಯಾಸವೇ ಇಲ್ಲದಂತಾಗಿದೆ. 
ಬೆಳಗ್ಗೆ 7-8 ಗಂಟೆ ಹೊತ್ತಿಗೆ ಬಿಸಿಲಿನ ತಾಪದ ಅನುಭವವಾಗುತ್ತಿದೆ. ಈವರೆಗೆ ಸಾಮಾನ್ಯ 9ರವರೆಗೆ ವಾಯು ವಿವಾಹರ ಮಾಡುತ್ತಿದ್ದ ಜನರು, ಸೆಕೆೆಯಿಂದಾಗಿ ಬೇಗನೆ ಮನೆ ಸೇರಿಕೊಳ್ಳುತ್ತಿದ್ದಾರೆ. ಬಿಸಿಲಿನಲ್ಲಿ ವಾಕಿಂಗ್ ಮಾಡುತ್ತಿದ್ದರೆ ಚರ್ಮ ಸುಡುತ್ತಿದೆ. 10 ಗಂಟೆ ಹೊತ್ತಿಗೆ ಬಿಸಿಲು ಮೈಸುಡುವಂತಿರುತ್ತದೆ. ಬೆಳಗ್ಗೆ 11ಗಂಟೆಯಿಂದ ಸಂಜೆ 5ರವರೆಗೂ ಉರಿಬಿಸಿಲು ಜನರನ್ನು ಹೈರಾಣ ಮಾಡುತ್ತಿದೆ.
ಬಿಸಿಲ ಬೇಗೆಯಿಂದಾಗಿ ಕೆಲ ರೋಗಗಳು ಜನರನ್ನು ಕಾಡಲು ಶುರು ಮಾಡಿವೆ. ಈ ಋತುಮಾನದ ಕಾಯಿಲೆಗಳಾದ ಕಾಲರಾ, ವಿಷಮಶೀತ ಜ್ವರ, ಕಣ್ಣಿನ ತೊಂದರೆ, ವೈರಲ್ ಸೋಂಕು, ನಿರ್ಜಲೀಕರಣ, ಹೊಟ್ಟೆ ನೋವು, ಡೆಂೆ, ಚಿಕನ್ ಫಾಕ್ಸ್, ಬಿಸಿನಿಲಿಂದ ತಲೆ ಸುತ್ತು, ಮೂಗಿನಲ್ಲಿ ರಕ್ತ ಸುರಿಯುವುದು, ಅತಿಯಾದ ಸೂರ್ಯಕಿರಣಗಳಿಂದ ಚರ್ಮ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ತೀಕ್ಷ್ಣವಾದ ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆ ವಹಿಸಿದರೂ ಕೆಲವೊಮ್ಮೆ ಅಪಾಯ ಸಂಭವಿಸಬಹುದು. ಸನ್‌ಬರ್ನ್, ಸನ್‌ಟ್ಯಾನ್, ಸೋಲಾರ್ ಅರ್ಟಿಕೇರಿಯಾ, ಅಲರ್ಜಿ, ಚರ್ಮದ ಮೇಲೆ ನೆರಿಗೆಗಳು, ತುಟಿಗಳ ಒಣಗುವಿಕೆ, ಮುಖದ ಮೇಲೆ ಸಣ್ಣ ಮಚ್ಚೆಗಳಾಗುವುದು, ಚರ್ಮದ ಕ್ಯಾನ್ಸರ್ ಬರಬಹುದು ಎನ್ನುತ್ತಾರೆ ತಜ್ಞ ವೈದ್ಯರು. 
ಈ ಎಲ್ಲ ತೊಂದರೆಗಳು ಕಾಡುವುದು ಬೇಸಿಗೆಯಲ್ಲಿಯೇ. ಆದ್ದರಿಂದ ಇವುಗಳ ತಡೆಗಟ್ಟುವಿಕೆ ಮತ್ತು ನಿವಾರಣೆ ಮುಖ್ಯವಾಗಿದೆ. ಬಿಸಿಲಿನಲ್ಲಿ ಓಡಾಡುವ ಸಂದರ್ಭಗಳಲ್ಲಿ ಮುಖಕ್ಕೆ ಸೂರ್ಯನ ಕಿರಣಗಳು ಬೀಳದಂತೆ ರಕ್ಷಣೆಯಾಗಿ ಟೋಪಿ ಧರಿಸುವುದು ಅಥವಾ ಛತ್ರಿ ಬಳಸುವುದು ಸೂಕ್ತ. ಸೂರ್ಯನ ಕಿರಣಗಳು ಕಣ್ಣಿಗೆ ತಾಗದಂತೆ ಕಪ್ಪು ಕನ್ನಡಕ ಧರಿಸಬಹುದು
. ದೇಹದ ತೇವಾಂಶ ಸಮ ಪ್ರಮಾಣದಲ್ಲಿ ಇರಲು ಹೆಚ್ಚಾಗಿ ನೀರನ್ನು ಸೇವಿಸಬೇಕು ಎನ್ನುತ್ತಾರೆ ವೈದ್ಯರು.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸೂರ್ಯನ ಕಾವು ಹೆಚ್ಚಾಗಿದ್ದು, ಇನ್ನೂ ಕೆಲವು ದಿನಗಳ ಕಾಲ ಇದೇ ಉಷ್ಣಾಂಶ ಮುಂದುವರಿಯಲಿದೆ ಎಂದು ಹೇಳಿರುವ ಹವಾಮಾನ ತಜ್ಞರು, ವಾಹನಗಳ ಸಂಖ್ಯೆ ಹೆಚ್ಚಳ, ಕಟ್ಟಡಗಳ ನಿರ್ಮಾಣ, ವಾಯು ಮಾಲಿನ್ಯದಿಂದಾಗಿ ಈ ಬಾರಿ ಬಿಸಿಲು ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಿದ್ದಾರೆ.

ಕೃಷಿ ಬೆಳೆಗಳಿಗೆ ಮುನ್ನೆಚ್ಚರಿಕೆ

ಕೃಷಿ ಬೆಳೆಗಳಿಗೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಬಿಸಿ ಮತ್ತು ಹೆಚ್ಚಾಗಿ ಶುಷ್ಕ ಹವಾಮಾನದಲ್ಲಿ ಬೆಳೆಗಳಿಗೆ ನೀರುಣಿಸಿ, ಹಸಿಗೊಬ್ಬರ ಹಾಕಬೇಕು. ಮಧ್ಯಾಹ್ನ ಸಿಂಪಡಣೆ ಮಾಡುವುದನ್ನು ತಪ್ಪಿಸಬೇಕು. ರಸ ಹೀರುವ ಕೀಟ ಮೇಲ್ವಿಚಾರಣೆ ಮಾಡಿ, ಜಾನುವಾರುಗಳಿಗೆ ನೆರಳು ಮತ್ತು ನೀರನ್ನು ಖಚಿತ ಪಡಿಸಿಕೊಳ್ಳಬೇಕಿದೆ.
ತೇವಾಂಶದ ಒತ್ತಡವನ್ನು ತಡೆಗಟ್ಟಲು ಬೆಳೆಗಳಿಗೆ ಜೀವರಕ್ಷಕ ನೀರಾವರಿ ಒದಗಿಸಬೇಕಿದೆ. ಮಣ್ಣಿನ ತೇವಾಂಶ ಸಂರಕ್ಷಿಸಲು ಮತ್ತು ಮಣ್ಣಿನ ತಾಪಮಾನ ಕಡಿಮೆ ಮಾಡಲು ಹಸಿಗೊಬ್ಬರ ಹಾಕುವಿಕೆ ಅಭ್ಯಾಸ ಮಾಡಬೇಕಿದೆ.
 ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ಮಾತ್ರ ಸಿಂಪರಣೆ ಮತ್ತು ರಸಗೊಬ್ಬರ ಹಾಕುವಿಕೆ ಕೈಗೊಳ್ಳಬೇಕು. ಬೇವು ಆಧಾರಿತ ಉತ್ಪನ್ನಗಳು ಅಥವಾ ಬಲೆ ಬಳಸಿ ರಸ ಹೀರುವ ಕೀಟ (ಗಿಡಹೇನುಗಳು, ಥ್ರೈಪ್ಸ್, ಬಿಳಿ ನೋಣಗಳು) ಮೇಲ್ವಿಚಾರಣೆ ಮಾಡಿ ಮತ್ತು ನಿರ್ವಹಿಸಬೇಕಿದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಎನ್.ಡಾ.ಉಮಾಶಂಕರ್ ಕುಮಾರ್ ಸಲಹೆ ನೀಡಿದ್ದಾರೆ.
ಯಾವುದೇ ಹಠಾತ್ ಸಣ್ಣ ಮಳೆ ನಿಭಾಯಿಸಲು ಹೊಲಗಳಲ್ಲಿ ಉತ್ತಮ ಒಳಚರಂಡಿ ವ್ಯವಸ್ಥೆ ಮಾಡಿಕೊಳ್ಳಬೇಕು. ತೋಟಗಾರಿಕೆ ಬೆಳೆಗಳಿಗೆ, ಎಳೆಯ ಸಸ್ಯಗಳಿಗೆ ಜಲಾನಯನ ನೀರಾವರಿ ಮತ್ತು ನೆರಳು ನೀಡಬೇಕು. ಜಾನುವಾರು, ಕೋಳಿಗಳಿಗೆ ತಂಪಾದ ಕುಡಿಯುವ ನೀರು, ನೆರಳು, ವಾತಾಯನ ಒದಗಿಸಬೇಕು ಎಂದು ತಿಳಿಸಿದ್ದಾರೆ.
ರೈತರು ದಾಮಿನಿ ಎಂಬ ತಂತ್ರಾಂಶವನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಿಂದ ಮಿಂಚಿನ ಮನ್ಸೂಚನೆಯನ್ನು ನಿಖರವಾಗಿ ತಿಳಿಯಬಹುದು. ಹಾಗೆಯೇ ಮೌಸಮ್ ಮತ್ತು ಮೇಘದೂತ್ ತಂತ್ರಾಂಶಗಳಿಂದ ಮಳೆಯ ಮುನ್ಸೂಚನೆ, ಕೃಷಿ ಸಲಹೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಮಳೆ ಬರುವ ಮುನ್ಸೂಚನೆ 

ತುಂತುರು ಮಳೆ ಬರಬಹುದು. ಬೆಳಗ್ಗೆ ಗಾಳಿಯ ತೇವಾಂಶ ಶೇ.67-69 ವರೆಗೆ ಮತ್ತು ಮಧ್ಯಾಹ್ನದ ತೇವಾಂಶ ಶೇ.31-35 ವರೆಗೆ ಮತ್ತು ಗಾಳಿಯು ಗಂಟೆಗೆ 4-6 ಕಿ.ಮೀ.ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
"

ಸೂರ್ಯನ ಕಾವಿನಿಂದ ಉಂಟಾಗುವ ಅನಾರೋಗ್ಯಕ್ಕೆ ತುತ್ತಾಗುವ ಜನರಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು 30 ಹಾಸಿಗೆಯನ್ನು ಸಿದ್ಧಪಡಿಸಿ, ಅಗತ್ಯ ಔಷಧ, ವೈದ್ಯರು, ನರ್ಸ್‌ಗಳನ್ನು ನಿಯೋಜಿಸಲಾಗಿದೆ. ನಿರ್ಜಲೀಕರಣದ ನಿವಾರಣೆಗಾಗಿ ದಿನಕ್ಕೆ 6-7 ಲೀಟರ್ ನೀರು ಕುಡಿಯಬೇಕು. ಸಕ್ಕರೆ ಅಂಶ ರಹಿತ ಹಣ್ಣಿನ ರಸ, ಎಳನೀರು ಕುಡಿಯಬೇಕು. ಸುಸ್ತಾದ ತಕ್ಷಣವೇ ನೀರು ಕುಡಿದು ನಿರ್ಜಲೀಕರಣ ತಪ್ಪಿಸಿಕೊಳ್ಳಬೇಕು. ಉಪ್ಪು, ಸಕ್ಕರೆ, ಮಸಾಲೆ ಆಹಾರವನ್ನು ತಗ್ಗಿಸಬೇಕು. ಇದರಿಂದ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು.

ಸುರಕ್ಷತಾ ಕ್ರಮಗಳು

*ಮಧ್ಯಾಹ್ನ 11ರಿಂದ ಮಧ್ಯಾಹ್ನ 4ರವರೆಗೆ ಹೊರಗೆ ಹೋಗುವುದನ್ನು ಕಡಿಮೆ ಮಾಡಬಹುದು. ಹೊರಗೆ ಹೋಗುವಾಗ ಛತ್ರಿ, ಮಹಿಳೆಯರು, ಮಕ್ಕಳು ತಲೆಗೆ ತಿಳಿ ಬಣ್ಣದ ಬಟ್ಟೆ ಹಾಕಿಕೊಳ್ಳಬೇಕು. ನೈಲಾನ್, ಸಿಂಥೆಟಿಕ್ ಬದಲಿಗೆ ಹತ್ತಿ ಬಟ್ಟೆ ಧರಿಸಿದರೆ ಕ್ಷೇಮ.
*ಕಲ್ಲಂಗಡಿ, ಕಿತ್ತಳೆ, ನಿಂಬೆ ರಸ, ಕರಬೂಜ, ಕ್ಯಾರೆಟ್, ಸೌತೆಕಾಯಿ, ಬೆಂಡೆಕಾಯಿ, ಎಳನೀರು ಮುಂತಾದ ನೀರಿನಂಶ ವಸ್ತುಗಳನ್ನು ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಬೇಕು. ಆಹಾರದಲ್ಲಿ ತೇವಾಂಶ ಅಧಿಕವಿರುವ ಹಣ್ಣು, ತರಕಾರಿ, ಸೊಪ್ಪುಗಳ ಜತೆಯಲ್ಲಿ ಮೊಳಕೆ ಕಾಳುಗಳನ್ನು ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ.
*ಬೇಸಿಗೆಯಲ್ಲಿ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವ ಧೂಮಪಾನ ಮತ್ತು ಮದ್ಯಪಾನ ನಿಲ್ಲಿಸಿದರೆ ಕ್ಷೇಮ.

ಜಿಲ್ಲೆಯ ತಾಪಮಾನ

ತಾಲೂಕು ಗರಿಷ್ಠ ಕನಿಷ್ಠ
ಎಚ್.ಡಿ.ಕೋಟೆ 38.8 24.3
ಹುಣಸೂರು 37.9 24.0
ಕೆ.ಆರ್.ನಗರ 36.2 23.7
ಮೈಸೂರು 38.5 24.2
ನಂಜನಗೂಡು 39.1 24.0
ಪಿರಿಯಾಪಟ್ಟಣ 38.5 23.3
ಸಾಲಿಗ್ರಾಮ 38.6 24.0
ಸರಗೂರು 38.8 24.2
ತಿ.ನರಸೀಪುರ 39.3 25.5