ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಎಲ್. ಮೂರ್ತಿ ಎಸ್ಸಿ, ಎಸ್ಟಿ ಸಮುದಾಯಗಳ ಅಹವಾಲು ಆಲಿಸಿದರು. ಸಿ.ಎನ್. ಮಂಜೇಗೌಡ, ಯುಕೇಶ್ ಕುಮಾರ್ ಹಾಗೂ ಇತರರು ಇದ್ದರು.
ಮೈಸೂರು: ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಎಸ್ಸಿ, ಎಸ್ಟಿ ಸಮುದಾಯದ ಕುಂದುಕೊರತೆ ಆಲಿಸಲು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಸಮಸ್ಯೆಗಳ ಮಹಾಪೂರವೇ ಹರಿದು ಬಂತು.
ಪರಿಶಿಷ ಜಾತಿಯವರು ಮೃತಪಟ್ಟರೆ ಅಂತ್ಯಕ್ರಿಯೆ ನಡೆಸಲು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಸ್ಮಶಾನದ ವ್ಯವಸ್ಥೆ ಇಲ್ಲ. ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ಕೆಲವು ಕಡೆಗಳಲ್ಲಿ ಆಕ್ಷೇಪಗಳು ವ್ಯಕ್ತವಾಗುತ್ತಿದೆ. ಹೀಗಾಗಿ ಪ್ರತಿಯೊಂದು ಗ್ರಾಮಗಳಲ್ಲೂ ಎಸ್ಸಿ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನದ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂತು. ಆದಿವಾಸಿಗಳು ಅರಣ್ಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಅರಣ್ಯದಲ್ಲಿಯೇ ಸ್ಮಶಾನದ ವ್ಯವಸ್ಥೆ ಮಾಡಬೇಕು ಎಂದು ಆಯೋಗದ ಗಮನ ಸೆಳೆಯಲಾಯಿತು.
ಅಧಿಕಾರಿಗಳ ಗೈರಿಗೆ ಆಕ್ರೋಶ: ಸಭೆಗೆ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದರು. ಇದರಿಂದ ಆಕ್ರೋಶಗೊಂಡ ದಲಿತ ಮುಖಂಡರಾದ ಪುರುಷೋತ್ತಮ್, ನಾಗರಾಜ್ ಹಾಗೂ ಇತರರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದರು. ಅಧಿಕಾರಿಗಳು ಸಭೆಗೆ ಗೈರು ಹಾಜರಾಗುವ ಮೂಲಕ ಆಯೋಗಕ್ಕೆ ಅಗೌರವ ಸೂಚಿಸಿದ್ದಾರೆ. ಎಸ್ಸಿ, ಎಸ್ಟಿಗಳ ಸಮಸ್ಯೆಗಳನ್ನು ಆಲಿಸುವ ಸಭೆಗೆ ಗೈರು ಹಾಜರಾಗುವುದು ಸಹ ಅಸ್ಪಶ್ಯತೆಯ ಒಂದು ಭಾಗವಾಗಿದೆ. ಹೀಗಾಗಿ ಅಧಿಕಾರಿಗಳ ಗೈರು ಹಾಜರಿಯನ್ನು ಸಹಿಸಲು ಸಾಧ್ಯವಿಲ್ಲ ಎಂಬ ಆಕ್ರೋಶ ವ್ಯಕ್ತವಾಯಿತು. ಒಂದು ಹಂತದಲ್ಲಿ ಎಲ್ಲರು ಸಭೆಯನ್ನು ಬಹಿಷ್ಕರಿಸಲು ಮುಂದಾದಾಗ ಆಯೋಗದ ಅಧ್ಯಕ್ಷ ಎಲ್. ಮೂರ್ತಿ ಎಲ್ಲರನ್ನು ಸಮಾಧಾನ ಪಡಿಸುವ ಕಾರ್ಯ ಮಾಡಿದರು. ನಂತರ ಸಭೆಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಬಹುತೇಕ ಎಲ್ಲ ಅಧಿಕಾರಿಗಳು ಹಾಜರಾದರು.
ಅರಣ್ಯ ಹಕ್ಕು ಜಾರಿಗೊಳಿಸಿ: ಉತ್ತರ ಭಾರತದಲ್ಲಿ ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿಯಾಗಿದ್ದು, ಅಲ್ಲಿ ಅರಣ್ಯದ ನಡುವೆಯೇ ಆದಿವಾಸಿಗಳಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಭೂಮಿಯನ್ನು ಮಂಜೂರು ಮಾಡಲಾಗಿದೆ. ಆದರೆ, ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿಯಾಗಿಲ್ಲ. ಅರಣ್ಯ ಭೂಮಿಗಾಗಿ ಅರ್ಜಿ ಸಲ್ಲಿಸಿದ ಸಾಕಷ್ಟು ಜನರ ಅರ್ಜಿಗಳು ತಿರಸ್ಕೃತಗೊಂಡಿದೆ. ಕಾಯ್ದೆ ಪ್ರಕಾರ ಯಾವ ಕಾರಣಕ್ಕೆ ತಿರಸ್ಕೃಗೊಂಡಿದೆ ಎಂಬ ಮಾಹಿತಿಯನ್ನು ಅರ್ಜಿದಾರರಿಗೆ ನೀಡಬೇಕು. ಆದರೆ, ಜಿಲ್ಲೆಯ ಅಧಿಕಾರಿಗಳು ನಮಗೆ ಮಾಹಿತಿಯನ್ನೇ ನೀಡದೆ ನಮ್ಮ ಹಕ್ಕುಗಳಿಂದ ವಂಚಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಆದಿವಾಸಿ ಮುಖಂಡ ಕೃಷ್ಣಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ 661 ಹುದ್ದೆಗಳ ನೇಮಕಾತಿ ನಡೆದಿದ್ದು, ಇದರಲ್ಲಿ ಎಸ್ಸಿ, ಎಸ್ಟಿ ಸಮುದಾಯದವರನ್ನು ಕಡೆಗಣಿಸಲಾಗಿದೆ. ಅದೇ ರೀತಿ 16 ಪ್ರಾದೇಶಿಕ ನಿರ್ದೇಶಕರ ನೇಮಕಾತಿಯಲ್ಲಿ ಕೇವಲ ಒಬ್ಬರು ಎಸ್ಸಿ ಸಮುದಾಯದವರನ್ನು ನೇಮಕ ಮಾಡಲಾಗಿದೆ. ಈ ಅನ್ಯಾಯ ಸರಿಪಡಿಸಬೇಕು ಎಂದು ದಲಿತ ಮುಖಂಡ ಸೋಮಯ್ಯ ಮಲೆಯೂರು ಆಗ್ರಹಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷ ಎಲ್. ಮೂರ್ತಿ, ಈ ವಿಚಾರವನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲಿಯೇ ಆಯೋಗದ ನ್ಯಾಯಾಲಯಕ್ಕೆ ಮುಕ್ತ ವಿವಿ ಅಧಿಕಾರಿಗಳನ್ನು ಕರೆಯಿಸಿ ವಿಚಾರಣೆ ನಡೆಸಲಾಗುವುದು ಎಂದರು.
ಕೆ.ಆರ್. ನಗರ ತಾಲೂಕಿನ ಮಳಲಿ ಗ್ರಾಮದಲ್ಲಿ ದಲಿತ ಸಮುದಾಯದ 20 ಕುಟುಂಬಗಳಿಗೆ ಸರ್ಕಾರದಿಂದ ಭೂಮಿ ಮಂಜೂರಾಗಿತ್ತು. ಈ ಪೈಕಿ 10 ಕುಟುಂಬಗಳನ್ನು ಅರಣ್ಯ ಇಲಾಖೆಯು ಒಕ್ಕಲೆಬ್ಬಿಸಿದ್ದು, ಕೂಡಲೇ ಈ ಕುರಿತು ಕ್ರಮ ವಹಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಡಿಸಿಪಿ ಹರ್ಷ ಪ್ರಿಯಂವದಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಆಯೋಗದ ಕಾರ್ಯದರ್ಶಿ ಎಚ್.ಎಸ್. ಶಿವರಾಮು, ಸದಸ್ಯರಾದ ಎಲ್. ದಿವಾಕರ್, ಗೀತಾ ಹಾಗೂ ಇತರರು ಇದ್ದರು.