ವಿಜಯವಾಣಿ ಕೃಷಿ ಮೇಳ 
ಮೈಸೂರು

ವಿಜಯವಾಣಿ ‘ಕೃಷಿ ಮೇಳ’ಕ್ಕೆ ಮೈಸೂರು ಸಜ್ಜು

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಮಟ್ಟದ ‘ಕೃಷಿ ಮೇಳ’ಕ್ಕೆ ಭರದ ಸಿದ್ಧತೆ
  • ಮೈಸೂರಿನಲ್ಲಿ ಗರಿಬಿಚ್ಚಲಿದೆ ಕೃಷಿ ಸಂಸ್ಕೃತಿ
  • ಮೂರು ದಿನ ರೈತರಿಗೆ ಉಪಯುಕ್ತ ಮಾಹಿತಿ ಲಭ್ಯ
  • ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಆಯೋಜನೆ
ಮೈಸೂರು: ‘ಕನ್ನಡಿಗರ ಧ್ವನಿ’ ಆಗಿರುವ ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಮೇ 1ರಿಂದ ಮೂರು ದಿನ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ‘ಕೃಷಿ ಮೇಳ’ಕ್ಕೆ ಸಕಲ ತಯಾರಿಗಳು ಭರದಿಂದ ಸಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೃಷಿ ಸಂಸ್ಕೃತಿ ಗರಿಬಿಚ್ಚಲಿದೆ.
ವಿಜಯವಾಣಿ ಪತ್ರಿಕೆಯಿಂದ ಮೈಸೂರು ನಗರದಲ್ಲಿ ಆಯೋಜನೆ ಮಾಡಿರುವ 3ನೇ ಕೃಷಿ ಮೇಳ ಎಂಬ ಹಿರಿಮೆ ಹೊಂದಿದೆ. ಮೂರು ದಿನಗಳ ಕಾಲ ಬೇಸಾಯ ಸಂಸ್ಕೃತಿಗೆ ಸಾಕ್ಷಿಯಾಗುವ ಈ ಮೇಳಕ್ಕೆ ಕ್ಷಣಗಣನೆ ಶುರುವಾಗಿದ್ದು, ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜು ಮೈದಾನದಲ್ಲಿ ಸಿದ್ಧತೆಗಳು ಭರದಿಂದ ಸಾಗಿದೆ. 
ಎಲ್ಲರಿಗೂ ಮುಕ್ತ ಆಹ್ವಾನ ಇರುವ ಈ ಮೇಳವು ರೈತರು, ಕೃಷಿ ಪರಿಣಿತರು ಮತ್ತು ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತಿದೆ. ರಾಜ್ಯ ಸರ್ಕಾರ ಸಹಕಾರ ಮತ್ತು ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಮೈಸೂರು ವಿಶ್ವವಿದ್ಯಾಲಯವು ಮೇಳಕ್ಕೆ ಸಹಯೋಗ ನೀಡಿದೆ.
ಮೇಳದಲ್ಲಿ ವಿವಿಧ ಮಳಿಗೆಗಳನ್ನು ತೆರೆಯಲಾಗಿದೆ. ಸಮಗ್ರ ಕೃಷಿ, ಸಾವಯವ ಕೃಷಿ, ಆಧುನಿಕ ಬೇಸಾಯ, ಉತ್ತಮ ಬಿತ್ತನೆ ಬೀಜಗಳ, ಕೃಷಿ ಅನ್ವೇಷಣ ಇನ್ನಿತರ ಮಾಹಿತಿಗಳು ರೈತರಿಗೆ ದೊರೆಯಲಿವೆ. ಬೀಜ ಉತ್ಪಾದಿತ ರೈತರು ಮತ್ತು ಬೀಜ ಪೂರೈಕೆ ಮಾಡುವ ಪ್ರತಿನಿಧಿಗಳ ಸಮಾಗಮವೂ ಆಗಲಿದೆ. ಇದರೊಂದಿಗೆ ಕೃಷಿಯ ಸಂಕಷ್ಟಗಳ ಕುರಿತು ವಿಚಾರ ಮಂಥನವೂ ಆಗಲಿದೆ.
ಇದು ಕೃಷಿ ಉತ್ಸವದೊಂದಿಗೆ ಅವಕಾಶಗಳ ಹಬ್ಬವಾಗಿದೆ. ಮೆರವಣಿಗೆ, ಕೃಷಿ ತಜ್ಞರಿಂದ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಸಮೂಹ ನೃತ್ಯ, ಗೀತಗಾಯನ, ರಂಗೋಲಿ ಸ್ಪರ್ಧೆ, ದೇಸಿ ಆಟಗಳು ಹೀಗೆ ವಿವಿಧ ಚಟುವಟಿಕೆಗಳನ್ನು ಒಂದೇ ಸೂರಿನಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಸಾರ್ವಜನಿಕರಿಗೆ ದೊರೆಯಲಿದೆ.

ಮೆರವಣಿಗೆಯ ಮೆರುಗು:

‘ರೈತರ ಅಭಿವೃದ್ಧಿಗೆ ನಮ್ಮ ಕೊಡುಗೆ’ ಆಶಯದೊಂದಿಗೆ ಹಮ್ಮಿಕೊಂಡಿರುವ ಮೇಳದ ಅಂಗವಾಗಿ ಮೆರವಣಿಗೆ ಏರ್ಪಡಿಸಿದ್ದು, ಮೇ 1ರಂದು ಬೆಳಗ್ಗೆ 8ಕ್ಕೆ ನಗರದ ಸುಣ್ಣದಕೇರಿಯ ಮಹದೇಶ್ವರಸ್ವಾಮಿ ದೇವಸ್ಥಾನ ಮುಂಭಾಗದಿಂದ ಮೇಳ ನಡೆಯಲಿರುವ ಮಹಾರಾಜ ಕಾಲೇಜು ಮೈದಾನದವರೆಗೆ ಮೆರವಣಿಗೆ ನಡೆಯಲಿದೆ.
 ಶಾಸಕ ಟಿ.ಎಸ್.ಶ್ರೀವತ್ಸ ಚಾಲನೆ ನೀಡುವರು. ಅಲಂಕೃತ ಹಳ್ಳಿಕಾರ ‘ಬಸವ’, 5 ಅಲಂಕೃತ ಎತ್ತಿನ ಗಾಡಿಗಳು ಆಕರ್ಷಣೆ, ನಗಾರಿ ತಂಡ, ಪೂಜಾ ಕುಣಿತ ತಂಡ, ಮಹಿಳಾ ಕೋಲಾಟ, ಕಂಸಾಳೆ ಹಾಗೂ ಡೊಳ್ಳು ಕಲಾತಂಡಗಳು ಮೆರುಗು ನೀಡಲಿವೆ.

ಉಪಮುಖ್ಯಮಂತ್ರಿಯಿಂದ ಉದ್ಘಾಟನೆ

ಬಳಿಕ ಬೆಳಗ್ಗೆ 10.30ಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೃಷಿ ಮೇಳವನ್ನು ಉದ್ಘಾಟಿಸುವರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆ ವಹಿಸುವರು. ವಿಆರ್‌ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. 
ಕೃಷಿ ಮೇಳದ ಹಿನ್ನೆಲೆಯಲ್ಲಿ ವಿಜಯವಾಣಿ ಹೊರತಂದಿರುವ ‘ನೇಗಿಲಯೋಗಿ’ ವಿಶೇಷ ಸಂಚಿಕೆಯನ್ನು ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಿಡುಗಡೆಗೊಳಿಸುವರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜಾನುವಾರು ಪ್ರದರ್ಶನ ಉದ್ಘಾಟಿಸುವರು. 
ಕೃಷಿ ಮಳಿಗೆಗಳನ್ನು ಪಶುಸಂಗೋಪನಾ, ರೇಷ್ಮೆ ಸಚಿವ ಕೆ.ವೆಂಕಟೇಶ್ ಉದ್ಘಾಟಿಸುವರು. ಜಿಲ್ಲೆಯ ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಮೊದಲ ದಿನ ಮೇ 1 ರಂದು ಮಧ್ಯಾಹ್ನ 2 ಗಂಟೆಗೆ ‘ಅಮೆರಿಕ, ಯುರೋಪ್ ಒಕ್ಕೂಟದೊಂದಿಗೆ ಭಾರತ ಇತ್ತೀಚೆಗೆ ಮಾಡಿಕೊಂಡಿರುವ ಒಪ್ಪಂದದ ಸಾಧಕ-ಬಾಧಕಗಳು’ ಕುರಿತು 1ನೇ ವಿಚಾರ ಗೋಷ್ಠಿ ನಡೆಯಲಿದೆ. 
ಮೇ 2ರಂದು ಬೆಳಗ್ಗೆ 11ಕ್ಕೆ ‘ಕೃಷಿ ಪದ್ಧತಿಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ ಮತ್ತು ಮಹತ್ವದ’ ಕುರಿತು 2ನೇ ವಿಚಾರಗೋಷ್ಠಿ ಏರ್ಪಡಿಸಲಾಗಿದೆ. ಮೇ 3ರಂದು ಬೆಳಗ್ಗೆ 11ಕ್ಕೆ ‘ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ರಫ್ತು ಅವಕಾಶಗಳು’ ಕುರಿತು 3ನೇ ಗೋಷ್ಠಿಯನ್ನು ಆಯೋಜಿಸಲಾಗಿದೆ.
ಕೃಷಿ ಸಂಬಂಧಿಸಿದ ತಜ್ಞರು, ವಿಜ್ಞಾನಿಗಳು, ರೈತರು, ಕೃಷಿಉದ್ಯಮಿಗಳು ವಿಷಯ ಮಂಡಿಸಿ ವಿಚಾರಮಂಥನ ನಡೆಸಲಿದ್ದಾರೆ. ಮೇ 3ರಂದು 10 ಕೃಷಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ.


ಸಾಂಸ್ಕೃತಿಕ ವೈಭವ: 

ಕೃಷಿ ಮೇಳದಲ್ಲಿ ಸಾಂಸ್ಕೃತಿಕ ಕಲರವ ಸಹ ಮೇಳೈಸಲಿದೆ. ಮೊದಲ ದಿನ ಬೆಳಗ್ಗೆ 9ರಿಂದ 11ರ ವರೆಗೆ ಸುಗಮ ಸಂಗೀತ ಗೀತಗಾಯನ, ಸಂಜೆ 4ರಿಂದ ರಾತ್ರಿ 10ರವರೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ರಸದೌತಣ ಉಣಬಡಿಸಲಿದೆ. 
ಭರತನಾಟ್ಯ, ಗೀತವೈವಿಧ್ಯ, ಗೀತ ಗಾಯನ, ಸಿನಿಮಾ ಕರೋಕೆ ಗಾಯನ, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ತಂಡದಿಂದ ಸುಗಮಸಂಗೀತ ಕಾರ್ಯಕ್ರಮ ಸಭಿಕರನ್ನು ರಂಜಿಸಲಿದೆ. 
ಮೇ 2ರಂದು ಜಾನದಪ ಗೀತೆಗಳ ಗಾಯನ, ಅರೆಭಾಷೆ ಸಂಸ್ಕೃತಿ ವೈಭವ, ಕರೋಕೆ ಗಾಯನ, ಜಾನಪದ ಗಾಯನ, ಗಾಯಕರಾದ ನಿತಿನ್ ರಾಜಾರಾಮ್ ಶಾಸ್ತ್ರಿ, ದಿವ್ಯ ಸಚ್ಚಿದಾನಂದ ಒಳಗೊಂಡ ತಂಡವು ಸುಗಮ ಸಂಗೀತ ಪ್ರಸ್ತುತಪಡಿಸಲಿದೆ. ಕೊನೆಯ ದಿನವಾದ ಮೇ 3ರಂದು ವೀರಗಾಸೆ, ಮಾದಪ್ಪನ ಕುರಿತು ಗಾಯನ, ಗೀತ ಗಾಯನ, ಜಾನಪದ ಯುವ ಸಂಭ್ರಮ, ಜಾನಪದ ಸಂಗೀತ ವೈಭವ ಸಭಿಕರನ್ನು ರಂಜಿಸಲಿದೆ.

ದೇಸಿ ಆಟಗಳ ಕಲರವ:

ದೇಸಿ ಆಟ ಸಂಭ್ರಮದ ಮೇಳದ ಮತ್ತೊಂದು ವಿಶೇಷ. ರೈತರು, ಮಕ್ಕಳು, ಸಾರ್ವಜನಿಕರಿಗೆ ಪ್ರತ್ಯೇಕವಾಗಿ ವಿವಿಧ ಕ್ರೀಡಾ ಸ್ಪರ್ಧೆ ಏರ್ಪಡಿಸಲಾಗಿದೆ. 
ಪುರುಷರಿಗೆ ಬಾಳೆ ಹಣ್ಣು ತಿನ್ನುವ ಸ್ಪರ್ಧೆ, ಒಂಟಿಕಾಲಿನ ಓಟ, ಗೋಣಿಚೀಲ ಓಟ, ಲಗೋರಿ ಸ್ಪರ್ಧೆ, ಮಹಿಳೆಯರಿಗೆ ಬಾಳೆಹಣ್ಣು ತಿನ್ನುವ, ಲೆಮನ್ ಆ್ಯಂಡ್ ಸ್ಪೂನ್, ರಂಗೋಲಿ, ರಾಗಿ ಬೀಸುವ ಸ್ಪರ್ಧೆ, ಅಳಗುಳಿ ಮನೆ, ಕೇಶಾಲಂಕಾರ ಸ್ಪರ್ಧೆ, ಒಂಟಿ ಕಾಲಿನ ಓಟ, ಮಕ್ಕಳಿಗಾಗಿ ಸ್ಕಿಪ್ಪಿಂಗ್, ವೇಷಭೂಷಣ, ಸ್ಲೋ ಸೈಕ್ಲಿಂಗ್ ಸ್ಪರ್ಧೆ ಆಯೋಜಿಸಲಾಗಿದೆ.
ಜಾನುವಾರು ಪ್ರದರ್ಶನ: ಜಾನುವಾರು, ಕೋಳಿ, ಬಾತುಕೋಳಿ, ಬಂಡೂರು ಕುರಿ ಸೇರಿದಂತೆ ವಿವಿಧ ತಳಿಯ ಕುರಿಗಳ ಪ್ರದರ್ಶನದ ಜತೆಗೆ, ಹೊಸ ತಳಿಯ ಜಾನುವಾರುಗಳ ಪ್ರದರ್ಶನವೂ ಇರಲಿದೆ.

ಆಹಾರ ಮೇಳ: 

ಪ್ರದರ್ಶನ ವೀಕ್ಷಣೆ, ವಿಚಾರ-ಮಂಥನ, ಸಾಂಸ್ಕೃತಿಕ ಕಾರ್ಯಕ್ರಮ ಸೊಬಗು ಸವಿಯುವುದರೊಂದಿಗೆ ಆಹಾರ ರುಚಿಯನ್ನು ಆಸ್ವಾದಿಸಬಹುದು. ತರೇಹವಾರಿ ತಿನಿಸು ಮಾರಾಟ ಮಾಡುವ ಅಂಗಡಿಗಳು ಗ್ರಾಹಕರನ್ನು ಕೈಬಿಸಿ ಕರೆಯಲಿವೆ.